ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ; ಬಂಟ್ವಾಳದಲ್ಲಿ ಯೋಗಿ ಆದಿತ್ಯನಾಥ ರೋಡ್ ಷೋ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬಂಟ್ವಾಳ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಿ.ಸಿ. ರೋಡ್‌ನಲ್ಲಿ ಗುರುವಾರ ಸಂಜೆ ರೋಡ್ ಷೋ ನಡೆಸಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಪರ ಮತ ಯಾಚಿಸಿದರು.

ಇಲ್ಲಿನ ಕೈಕಂಬ ಪೊಳಲಿ ದ್ವಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರೆದ ವಾಹನದ ಮೂಲಕ ಸಾಗಿದರು. ಬಿ.ಸಿ. ರೋಡ್ ಮುಖ್ಯವೃತ್ತ ಸಮೀಪದ ಜೋಡುಮಾರ್ಗ ಉದ್ಯಾನದವರೆಗೆ ಸಾಗಿ ಬಂದ ರೋಡ್ ಷೋ, ಬಳಿಕ ಇಲ್ಲಿನ ಮೈದಾನದಲ್ಲಿ ತೆರೆಕಂಡಿತು.

ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರಿಂದ ಜೈಕಾರ, ಚೆಂಡೆ ವಾದನ, ಚಿಲಿಪಿಲಿ ಗೊಂಬೆ ನೃತ್ಯ ವಿಶೇಷ ಮೆರುಗು ನೀಡಿತು. ಮಹಿಳೆಯರ ಸಹಿತ ಅಪಾರ ಮಂದಿ ಪಾಲ್ಗೊಂಡರು. ಇದೇ ವೇಳೆ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಮುಖಂಡರಿಗೆ ಜೈಕಾರ ಹಾಕಿದರು. ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪತ್ನಿ ಕಮಲಾ ಭಟ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮತ್ತಿತರರು ಇದ್ದರು.

ರೈ ಕಾರಿನ ಬಳಿ ಜೈಕಾರ
ಬಿ.ಸಿ.ರೋಡ್- ಕೈಕಂಬ ಪೊಳಲಿ ದ್ವಾರದ ಬಳಿ ರೋಡ್ ಷೋ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ಕಾರು ಇದೇ ರಸ್ತೆಯಲ್ಲಿ ಸಾಗಿ ಬಂತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಸಚಿವ ರೈ ಅವರ ಜತೆಗೆ ಮಾತನಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ನೀರಿನ ಖಾಲಿ ಬಾಟಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.‌ ಮಾತ್ರವಲ್ಲದೆ, ಸಚಿವರ ಕಾರಿನ ಸುತ್ತಲೂ ಮೋದಿ, ಮೋದಿ ಎನ್ನುತ್ತಾ ಜೈಕಾರ ಕೂಗಿದರು.

ಪೊಲೀಸರು ಮಧ್ಯ ಪ್ರವೇಶಿಸಿ, ಕಾರು ಮುಂದೆ ತೆರಳಲು ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT