ಬೆಂಗಳೂರು: ಹೆಚ್ಚಿನ ವಯೋಮಿತಿಯ ಆಟಗಾರರನ್ನು ಕಣಕ್ಕಿಳಿಸಿದ ಕಾರಣ 63ನೇ ಸುಬ್ರತೊ ಕಪ್ ಸಬ್ ಜೂನಿಯರ್ ಬಾಲಕರ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಿಂದ ಮೂರು ತಂಡಗಳನ್ನು ಅನರ್ಹಗೊಳಿಸಲಾಗಿದೆ.
ಈ ಟೂರ್ನಿ ಸೋಮವಾರ ಆರಂಭವಾಯಿತು. ಅಸ್ಸಾಮಿನ ದಿಮಾ ಹಸಾವೊದ ನಝರೆತ್ ಮಾಡೆಲ್ ಹೈಸ್ಕೂಲ್, ಬಿಹಾರದ ಜಮುಯಿಯ ನೆಹರೂ ಪಬ್ಲಿಕ್ ಸ್ಕೂಲ್ ಮತ್ತು ಮಣಿಪುರದ ವಿಷ್ಣಪುರದ ಉಲ್ತೌ ಸರ್ಕಾರಿ ಮಾದರಿ ಹೈಸ್ಕೂಲ್ ತಂಡಗಳನ್ನು ಟೂರ್ನಿಯಿಂದ ಹೊರಗಟ್ಟಲಾಯಿತು.
ಈ ಬಗ್ಗೆ ಸುಬ್ರತೊ ಮುಖರ್ಜಿ ಸ್ಪೋರ್ಟ್ಸ್ ಎಜುಕೇಷನ್ ಸೊಸೈಟಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೂರು ತಂಡಗಳು ಹೆಚ್ಚಿನ ವಯೋಮಿತಿಯ ನಾಲ್ವರು ಆಟಗಾರರನ್ನು ಕಣಕ್ಕಿಳಿಸಿದ್ದವು ಎಂದು ಈ ಹೇಳಿಕೆ ತಿಳಿಸಿದೆ.
ಎಐಎಫ್‌ಎಫ್ ನಿಗದಿಪಡಿಸಿರುವ ಟೂರ್ನಿಯ ನಿಯಮಗಳಂತೆ ಮೂಳೆ ಪರೀಕ್ಷೆ ಮೂಲಕ ವಯೋಮಿತಿ ದೃಢೀಕರಿಸಲಾಯಿತು.
ಈ ಮೂರು ತಂಡಗಳು ಮೊದಲ ದಿನ ಆಡಿದ ಪಂದ್ಯಗಳನ್ನು ಅನೂರ್ಜಿತಗೊಳಿಸಲಾಯಿತು.
ಮಿಜೋರಂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಶಾಲಾ ತಂಡಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರ ಫಲಿತಾಂಶ ಮಂಗಳವಾರ ಲಭ್ಯವಾಗಲಿದೆ.
ಹೋದ ಆವೃತ್ತಿಯಲ್ಲಿ 16 ತಂಡಗಳನ್ನು ವಯೋಮಿತಿ ಉಲ್ಲಂಘಿಸಿ ಆಟಗಾರರನ್ನು ಆಡಿಸಿದ್ದಕ್ಕೆ ಅನರ್ಹಗೊಳಿಸಲಾಗಿತ್ತು.