ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಮಹಿಳಾ ಫುಟ್‌ಬಾಲ್‌ನಲ್ಲಿ ಕೆನಡಾ ‘ಚಿನ್ನ’

Last Updated 6 ಆಗಸ್ಟ್ 2021, 18:49 IST
ಅಕ್ಷರ ಗಾತ್ರ

ಯೊಕೊಹಾಮ: ಕೆನಡಾ ಮಹಿಳಾ ತಂಡದವರು ಒಲಿಂಪಿಕ್ಸ್‌ ಫುಟ್‌ಬಾಲ್‌ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ರೋಚಕತೆ ಕಂಡುಬಂದ ಫೈನಲ್‌ ಹಣಾಹಣಿಯಲ್ಲಿ ಕೆನಡಾ ವನಿತೆಯರು ಸ್ವೀಡನ್‌ ಸವಾಲು ಮೀರಿದರು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ ಕೆನಡಾ ಆಟಗಾರ್ತಿಯರು ಮೋಡಿ ಮಾಡಿದರು. ಈ ತಂಡ ಮೂರು ಬಾರಿ ಚೆಂಡನ್ನು ಗುರಿ ಸೇರಿಸಿತು. ಸ್ವೀಡನ್‌ ತಂಡದ ಆಟಗಾರ್ತಿಯರು ಎರಡು ಬಾರಿ ಗೋಲು ದಾಖಲಿಸಿದರು.‌

ಕೆನಡಾ ತಂಡದ ಗೋಲ್‌ಕೀಪರ್‌ ಸ್ಟೆಫಾನಿ ಲಾಬೆ ಎದುರಾಳಿಗಳ ಎರಡು ಸ್ಪಾಟ್‌ಕಿಕ್‌ ಪ್ರಯತ್ನಕ್ಕೆ ಅಡ್ಡಿಯಾದರು. ಆ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನೂ ನಿಭಾಯಿಸಿದರು.

ಒಲಿಂಪಿಕ್ಸ್‌ ಫುಟ್‌ಬಾಲ್‌ನಲ್ಲಿ ಕೆನಡಾ ಜಯಿಸಿದ ಮೊದಲ ಚಿನ್ನ ಇದು. ಹೀಗಾಗಿ ಪಂದ್ಯ ಗೆದ್ದ ಕೂಡಲೇ ಆಟಗಾರ್ತಿಯರು ಖುಷಿಯ ಕಡಲಲ್ಲಿ ತೇಲಿದರು. ಪರಸ್ಪರರನ್ನು ಅಪ್ಪಿಕೊಂಡು ನಲಿದಾಡಿದರು. ಒಬ್ಬರ ಮೇಲೊಬ್ಬರು ಬಿದ್ದು ಹೊರಳಾಡಿದರು. ವಿಜಯ ವೇದಿಕೆಯಲ್ಲೂ ಸಂಭ್ರಮ ಮೇಳೈಸಿತ್ತು.

ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಈ ತಂಡವು ಕಂಚಿನ ಪದಕ ಜಯಿಸಿದ ಸಾಧನೆ ಮಾಡಿತ್ತು.

ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ ಅಂಗಳಕ್ಕಿಳಿದಿದ್ದ ಸ್ವೀಡನ್‌, ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿತು. 34ನೇ ನಿಮಿಷದಲ್ಲಿ ಈ ತಂಡದ ಸ್ಟಿನಾ ಬ್ಲಾಕ್‌ಸ್ಟಿನಿಯಸ್‌ ಕಾಲ್ಚಳಕ ತೋರಿದರು. ದ್ವಿತೀಯಾರ್ಧದಲ್ಲಿ ಕೆನಡಾ ತಂಡ ತಿರುಗೇಟು ನೀಡಿತು. 67ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಜೆಸ್ಸಿ ಫ್ಲೆಮಿಂಗ್‌ ಚೆಂಡನ್ನು ಗುರಿ ಮುಟ್ಟಿಸಿ 1–1 ಸಮಬಲಕ್ಕೆ ಕಾರಣರಾದರು.

ಬಳಿಕ ಸ್ವೀಡನ್‌ ಆಟಗಾರ್ತಿಯರು ಆಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದರು. ಹೀಗಿದ್ದರೂ ಈ ತಂಡಕ್ಕೆ ಗೆಲುವಿನ ಗೋಲು ಗಳಿಸಲು ಆಗಲಿಲ್ಲ.

ಮಹಿಳಾ ಫುಟ್‌ಬಾಲ್‌ನ ಕಂಚಿನ ಪದಕ ಅಮೆರಿಕ ತಂಡದ ಪಾಲಾಗಿತ್ತು. ಗುರುವಾರ ನಡೆದಿದ್ದ ಪಂದ್ಯದಲ್ಲಿ ಅಮೆರಿಕ ತಂಡದವರು ಆಸ್ಟ್ರೇಲಿಯಾ ವನಿತೆಯರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT