ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ

7
ಸ್ವೀಡನ್‌ಗೆ ಸೋಲುಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲಿಷ್‌ ಪಡೆ

ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ

Published:
Updated:

ಸಮಾರ. ರಷ್ಯಾ: ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ಇಂಗ್ಲೆಂಡ್ ತಂಡವು ತನ್ನ ಅಭ್ಯಾಸದ ಸಂದರ್ಭದಲ್ಲಿ ಕಬಡ್ಡಿ ಆಡಿ ದೊಡ್ಡ ಸುದ್ದಿ ಮಾಡಿತ್ತು. ಕಬಡ್ಡಿ ಆಟದಲ್ಲಿ ಕಂಡು ಬರುವ ಜಿಗುಟುತನ, ದಿಟ್ಟ ಹೋರಾಟವನ್ನೇಲ್ಲ ಫುಟ್‌ಬಾಲ್‌ನಲ್ಲಿ ಬಳಸಿಕೊಂಡ ಇಂಗ್ಲಿಷ್ ಪಡೆಯು ಈಗ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.

ಶನಿವಾರ ರಾತ್ರಿ ಸಮಾರ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹ್ಯಾರಿ ಮಗೈರ್ ಮತ್ತು ಡೆಲೆ ಅಲ್ಲಿ ಅವರು ಹೊಡೆದ ತಲಾ ಒಂದು ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡವು 2–0 ಗೋಲುಗಳಿಂದ ಸ್ವೀಡನ್‌ ತಂಡವನ್ನು ಸೋಲಿಸಿತು.

ಟೂರ್ನಿಯುದ್ದಕ್ಕೂ ಮಿಂಚಿದ್ದ ಹ್ಯಾರಿ ಕೇನ್ ಈ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ. ಸ್ವೀಡನ್ ತಂಡದ ರಕ್ಷಣಾ ಆಟಗಾರರು ಅವರನ್ನು ಕಟ್ಟಿಹಾಕಲು ಮಾಡಿದ್ದ ಯೋಜನೆಯ ಸಫಲರಾದರು. ಆದರೆ ಇದನ್ನು ಮೊದಲೇ ಊಹಿಸಿದ್ದ ಇಂಗ್ಲೆಂಡ್ ಕೋಚ್ ಗರೆತ್ ಸೌತ್‌ ಗೇಟ್ ಬೇರೆಯದೇ ತಂತ್ರ ಹೆಣೆದಿದ್ದರು. ಅದನ್ನು ಹ್ಯಾರಿ ಮಗೈರ್‌ (33ನೇ ನಿಮಿಷ) ಕಾರ್ಯಗತ ಗೊಳಿಸಿದರು. ಎದುರಾಳಿ ತಂಡದ ಆಟಗಾರರು ಹ್ಯಾರಿ ಕೇನ್ ಅವರ ಸುತ್ತುವರಿದಿದ್ದನ್ನು ಮನಗಂಡ ಮಗೈರ್‌ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ಆಟಗಾರರು ಚುಟುಕು ಪಾಸ್‌ಗಳ ಮೂಲಕ ಸ್ವೀಡನ್ ತಂಡದ ಒತ್ತಡ ಹೆಚ್ಚಿಸಿದರು. ಫಿಫಾ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ  ಇಂಗ್ಲೆಂಡ್ ತಂಡದ ಸ್ಟ್ರೈಕರ್‌ಗಳು ಮತ್ತಷ್ಟು ಚುರುಕಿನಿಂದ ದಾಳಿ ನಡೆಸಿದರು. ಈ ಹಂತದಲ್ಲಿ ಒರಟು ಆಟ ಪ್ರದರ್ಶಿಸಿದ ಸ್ವೀಡನ್ ತಂಡದ ಇಬ್ಬರು ಆಟಗಾರರು ಹಳದಿ ಕಾರ್ಡ್‌ ದರ್ಶನ ಮಾಡಬೇಕಾಯಿತು.

59ನೇ ನಿಮಿಷದಲ್ಲಿ ಡೆಲೆ ಅಲಿ ಅವರು ಕಾಲ್ಚಳಕ ಮೆರೆದರು. ಮೂವರು ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಕಣ್ಣು ತಪ್ಪಿಸಿದ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಇಂಗ್ಲೆಂಡ್ 2–0 ಮುನ್ನಡೆ ಸಾಧಿಸಿತು. ನಂತರದ ಅವಧಿಯಲ್ಲಿ ಸ್ವೀಡನ್ ತಂಡವು ಗೋಲು ಗಳಿಸಲು ಮಾಡಿದ ಪ್ರಯತ್ನಗಳಿಗೆ ಅಡ್ಡಗಾಲು ಹಾಕುವಲ್ಲಿಯೂ ಇಂಗ್ಲೆಂಡ್ ರಕ್ಷಣಾ ಪಡೆ ಸಫಲವಾಯಿತು. ಇಂಗ್ಲೆಂಡ್ ತಂಡದ ಗೋಲ್‌ಕೀಪರ್ ಪಿಕ್‌ಫೋರ್ಡ್‌ ಅವರ ಅಮೋಘ ಆಟವು  ಮೇಲುಗೈ ಸಾಧಿಸಿತು.  ತಮ್ಮ ಎರಡೂ ಬದಿಗೆ ಅವರು ಡೈವ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆಯುತ್ತಿದ್ದ ರೀತಿಯು ಆಕರ್ಷಕವಾಗಿತ್ತು. ಇದರಿಂದಾಗಿ ಸ್ವೀಡನ್‌ ತಂಡಕ್ಕೆ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ.

ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್ ತಂಡವು ಸ್ವಿಟ್ಜರ್‌ಲೆಂಡ್ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. ಆದರೆ ನಾಲ್ಕರ ಘಟ್ಟಕ್ಕೆ ಹೋಗುವ ತಂಡದ ಆಸೆ ಕಮರಿತು. ಪಂದ್ಯದ ನಂತರ ತಂಡದ ಆಟಗಾರರು ಕಣ್ಣೀರು ಸುರಿಸುತ್ತ ಕುಸಿದು ಕುಳಿತರು.


ಸ್ವೀಡನ್‌ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ ಬಗೆ -ರಾಯಿಟರ್ಸ್‌ ಚಿತ್ರ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !