ರೊನಾಲ್ಡೊ–ಸ್ವಾರೆಜ್‌ ಜಿದ್ದಾಜಿದ್ದಿ

7

ರೊನಾಲ್ಡೊ–ಸ್ವಾರೆಜ್‌ ಜಿದ್ದಾಜಿದ್ದಿ

Published:
Updated:

ಮಾಸ್ಕೊ : ಎರಡು ಬಾರಿಯ ಚಾಂಪಿಯನ್‌ ಉರುಗ್ವೆ ಮತ್ತು ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಪೋರ್ಚುಗಲ್‌ ತಂಡಗಳು 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಹದಿನಾರರ ಹಂತದ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.

ಫಿಶ್ತ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಈ ಹೋರಾಟದತ್ತ ಈಗ ಫುಟ್‌ಬಾಲ್‌ ಪ್ರಿಯರ ಚಿತ್ತ ನೆಟ್ಟಿದೆ.

ಫುಟ್‌ಬಾಲ್‌ ಲೋಕದ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೂಯಿಸ್‌ ಸ್ವಾರೆಜ್‌ ಅವರು ಈ ಪಂದ್ಯದ ಆಕರ್ಷಣೆಯಾಗಿದ್ದಾರೆ. ಇವರ ಮುಖಾಮುಖಿ ಪಂದ್ಯದ ಬಗೆಗಿನ ಕುತೂಹಲ ಹೆಚ್ಚುವಂತೆ ಮಾಡಿದೆ.

ಪೋರ್ಚುಗಲ್‌ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬಲಿಷ್ಠ ಸ್ಪೇನ್‌ ಎದುರು 3–3 ಗೋಲುಗಳಿಂದ ಡ್ರಾ ಸಾಧಿಸಿತ್ತು. ಈ ಪಂದ್ಯದಲ್ಲಿ ರೊನಾಲ್ಡೊ ‘ಹ್ಯಾಟ್ರಿಕ್‌’ ಗೋಲು ದಾಖಲಿಸಿ ಅಭಿಮಾನಿಗಳ ಮನ ಗೆದ್ದಿದ್ದರು. ಎರಡನೇ ಪಂದ್ಯದಲ್ಲಿ ಈ ತಂಡ 1–0 ಗೋಲಿನಿಂದ ಮೊರೊಕ್ಕೊ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲೂ ರೊನಾಲ್ಡೊ ಕಾಲ್ಚಳಕ ತೋರಿದ್ದರು.

ನಿರ್ಣಾಯಕ ಎನಿಸಿದ್ದ ಮೂರನೇ ಹೋರಾಟದಲ್ಲಿ ಪೋರ್ಚುಗಲ್‌ 1–1 ಗೋಲುಗಳಿಂದ ಇರಾನ್‌ ವಿರುದ್ಧ ಡ್ರಾ ಮಾಡಿಕೊಂಡಿತ್ತು.

ನಾಯಕ ರೊನಾಲ್ಡೊ ಮೇಲೆ ‍ಪೋರ್ಚುಗಲ್‌ ತಂಡ ಹೆಚ್ಚು ಅವಲಂಬಿತವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ನಾಲ್ಕು ಗೋಲುಗಳನ್ನು ದಾಖಲಿಸಿರುವ ಕ್ರಿಸ್ಟಿಯಾನೊ, ಉರುಗ್ವೆ ತಂಡದ ರಕ್ಷಣಾ ವಿಭಾಗಕ್ಕೂ ಸವಾಲೊಡ್ಡಬಲ್ಲರು.

ಪೋರ್ಚುಗಲ್‌ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರುವಲ್ಲಿ ವಿಫಲಾಗಿದೆ. ಹೀಗಾಗಿ ಅಲ್ವೆಸ್‌, ಸೋರೆಸ್‌, ಫಾಂಟೆ, ಪೆಪೆ ಮತ್ತು ಗುಯಿರೆರೊ ಅವರ ಮೇಲೆ ಹೆಚ್ಚಿನ ಒತ್ತಡ ಇದೆ.

ಮಿಡ್‌ಫೀಲ್ಡರ್‌ಗಳಾದ ಆ್ಯಡ್ರಿಯನ್‌ ಸಿಲ್ವ, ಫರ್ನಾಂಡೀಸ್‌, ಮರಿಯೊ, ಮೌಟಿನ್ಹೊ ಮತ್ತು ಕಾರ್ವಲ್ಹೊ ಅವರೂ ಕಾಲ್ಚಳಕ ತೋರಬೇಕಿದೆ.

ಮುಂಚೂಣಿ ವಿಭಾಗದಲ್ಲಿ ಆಡುವ ಆ್ಯಂಡ್ರೆ ಸಿಲ್ವ, ಮಾರ್ಟಿನ್ಸ್‌ ಮತ್ತು ಗುಯೆಡೆಸ್‌ ಅವರು ಉರುಗ್ವೆ ತಂಡದ ರಕ್ಷಣಾ ವ್ಯೂಹವನ್ನು ಭೇದಿಸಿ ಗೋಲುಗಳಿಸುವ ವಿಶ್ವಾಸ ಹೊಂದಿದ್ದಾರೆ.

ವಿಶ್ವಾಸದಲ್ಲಿ ಉರುಗ್ವೆ: ಗುಂಪು ಹಂತದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲೂ ಗೆದ್ದಿರುವ ಉರುಗ್ವೆ ತಂಡ ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದೆ.

ಮೊದಲ ಪಂದ್ಯದಲ್ಲಿ ಈಜಿಪ್ಟ್‌ ಸವಾಲು ಮೀರಿದ್ದ ಉರುಗ್ವೆ ತಂಡ, ನಂತರದ ಹಣಾಹಣಿಗಳಲ್ಲಿ ಸೌದಿ ಅರೇಬಿಯಾ ಮತ್ತು ರಷ್ಯಾ ತಂಡಗಳನ್ನು ಮಣಿಸಿತ್ತು.

ಸ್ವಾರೆಜ್‌ ಮತ್ತು ಕ್ಯಾವಾನಿ ಅವರು ಈ ತಂಡದ ಆಧಾರ ಸ್ಥಂಭಗಳಾಗಿದ್ದಾರೆ. ಈ ತಂಡ ರಕ್ಷಣಾ ವಿಭಾಗದಲ್ಲೂ ಶಕ್ತಿಶಾಲಿಯಾಗಿದೆ. ಗುಂಪು ಹಂತದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಡದಿರುವುದೇ ಇದಕ್ಕೆ ಸಾಕ್ಷಿ.

ಉರುಗ್ವೆ ತಂಡ ಈ ಪಂದ್ಯದಲ್ಲಿ 4–4–2ರ ಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !