ಭಾನುವಾರ, ಸೆಪ್ಟೆಂಬರ್ 20, 2020
22 °C

ಸ್ವದೇಶಿ ಕೋಚ್ ನೇಮಕ ನಿರ್ಧಾರ: ವೆಂಕಟೇಶ್ ಸಂತಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ದೇಶಿ ಮುಖ್ಯ ಕೋಚ್ ನೇಮಕ ಮಾಡುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ನಿರ್ಧಾರವನ್ನು ಭಾರತ ತಂಡದ ಸಹಾಯಕ ಕೋಚ್ ಮತ್ತು ಮಾಜಿ ನಾಯಕ ವೆಂಟಕೇಶ್ ಷಣ್ಮುಗಂ ಸ್ವಾಗತಿಸಿದ್ದಾರೆ. ಭಾರತದ ಪ್ರಮುಖ ಕ್ಲಬ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಈ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ದೇಶದಲ್ಲೇ ಬೆಳೆದ ಕೋಚ್‌ಗಳನ್ನು ಎಐಎಫ್‌ಎಫ್ ಮುಂದಿನ ಐದು ವರ್ಷಗಳ ಒಳಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಿದೆ’ ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಈಚೆಗೆ ಪ್ರಕಟಿಸಿದ್ದರು.

’ಫೆಡರೇಷನ್‌ ಇಂಥ ನಿರ್ಧಾರ ಪ್ರಕಟಿಸಿದ್ದು ಖುಷಿಯ ವಿಷಯ. ಇಂಡಿಯನ್ ಸೂಪರ್ ಲೀಗ್ ಮತ್ತು ಐ–ಲೀಗ್‌ನಲ್ಲಿ ಸಮರ್ಥ ಯುವ ಕೋಚ್‌ಗಳು ಇದ್ದಾರೆ. ಐದು ವರ್ಷಗಳ ಒಳಗೆ ಅವರು ಇನ್ನಷ್ಟು ಸಮರ್ಥರಾಗಲಿದ್ದಾರೆ. ದೇಶದ ಕೋಚ್‌ಗಳು ಫುಟ್‌ಬಾಲ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಕಾಲ ಕಾಲದಲ್ಲಿ ನವೀಕರಿಸಿಕೊಳ್ಳುತ್ತಿರಬೇಕು’ ಎಂದು ಎಐಎಫ್ಎಫ್ ಟಿವಿ ಜೊತೆ ನಡೆಸಿದ ಸಂವಾದದಲ್ಲಿ ಅವರು ಹೇಳಿದರು.

‘ದೇಶಿ ಕೋಚ್‌ಗಳನ್ನು ನೇಮಕ ಮಾಡುವುದು ಅಷ್ಟು ಸುಲಭವಲ್ಲ. ಅದು ದೊಡ್ಡ ಸವಾಲು. ಆಟಗಾರರ ಕಸುವನ್ನು ಮತ್ತು ಸಾಮರ್ಥ್ಯವನ್ನು ಬೆಳಕಿಗೆ ತಂದು ಬೆಳೆಸುವ ಕಾರ್ಯ ಸುಗಮವಾಗಿ ನಡೆಯಬೇಕಾದರೆ ತುಂಬ ಶ್ರಮ ಅಗತ್ಯ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುತ್ತಿದ್ದೇನೆ ಎಂಬ ಎಚ್ಚರ ಮನಸ್ಸಿನಲ್ಲಿ ಇರಬೇಕು. ಸೀಮಿತ ಅವಧಿಯಲ್ಲಿ ತಂಡವೊಂದನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ವಿಶೇಷ ಸಾಮರ್ಥ್ಯ ಇರಬೇಕು. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಕಲೆ ಕರಗತ ಮಾಡಿಕೊಂಡಿರಬೇಕು’ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು.

‘ತಂಡವೊಂದರಲ್ಲಿ ಪ್ರತಿಯೊಬ್ಬ ಆಟಗಾರನ ಮನಸ್ಥಿತಿ ವಿಭಿನ್ನವಾಗಿರುತ್ತದೆ. ಅವರೆಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುವ ಗುಣ ಕೋಚ್‌ಗೆ ಇರಬೇಕು. ಇತರರ ಮುಂದೆ ಒಬ್ಬ ಆಟಗಾರರನ್ನು ಗದರಿಸುವುದು ಒಳ್ಳೆಯ ಕೋಚ್ ಲಕ್ಷಣವಲ್ಲ. ಎಲ್ಲರನ್ನೂ ಗೌರವದಿಂದ ಕಾಣಬೇಕು. ಆಟಗಾರರ ಜೊತೆ ವೈಯಕ್ತಿಕವಾಗಿ ಮಾತನಾಡಿ ಅವರ ಸಮಸ್ಯೆ, ದುಗುಡಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದರಿಂದ ಒಳ್ಳೆಯ ಫಲಿತಾಂಶ ಕಾಣಲು ಸಾಧ್ಯ’ ಎಂದು ಅವರು ಹೇಳಿದರು.

‘ಆಟಗಾರರಿಗೂ ತುಂಬ ಜವಾಬ್ದಾರಿ ಇದೆ. ಸದಾ ಕಾಲ ಸಾಮಾಜಿಕ ತಾಣಗಳಲ್ಲಿ ಕಳೆಯಬಾರದು. ಅದರಿಂದ ವೃತ್ತಿಜೀವನದ ಮೇಲೆ ಹಾಗೂ ವೈಯಕ್ತಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುವ ಟೀಕೆಗಳನ್ನು ಅರಗಿಸಿಕೊಂಡು ಮುಂದೆ ಸಾಗಲು ಅನುಭವಿ ಆಟಗಾರರು ಪಕ್ವವಾಗಿರುತ್ತಾರೆ. ಆದರೆ ಯುವ ಆಟಗಾರರು ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ಆದ್ದರಿಂದ ಅವರು ಸಮಸ್ಯೆಗಳನ್ನು ಕಾಲಮೇಲೆ ಹೊತ್ತುಹಾಕಿಕೊಳ್ಳಬಾರದು. ಈ ಕಾರಣದಿಂದ ಸಾಮಾಜಿಕ ತಾಣಗಳಿಂದ ದೂರ ಇರುವುದೇ ಉತ್ತಮ. ಸಾಮಾಜಿಕ ತಾಣಗಳ ಸಹವಾಸ ಬಿಟ್ಟು ಆಟದ ಮೇಲೆ ಗಮನ ಇರಿಸಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರಲಿದೆ‘ ಎಂದು ಅವರು ಸಲಹೆ ನುಡಿದರು.

‘ಭಾರತದಲ್ಲಿ ಸದ್ಯ ಕೋಚ್‌ಗಳ ತರಬೇತಿ ವಿಧಾನ ಉತ್ತಮವಾಗಿದೆ. ಆದ್ದರಿಂದ ಗುಣಮಟ್ಟದ ಕೋಚ್‌ಗಳು ಲಭಿಸುತ್ತಿದ್ದಾರೆ. ಇಂಡಿಯನ್ ಸೂಪರ್ ಲೀಗ್ ಮತ್ತು ಐ–ಲೀಗ್ ಟೂರ್ನಿಗಳಲ್ಲಿ ಇದರ ಫಲಿತಾಂಶವನ್ನು ಕಾಣುತ್ತಿದ್ದೇವೆ. ಈ ದೃಷ್ಟಿಯಲ್ಲಿ ಎಐಎಫ್‌ಎಫ್‌ ಪ್ರಯತ್ನವನ್ನು ಕೊಂಡಾಡಲೇಬೇಕು’ ಎಂದು 2002ರಲ್ಲಿ ಎಐಎಫ್‌ಎಫ್‌ ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದ ವೆಂಕಟೇಶ್ ಷಣ್ಮುಗಂ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು