ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಐಎಸ್‌ಎಲ್‌: ‘ದಶಬಲ‘ದ ಸವಾಲು ಮೀರಿ ನಿಲ್ಲುವುದೇ ಬಿಎಫ್‌ಸಿ?

Last Updated 22 ನವೆಂಬರ್ 2020, 6:43 IST
ಅಕ್ಷರ ಗಾತ್ರ

ಸಂತೋಷಕೆ….ಹಾಡು ಸಂತೋಷಕೆ…’

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಕಣದಲ್ಲಿ ಕಾದಾಡುವಾಗಲೆಲ್ಲ ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ಮೊಳಗುವ ಹಾಡು ಇದು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆದರಂತೂ ‘ಪಶ್ಚಿಮದ ಸ್ಟ್ಯಾಂಡ್‌‘ನಲ್ಲಿ ಈ ಹಾಡಿನ ಮೊದಲ ಸಾಲು ದಪ್ಪ ಅಕ್ಷರಗಳಲ್ಲಿ ಪರದೆಯ ಮೇಲೂ ಮೂಡಿ ಗಮನಸೆಳೆಯುತ್ತದೆ. ಅದರೊಂದಿಗೆ, ‘ನಮ್ಮ ಬೆಂಗಳೂರು’ ಎಂಬ ಟ್ಯಾಗ್‌ಲೈನ್ ಕೂಡ ಇರುತ್ತದೆ.

ಐಎಸ್‌ಎಲ್‌ ಟೂರ್ನಿಗೆ ಬಿಎಫ್‌ಸಿ ಪ್ರವೇಶಿಸಿ ನಾಲ್ಕು ವರ್ಷಗಳಾಗಿವೆ. ರಾಷ್ಟ್ರೀಯ ಮಟ್ಟದ ಮತ್ತು ಏಷ್ಯಾ ಖಂಡದ ಟೂರ್ನಿಗಳಲ್ಲಿ ಅಮೋಘ ಸಾಧನೆ ಮಾಡಿದ್ದರಿಂದ ಬಿಎಫ್‌ಸಿ ತಂಡ ಐಎಸ್‌ಎಲ್‌ಗೆ ಪ್ರವೇಶಿಸುವಾಗಲೇ ಇತರ ತಂಡಗಳ ಎದೆ ನಡುಗಿತ್ತು. ಈ ಆತಂಕವನ್ನು ನಿಜ ಮಾಡುವಂತೆ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ತಂಡ ಆಡಿತ್ತು ಕೂಡ. ಟೂರ್ನಿಯಲ್ಲಿ ಕಣಕ್ಕೆ ಇಳಿದ ಮೊದಲ ವರ್ಷವೇ ಲೀಗ್ ಹಂತದ ಚಾಂಪಿಯನ್ ಆಗಿ ಫೈನಲ್ ಪ್ರವೇಶಿಸಿದ ತಂಡ ಪ್ರಶಸ್ತಿಗಾಗಿತವರು ನೆಲದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಚೆನ್ನೈಯಿನ್ ಎಫ್‌ಸಿಗೆ ಒಂದು ಗೋಲಿನ (2–3) ಅಂತರರಿಂದ ಮಣಿದಿತ್ತು. ಮರು ವರ್ಷವೂ ಫೈನಲ್ ಪ್ರವೇಶಿಸಿ ಗೋವಾವನ್ನು ಒಂದು ಗೋಲಿನಿಂದ (1–0) ಮಣಿಸಿತ್ತು.

ಪ್ರತಿ ಬಾರಿಯೂ ಪ್ಲೇ ಆಫ್ ಹಂತಕ್ಕೇರಿರುವ ತಂಡ ಈ ಸಲ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉತ್ತಮ ಆಟ ಆಡಬಲ್ಲ ಹೊಸ ಆಟಗಾರರನ್ನು ಸೇರಿಸಿಕೊಂಡು ಇನ್ನಷ್ಟು ಬಲಿಷ್ಠವಾಗಿದೆ. ಹೀಗಾಗಿ ಈ ಬಾರಿಯೂ ಬಿಎಫ್‌ಸಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿಯೇ ಕಣಕ್ಕೆ ಇಳಿಯಲಿದೆ.

ಕಳೆದ ಬಾರಿಯಂತೂ ಬಿಎಫ್‌ಸಿಯ ಓಟ ಅಮೋಘವಾಗಿತ್ತು. ಪ್ಲೇ ಆಫ್‌ನಲ್ಲಿ ಎಟಿಕೆ ವಿರುದ್ಧ ಹೋರಾಡಿ ಸೋತರೂ ನೆನಪಿನಲ್ಲಿ ಉಳಿಯುವಂಥ ಕೆಲವು ಪಂದ್ಯಗಳು ಮತ್ತು ಗೋಲುಗಳನ್ನು ಕಾಣಿಕೆಯಾಗಿ ನೀಡಿತ್ತು. ಲೀಗ್ ಹಂತದಲ್ಲಿ ಆಡಿದ 18 ಪಂದ್ಯಗಳ ಪೈಕಿ ನಾಲ್ಕರಲ್ಲಿ ಮಾತ್ರ ಸೋಲು ಕಂಡಿತ್ತು. ಪ್ರಶಸ್ತಿ ಗೆದ್ದ ವರ್ಷ ತಂಡದಲ್ಲಿದ್ದ ಆಟಗಾರರನ್ನು ಇಲ್ಲಿಯವರೆಗೆ ತನ್ನಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂಬುದು ತಂಡದ ಗರಿಮೆ. ಐಎಸ್‌ಎಲ್‌ನಲ್ಲಿ ಎರಡು ಬಾರಿ ಚಿನ್ನದ ಗವಸು ಪ್ರಶಸ್ತಿ ಗಳಿಸಿರುವ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್‌ ಸಂಧು ಈಗಲೂ ತಂಡದ ಭರವಸೆಯಾಗಿದ್ದಾರೆ. ರಕ್ಷಣಾ ವಿಭಾಗದ ಜುವನಾನ್ ಮತ್ತು ಮಿಡ್‌ಫೀಲ್ಡರ್‌ ಎರಿಕ್ ಪಾರ್ಟಲು, ದಿಮಾಸ್ ಡೆಲ್ಗಾಡೊ ಕೂಡ ಇದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ, ಏಕಾಂಗಿಯಾಗಿ ಗೋಲು ಗಳಿಸಬಲ್ಲ, ಐಎಸ್‌ಎಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನಾಯಕ ಸುನಿಲ್ ಚೆಟ್ರಿ ಈಗಲೂ ತಂಡವನ್ನು ಮುನ್ನಡೆಸುತ್ತಿರುವುದು ಕೋಚ್‌ ಕಾರ್ಲಸ್‌ ಕ್ವದ್ರತ್ ಅವರ ಆತ್ಮವಿಶ್ವಾಸ ವೃದ್ಧಿಸಿದ್ದು, ಸಹ ಆಟಗಾರರ ಮನೋಬಲವನ್ನೂ ಇಮ್ಮಡಿಸಿದೆ.

ಯುವ, ಪ್ರತಿಭಾವಂತ ಆಟಗಾರರಾದ ಆಶಿಕ್ ಕುರುಣಿಯನ್ ಮತ್ತು ಉದಾಂತ ಸಿಂಗ್ ಅವರೂ ಬಿಎಫ್‌ಸಿಯ ಪ್ರಮುಖ ಶಕ್ತಿ. ತಂಡ ಪ್ರಶಸ್ತಿ ಗೆದ್ದ 2018–19ನೇ ಆವೃತ್ತಿಯಲ್ಲಿ ಉದಾಂತ ಸಿಂಗ್ ಐದು ಗೋಲು ಗಳಿಸಿದ್ದರು; ಮೂರು ಅಸಿಸ್ಟ್‌ಗಳನ್ನೂ ಮಾಡಿದ್ದರು. ಮುಂದಿನ ಎರಡು ವರ್ಷ ಅವರಿಂದ ನಿರೀಕ್ಷಿತ ಸಾಮರ್ಥ್ಯ ಕಂಡುಬರಲಿಲ್ಲ. ಆದರೂ ಭರವಸೆ ಕೈಬಿಡದ ತಂಡ ಗುತ್ತಿಗೆಯನ್ನು ಮೂರು ವರ್ಷ ಮುಂದುವರಿಸಿದೆ. ಈ ವಿಶ್ವಾಸಕ್ಕೆ ‘ಕಾಣಿಕೆ’ ನೀಡುವ ಜವಾಬ್ದಾರಿ ಅವರ ಮೇಲೆ ಇದೆ.

ಆಕ್ರಮಣಕಾರಿ ಆಟಕ್ಕೆ ಹೆಸರಾದ ಸುನಿಲ್ ಚೆಟ್ರಿ ಮತ್ತು ದೇಶಾನ್ ಬ್ರೌನ್ ಅವರಿಗೆ ನೆರವಾಗಲು ಈ ಬಾರಿ ನಾರ್ವೆಯ ಕ್ರಿಸ್ಟಿಯನ್ ಒಪ್ಸೆತ್‌, ಬ್ರೆಜಿಲ್‌ನ ಕ್ಲೀಟನ್ ಸಿಲ್ವಾ ಮತ್ತು ಬಿಎಫ್‌ಸಿ ಅಕಾಡೆಮಿಯಿಂದ ಬಡ್ತಿ ಪಡೆದಿರುವ ನೌರೆಮ್ ಸಿಂಗ್‌ ಇದ್ದಾರೆ. ರಕ್ಷಣಾ ವಿಭಾಗದ ಪ್ರಮುಖ ಆಟಗಾರ ಆಲ್ಬರ್ಟ್ ಸೆರಾನ್ ಇಲ್ಲದಿರುವುದು ತಂಡಕ್ಕೆ ಸ್ವಲ್ಪ ಹಿನ್ನಡೆಯೇ. ಅದೇ ರೀತಿ ಕೇರಳ ಬ್ಲಾಸ್ಟರ್ಸ್ ಸೇರಿರುವ ನಿಶು ಕುಮಾರ್ ಅವರನ್ನು ಕಳೆದುಕೊಂಡಿರುವುದೂ ತಂಡವನ್ನು ಕಾಡಲಿದೆ. ಈ ಕೊರತೆಯನ್ನು ನೀಗಿಸಲು ಫ್ರಾನ್ಸಿಸ್ಕೊ ಗೊಂಜಾಲೆಸ್ ಮತ್ತು ಅಜಿತ್ ಕುಮಾರ್ ಅವರನ್ನು ಟೂರ್ನಿಯುದ್ದಕ್ಕೂ ಕಾರ್ಲಸ್ ಕ್ವದ್ರತ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಮಿಡ್‌ಫೀಲ್ಡ್ ವಿಭಾಗದ ಬಲಿಷ್ಠ ಆಟಗಾರರಾದ ಸುರೇಶ್ ವಾಂಗ್ಜಂ, ಹರ್ಮನ್‌ಜೋತ್ ಖಾಬ್ರಾ ಮತ್ತು ಥೊಯ್ ಸಿಂಗ್, ಫಾರ್ವರ್ಡ್‌ ವಿಭಾಗದ ಶೆಂಬೊಯ್ ಹಾಕಿಪ್ ಮೇಲೆಯೂ ತಂಡ ಭರವಸೆ ಇರಿಸಿಕೊಂಡಿದೆ.

ಕಾಡುವ ಗೋಲು ಕೊರತೆ

ಕಳೆದ ಬಾರಿ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಗೋಲು ಗಳಿಕೆಯಲ್ಲಿ ಬಿಎಫ್‌ಸಿ ತೀರಾ ಹಿಂದೆ ಉಳಿದಿತ್ತು. ಈ ಕೊರತೆಯ ನೋವು ತಂಡವನ್ನು ಈಗಲೂ ಕಾಡುತ್ತಿದೆ. 10 ತಂಡಗಳು ಇದ್ದ ಕಳೆದ ಬಾರಿ ಲೀಗ್ ಹಂತದಲ್ಲಿ ಅತಿ ಕಡಿಮೆ ಗೋಲು ಗಳಿಸಿದ ತಂಡಗಳ ಪಟ್ಟಿಯಲ್ಲಿ ಬಿಎಫ್‌ಸಿಗೆ ಮೂರನೇ ಸ್ಥಾನವಿತ್ತು. 18 ಪಂದ್ಯಗಳಲ್ಲಿ ತಂಡ ಗಳಿಸಿದ್ದು 22 ಗೋಲು. ನಾರ್ತ್ ಈಸ್ಟ್ ಯುನೈಟೆಡ್ ಅಷ್ಟೇ ಪಂದ್ಯಗಳಲ್ಲಿ 16 ಗೊಲು ಗಳಿಸಿದ್ದರೆ ಹೈದರಾಬಾದ್ ಎಫ್‌ಸಿ 21 ಬಾರಿ ಚೆಂಡನ್ನು ಗುರಿ ಮುಟ್ಟಿಸಿತ್ತು. ಆದರೆ ಕಡಿಮೆ ಗೋಲು ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಬೆಂಗಳೂರಿನ ತಂಡ ಮೊದಲ ಸ್ಥಾನದಲ್ಲಿದೆ. ಈ ತಂಡ 13 ಗೋಲು ಬಿಟ್ಟುಕೊಟ್ಟಿದ್ದರೆ ಎಟಿಕೆ 16 ಮತ್ತು ಎಫ್‌ಸಿ ಗೋವಾ 23 ಗೋಲುಗಳನ್ನು ಮಣಿದಿತ್ತು. ಹೈದರಾಬಾದ್ ಎಫ್‌ಸಿ ಅತಿ ಹೆಚ್ಚು, 39 ಗೋಲು ಬಿಟ್ಟುಕೊಟ್ಟಿತ್ತು.

ಹೀಗಾಗಿ ರಕ್ಷಣಾ ವಿಭಾಗದ ಲಯವನ್ನು ಹಾಗೆಯೇ ಉಳಿಸಿಕೊಂಡು ಫಾರ್ವರ್ಡ್‌ ಆಟಗಾರರ ಸಾಮರ್ಥ್ಯ ಹೆಚ್ಚಿಸಲು ಕ್ವದ್ರತ್ ಗಮನ ನೀಡುವ ಸಾಧ್ಯತೆಯೇ ಹೆಚ್ಚು ಇದೆ. ಸುನಿಲ್ ಚೆಟ್ರಿ ಕಳೆದ ಬಾರಿ 17 ಪಂದ್ಯಗಳಲ್ಲಿ ಒಂಬತ್ತು ಗೋಲು ಮಾತ್ರ ಗಳಿಸಿದ್ದಾರೆ. ಉಳಿದ ಪ್ರಮುಖರಿಗೆ ಐದು ಗೋಲುಗಳ ಗಡಿಯನ್ನು ಕೂಡ ದಾಟಲಾಗಲಿಲ್ಲ. ದೇಶಾನ್ ಬ್ರೌನ್ ಮೂರು ಮತ್ತು ಎರಿಕ್ ಪಾರ್ಟಲು ಎರಡು ಗೋಲು ಗಳಿಸಿದ್ದರು. ಉಳಿದವರಿಗೆ ತಲಾ ಒಂದೊಂದು ಗೋಲು ಗಳಿಸಲಷ್ಟೇ ಸಾಧ್ಯವಾಗಿತ್ತು. ಕೊರತೆಗಳನ್ನು ನೀಗಿಸಿಕೊಂಡು ತಂಡ ಈ ಬಾರಿ ಯಾವ ರೀತಿಯ ಸಾಮರ್ಥ್ಯ ತೋರಲಿದೆ ಎಂಬ ಕುತೂಹಲ ‘ನಮ್ಮ ಬೆಂಗಳೂರು’ ಅಭಿಮಾನಿಗಳದು. ಕೋಲ್ಕತ್ತದ ಎರಡು ತಂಡಗಳ ಸೇರ್ಪಡೆಯೊಂದಿಗೆ (ಒಟ್ಟು 11 ತಂಡಗಳು) ಈಗ ಟೂರ್ನಿ ಇನ್ನಷ್ಟು ಜಿಗುಟುತನದಿಂದ ಕೂಡಿದೆ. ಪ್ರತಿ ತಂಡಗಳು ಹತ್ತು ಎದುರಾಳಿಗಳ ಸವಾಲು ಎದುರಿಸಬೇಕಾಗಿದೆ. ಇದನ್ನು ಮೆಟ್ಟಿನಿಲ್ಲುವುದೇ ಬಿಎಫ್‌ಸಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT