ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಮೊದಲ ಸೋಲಿನ ಬರೆ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆ ಮೋಹನ್ ಬಾಗನ್‌ಗೆ ಗೋಲು ತಂದಿತ್ತ ವಿಲಿಯಮ್ಸ್‌
Last Updated 21 ಡಿಸೆಂಬರ್ 2020, 20:46 IST
ಅಕ್ಷರ ಗಾತ್ರ

ಫತೋರ್ಡ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಏಳನೇ ಆವೃತ್ತಿಯ ಆರು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಸೋಮವಾರ ಮೊದಲ ಸೋಲು ಅನುಭವಿಸಿತು. ಎಟಿಕೆ ಮೋಹನ್ ಬಾಗನ್ ತಂಡದ ವಿರುದ್ಧ ಫತೋರ್ಡ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 0–1 ಗೋಲಿನಿಂದ ಮಣಿಯಿತು.

ಬಲಿಷ್ಠ ತಂಡಗಳೆರಡರ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಎಟಿಕೆಎಂಬಿ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎರಡನೇ ನಿಮಿಷದಲ್ಲೇ ಬಿಎಫ್‌ಸಿ ಪಾಳಯದಲ್ಲಿ ಆತಂಕ ಸೃಷ್ಟಿಸಲು ಆ ತಂಡಕ್ಕೆ ಸಾಧ್ಯವಾಯಿತು. ಎಜು ಗಾರ್ಸಿಯಾ ಅವರಿಂದ ಚೆಂಡು ಪಡೆದ ರಾಯ್ ಕೃಷ್ಣ ಗೋಲುಪೆಟ್ಟಿಗೆಯತ್ತ ಮುನ್ನುಗ್ಗಿದಾಗ ಅಪಾಯ ಅರಿತ ಗೋಪ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮುಂದಕ್ಕೆ ಓಡಿ ಬಂದು ತಡೆದರು. ಆರನೇ ನಿಮಿಷದಲ್ಲೂ ಪ್ರಬಲ ಆಕ್ರಮಣ ಉಂಟಾಯಿತು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಎಟಿಕೆಎಂಬಿಗೆ ಸಾಧ್ಯವಾಗಲಿಲ್ಲ.

16ನೇ ನಿಮಿಷದಲ್ಲಿ ವಿಲಿಯಮ್ಸ್‌ ಮತ್ತು ರಾಯ್ ಕೃಷ್ಣ ಜಂಟಿಯಾಗಿ ಆಕ್ರಮಣ ನಡೆಸಿದರು. ಆದರೆ ರಾಹುಲ್ ಭೆಕೆ, ಬಿಎಫ್‌ಸಿಯ ರಕ್ಷಣೆಗೆ ಬಂದರು. ನಿಧಾನಕ್ಕೆ ಆಧಿಪತ್ಯ ಸ್ಥಾಪಿಸಿದ ಬಿಎಫ್‌ಸಿ 21ನೇ ನಿಮಿಷದಲ್ಲಿ ಎದುರಾಳಿಗಳ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಯಿತು. 22ನೇ ನಿಮಿಷದಲ್ಲಿ ಗುರುಪ್ರೀತ್ ಸಿಂಗ್ ಸಂಧು ಅವರ ಸಮಯೋಚಿತ ಆಟದಿಂದಾಗಿ ಬಿಎಫ್‌ಸಿ ಮತ್ತೊಮ್ಮೆ ಅಪಾಯದಿಂದ ಪಾರಾಯಿತು.

26ನೇ ನಿಮಿಷದಲ್ಲಿ ಪಂದ್ಯದ ಮೊದಲ ಕಾರ್ನರ್ ಬಿಎಫ್‌ಸಿಗೆ ಲಭಿಸಿತು. ದೇಶಾನ್ ಬ್ರೌನ್ ಒದ್ದ ಚೆಂಡನ್ನು ವಶಕ್ಕೆ ತೆಗೆಯುವಲ್ಲಿ ಸಂದೇಶ್ ಜಿಂಗಾನ್ ಯಶಸ್ವಿಯಾದರು. 27ನೇ ನಿಮಿಷದಲ್ಲಿ ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ನೈಜ ಆಟಕ್ಕೆ ಕುದುರಿಕೊಂಡರು. ಆದರೆ ಚೆಂಡಿನೊಂದಿಗೆ ಮುನ್ನುಗ್ಗಿದ ಅವರಿಗೆ ಗೋಲು ಗಳಿಸಲು ಎದುರಾಳಿ ತಂಡದ ಗೋಲ್‌ಕೀಪರ್ ಅರಿಂದಂ ಭಟ್ಟಾಚಾರ್ಯ ಅವಕಾಶ ನೀಡಲಿಲ್ಲ. ಜಿದ್ದಾಜಿದ್ದಿಯ ಹೋರಾಟದ ಕೊನೆಯಲ್ಲಿ ಎಟಿಕೆಎಂಬಿ ಯಶಸ್ಸು ಕಂಡಿತು. 33ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಎಡಭಾಗದಿಂದ ಚೆಂಡನ್ನು ಪಡೆದ ವಿಲಿಯಮ್ಸ್ ಡ್ರಿಬಲ್ ಮಾಡುತ್ತ ಮುನ್ನುಗ್ಗಿದರು. ತಡೆಯಲು ಹರ್ಮನ್‌ಜೋತ್ ಖಾಬ್ರಾ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಗೋಲುಪೆಟ್ಟಿಗೆಯ ಮೂಲೆಗೆ ಗುರಿಯಿಟ್ಟು ಒದ್ದ ಚೆಂಡನ್ನು ಡೈವ್ ಮಾಡಿ ಹಿಡಿಯಲು ಗುರುಪ್ರೀತ್ ಸಿಂಗ್ ಸಂಧು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ಚೆಂಡು ಬಲೆಗೆ ಮುತ್ತಿಕ್ಕಿತ್ತು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳಿಂದ ಪರಿಣಾಮಕಾರಿ ಆಟ ಕಂಡುಬರಲಿಲ್ಲ. 90ನೇ ನಿಮಿಷದಲ್ಲಿ ಸಮಬಲ ಸಾಧಿಸಲು ಬಿಎಫ್‌ಸಿಗೆ ಅತ್ಯುತ್ತಮ ಅವಕಾಶ ಲಭಿಸಿತ್ತು. ಕಾರ್ನರ್ ಕಿಕ್‌ಗೆ ತಂಡ ಸಜ್ಜಾಗುತ್ತಿದ್ದಂತೆ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಕೂಡ ಎಟಿಕೆಎಂಬಿಯ ಆವರಣಕ್ಕೆ ಬಂದರು. ಕ್ಲೀಟನ್ ಸಿಲ್ವಾ ಒದ್ದ ಚೆಂಡನ್ನು ತಡೆದ ಎದುರಾಳಿ ತಂಡದವರು ಜಯದ ಕೇಕೆ ಹಾಕಿದರು. ಹ್ಯಾಟ್ರಿಕ್ ಜಯದ ಕನಸು ಹೊತ್ತು ಬಂದಿದ್ದ ಬಿಎಫ್‌ಸಿ ನಿರಾಸೆಗೆ ಒಳಗಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT