ಫಿಫಾ: ಕ್ರೊವೇಷ್ಯಾ–ಡೆನ್ಮಾರ್ಕ್‌ ಮುಖಾಮುಖಿ

7
ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯ: ಎರಿಕ್ಸನ್‌, ಲುಕಾ ಮಾಡ್ರಿಕ್‌ ಮೇಲೆ ನಿರೀಕ್ಷೆಯ ಭಾರ

ಫಿಫಾ: ಕ್ರೊವೇಷ್ಯಾ–ಡೆನ್ಮಾರ್ಕ್‌ ಮುಖಾಮುಖಿ

Published:
Updated:

ನಿಜ್ನಿ ನೊವ್‌ಗೊರೋದ್‌ : ಫುಟ್‌ಬಾಲ್ ಪ್ರೇಮಿಗಳ ನಿರೀಕ್ಷೆಗೂ ಮೀರಿದ ಶ್ರೇಷ್ಠ ಆಟವಾಡುತ್ತಿರುವ ಕ್ರೊವೇಷ್ಯಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯ 16ರ ಘಟ್ಟದಲ್ಲಿ ಬಲಿಷ್ಠ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.

ಇಲ್ಲಿನ ನಿಜ್ನಿನೊವ್‌ಗೊರೋದ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಈ ಹಣಾಹಣಿಯಲ್ಲಿ ಗೆದ್ದು ಎಂಟರ ಹಂತಕ್ಕೆ ತಲುಪುವ ಕಾತರದಲ್ಲಿವೆ ಉಭಯ ತಂಡಗಳು. 

ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಜಯಿಸಿರುವ ಕ್ರೊವೇಷ್ಯಾ ತಂಡವು ಫುಟ್‌ಬಾಲ್‌ ದಿಗ್ಗಜರ ಹುಬ್ಬೇರಿಸಿದೆ. ಬಲಿಷ್ಠ ಅರ್ಜೆಂಟೀನಾ ತಂಡವನ್ನು 3–0 ಗೋಲುಗಳಿಂದ ಮಣಿಸಿದ್ದ ಕ್ರೊವೇಷ್ಯಾ ಅಪಾರ ವಿಶ್ವಾಸದಲ್ಲಿದೆ. 

ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿರುವ ಡೆನ್ಮಾರ್ಕ್‌ ತಂಡವು ಎರಡರಲ್ಲಿ ಡ್ರಾ ಸಾಧಿಸಿದೆ. ತಂಡದ ತಾರಾ ಆಟಗಾರರಾದ ಯೂಸುಫ್‌ ಪೌಲ್ಸನ್‌ ಹಾಗೂ ಕ್ರಿಸ್ಟಿಯನ್‌ ಎರಿಕ್ಸನ್ ಅವರು ತಂಡದ ಪರವಾಗಿ ಗೋಲು ದಾಖಲಿಸಿದ್ದಾರೆ. ಡಿ ಗುಂಪಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕ್ರೊವೇಷ್ಯಾ ತಂಡದ ಲುಕಾ ಮಾಡ್ರಿಕ್‌, ಆ್ಯಂಟೆ ರೆಬಿಕ್‌, ಇವಾನ್‌ ರಕಿಟಿಕ್‌, ಇವಾನ್‌ ಪೆರಿಸಿಕ್‌, ಮಿಲ್‌ ಬಡೆಲ್ಜಿ ಹಾಗೂ ಎಟೆಬೊ ಅವರು ತಂಡದ ಪರವಾಗಿ ಗೋಲುಗಳನ್ನು ದಾಖಲಿಸಿದ್ದಾರೆ. ತಂಡದ ಅರ್ಧದಷ್ಟು ಆಟಗಾರರು ಗೊಲು ಗಳಿಸಿರುವುದು ಸಂಘಟಿತ ಹೋರಾಟದ ದೃಷ್ಠಿಯಿಂದ ಮಹತ್ವ ಪಡೆದಿದೆ. 

ಇದೇ ಕಾರಣದಿಂದ ಲಾಟ್ಕೊ ಡಾಲಿಕ್‌ ಅವರ ಮಾರ್ಗದರ್ಶನದ ಕ್ರೊವೇಷ್ಯಾ ತಂಡವು ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. 

‘ಡೆನ್ಮಾರ್ಕ್‌ ತಂಡದ ಮಿಡ್‌ಫೀಲ್ಡ್‌ ವಿಭಾಗವು ಶಕ್ತವಾಗಿದೆ. ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕುವ ಸಾಮರ್ಥ್ಯ ಆ ವಿಭಾಗಕ್ಕಿದೆ. ಅದು ಅಲ್ಲದೇ ಯುರೋಪ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕ್ರಿಸ್ಟಿಯನ್‌ ಎರಿಕ್ಸನ್‌ ಅವರು ತಂಡದ ಹಲವು ವಿಭಾಗಗಳನ್ನು ಮುನ್ನಡೆಸುತ್ತಾರೆ. ಆದ್ದರಿಂದ, ಯಾವ ಕ್ಷಣದಲ್ಲೂ ನಾವು ಮೈ ಮರೆಯುವ ಹಾಗಿಲ್ಲ’ ಎಂದು ಕ್ರೊವೇಷ್ಯಾ ತಂಡದ ಇವಾನ್‌ ರಕಿಟಿಕ್‌ ಅಭಿಪ್ರಾಯಪಟ್ಟಿದ್ದಾರೆ. 

ಇಲ್ಲಿಯವರೆಗೂ ಕ್ರೊವೇಷ್ಯಾ ತಂಡದ ಎಲ್ಲ ವಿಭಾಗಗಗಳ ಆಟಗಾರರು ಉತ್ತಮವಾಗಿ ಆಡಿದ್ದಾರೆ. ಮೂರು ಪಂದ್ಯಗಳಲ್ಲಿ ಒಟ್ಟು ಏಳು ಗೋಲು ದಾಖಲಿಸಿ, ಕೇವಲ ಒಂದು ಗೋಲು ಮಾತ್ರ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ. 

ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಈ ತಂಡದ ಲುಕಾ ಮಾಡ್ರಿಕ್‌ ಪಂದ್ಯದ ಪ್ರಮುಖ ಆಕರ್ಷಣೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !