ಗುರುವಾರ , ಏಪ್ರಿಲ್ 9, 2020
19 °C

ಯುವತಾರೆಯರ ಮೋಡಿ ಮಿಂಚಿದ ‘ಸ್ಟ್ರೈಕರ್‌ ಜೋಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಂಚಿನ ಕಾಲ್ಚಳಕದ ಮೂಲಕ 15 ಗೋಲುಗಳನ್ನು ದಾಖಲಿಸಿದ ಚೆನ್ನೈಯಿನ್ ಎಫ್‌ಸಿಯ ನೆರಿಜಸ್ ವಲ್ಸ್ಕಿಸ್, ಕೇರಳ ಬ್ಲಾಸ್ಟರ್ಸ್‌ನ ಬಾರ್ತೊಲೊಮೆ ಒಗ್ಬೆಚೆ, ಎಟಿಕೆಯ ರಾಯ್ ಕೃಷ್ಣ; ಗೋಲುಪೆಟ್ಟಿಗೆಯ ಮುಂದೆ ರಕ್ಷಕನ ಪಾತ್ರ ವಹಿಸಿ 55 ಗೋಲು ತಡೆದ ನಾರ್ತ್ ಈಸ್ಟ್ ಯುನೈಟೆಡ್‌ನ ಸುಭಾಷಿಷ್ ರಾಯ್, 53 ಗೋಲು ತಡೆದ ಎಟಿಕೆಯ ಅರಿಂದಂ ಭಟ್ಟಾಚಾರ್ಯ, 11 ಕ್ಲೀನ್ ಶೀಟ್‌ಗಳೊಂದಿಗೆ, ಕೇವಲ 14 ಗೋಲು ಬಿಟ್ಟುಕೊಟ್ಟು 49 ಗೋಲು ತಡೆದ ಬಿಎಫ್‌ಸಿಯ ಗುರುಪ್ರೀತ್ ಸಿಂಗ್ ಸಂಧು ಅವರಂಥ ಆಟಗಾರರ ಜೊತೆ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮಿಂಚಿದ ಚಿಗುರು ಮೀಸೆಯ ಆಟಗಾರರನ್ನು ಯಾರೂ ಮರೆಯಲಾರರು.

ಟೂರ್ನಿಯ ಆರನೇ ಆವೃತ್ತಿಯ ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ ಸುಮಿತ್ ರಾಠಿ, ಪ್ರಮುಖ ಆಟಗಾರರ ಉನುಪಸ್ಥಿತಿಯಲ್ಲಿ ಬಿಎಫ್‌ಸಿಗೆ ನೆರವಾದ ಸುರೇಶ್ ಸಿಂಗ್ ವಾಂಗ್ಜಂ, ಎಫ್‌ಸಿ ಗೋವಾದ ಮನ್ವೀರ್ ಸಿಂಗ್‌, ಕೇರಳ ಬ್ಲಾಸ್ಟರ್ಸ್‌ನ ಜೀಕ್ಸನ್ ಸಿಂಗ್‌, ಮೊಹಮ್ಮದ್ ರಾಕಿಪ್, ನಾರ್ತ್ ಈಸ್ಟ್ ಯುನೈಟೆಡ್‌ನ ರಿಡೀಮ್‌ ತ್ಲಾಂಗ್‌, ಒಡಿಶಾ ಎಫ್‌ಸಿಯ ಶುಭಂ ಸಾರಂಗಿ ಮುಂತಾದವರು ಲಭಿಸಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಈ ಬಾರಿ ಗಮನ ಸೆಳೆದಿದ್ದಾರೆ. ಆ್ಯಂಟೊನಿಯೊ ಲೋಪೆಜ್ ಹಬಾಸ್ ಕೋಚಿಂಗ್‌ನಲ್ಲಿ ಪ್ರಶಸ್ತಿ ಗೆದ್ದ ಎಟಿಕೆಯಲ್ಲಿ ಹೆಸರಾಂತ ಆಟಗಾರರು ಇದ್ದಾರೆ. ಆದರೂ ರಾಠಿ ಮಿಂಚು ಹರಿಸಿದ್ದಾರೆ. ಖ್ಯಾತನಾಮರ ಉಪಸ್ಥಿತಿಯಲ್ಲೇ 11 ಪಂದ್ಯಗಳಲ್ಲಿ ಆಡುವ ಅವಕಾಶ ಅವರಿಗೆ ಲಭಿಸಿತ್ತು. ಈ ಪೈಕಿ 10 ಪಂದ್ಯಗಳಲ್ಲಿ ಆರಂಭದಲ್ಲೇ ಕಣಕ್ಕೆ ಇಳಿದಿದ್ದಾರೆ. ತಂಡದ ಡಿಫೆಂಡಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. 

ಸೆಮಿಫೈನಲ್‌ ತಲುಪಿದ ಬಿಎಫ್‌ಸಿಯಲ್ಲಿ ಲೀಗ್ ಹಂತದ ಸುಮಾರು ಅರ್ಧಭಾಗದಿಂದ ಆಡಲು ಅವಕಾಶ ಪಡೆದ ಸುರೇಶ್ ಸಿಂಗ್ ವಾಂಗ್ಜಂ ನಂತರ ಬಹುತೇಕ ಎಲ್ಲ ಪಂದ್ಯಗಳಲ್ಲೂ ಅನಿವಾರ್ಯ ಎಂಬಂತೆ ಸ್ಥಾನ ಗಳಿಸಿದ್ದರು. ‘ಅವರು ಶೀಘ್ರದಲ್ಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲಿದ್ದಾರೆ’ ಎಂದು ತಂಡದ ಕೋಚ್ ಕಾರ್ಲಸ್ ಕ್ವದ್ರತ್ ಅವರೇ ಅಭಿಪ್ರಾಯಪಟ್ಟಿದ್ದಾರೆ. 

ಸ್ಟ್ರೈಕರ್‌ ಜೋಡಿಗಳ ಅಬ್ಬರ

ವಿದೇಶಿ ಆಟಗಾರರು ಈ ಬಾರಿಯ ಐಎಸ್‌ಎಲ್‌ನಲ್ಲಿ ಗೋಲು ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ‘ಸ್ಟ್ರೈಕರ್ ಜೋಡಿ’ಗಳೆಂದೇ ಹೆಸರು ಗಳಿಸಿರುವ ಕೆಲವರು ತಮ್ಮ ತಂಡಗಳ ಯಶಸ್ಸಿನ ಹಿಂದೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಪ್ರಶಸ್ತಿ ಗೆದ್ದ ಎಟಿಕೆಯ ರಾಯ್ ಕೃಷ್ಣ ಮತ್ತು ಡೇವಿಡ್ ವಿಲಿಯಮ್ಸ್ ಇಂಥ ಅಪರೂಪದ ಜೋಡಿಗಳಲ್ಲಿ ಒಂದು. ಫಿಜಿಯ ರಾಯ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ಕ್ರಮವಾಗಿ 15 ಮತ್ತು ಏಳು ಗೋಲುಗಳನ್ನು ಗಳಿಸಿದ್ದಾರೆ. ಆದರೆ ಕ್ರಮವಾಗಿ ಐದು ಮತ್ತು ನಾಲ್ಕು ಗೋಲುಗಳಿಗೆ ಇವರು ‘ಅಸಿಸ್ಟ್‌’ ಮಾಡಿದ್ದಾರೆ. 

’ಇವರಿಬ್ಬರು ತಂಡದ ಆಸ್ತಿ. ಅನೇಕ ಪಂದ್ಯಗಳಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಚೆಂಡನ್ನು ಗುರಿ ಮುಟ್ಟಿಸಿ ಇವರು ಅಗತ್ಯ ಮುನ್ನಡೆ ಗಳಿಸಿಕೊಟ್ಟಿದ್ದಾರೆ. ಅವರಿಬ್ಬರು ಟೂರ್ನಿಯುದ್ದಕ್ಕೂ ಉತ್ತಮ ಫಾರ್ಮ್‌ನಲ್ಲಿದ್ದದ್ದು ನಮ್ಮ ಅದೃಷ್ಟ’ ಎಂದು ಕೋಚ್ ಆ್ಯಂಟೊನಿಯೊ ಹಬಾಸ್ ಅಭಿಪ್ರಾಯಪಟ್ಟಿದ್ದಾರೆ. 

ಚೆನ್ನೈಯಿನ್ ಎಫ್‌ಸಿಯಲ್ಲಿ ಇದೇ ರೀತಿ ಮಿಂಚಿದ ಜೋಡಿ, ರಾಫೆಲ್ ಕ್ರಿವೆಲಾರೊ ಮತ್ತು ನೆರಿಜಸ್ ವಲ್ಸ್ಕಿಸ್. ಫೈನಲ್‌ನಲ್ಲಿ ಗಳಿಸಿದ ಗೋಲು ಒಳಗೊಂಡಂತೆ ನೆರಿಜಸ್ ಒಟ್ಟು 15 ಬಾರಿ ಚೆಂಡನ್ನು ಗುರಿ ತಲುಪಿಸಿದ್ದರೆ ಆರು ಅಸಿಸ್ಟ್‌ಗಳ ಮೂಲಕ ಇತರರ ಗೋಲುಗಳಿಗೆ ನೆರವಾಗಿದ್ದಾರೆ. ಕ್ರಿವೆಲಾರೊ ಬಾರಿಸಿದ್ದು ಏಳು ಗೋಲು. ಆದರೆ ಎಂಟು ಬಾರಿ ಅಸಿಸ್ಟ್‌ಗಳ ಮೂಲಕ ತಂಡದ ಆಪದ್ಭಾಂದವ ಎನಿಸಿಕೊಂಡಿದ್ದಾರೆ. 

ಗೋವಾ ತಂಡವನ್ನು ಲೀಗ್ ಚಾಂಪಿಯನ್ ಆಗುವಂತೆ ಮಾಡಿದವರಲ್ಲಿ ಹ್ಯೂಗೊ ಬೌಮೊಸ್ ಮತ್ತು ಫೆರಾನ್ ಕೊರೊಮಿನಾಸ್ ಪಾತ್ರ ದೊಡ್ಡದು. 10 ಅಸಿಸ್ಟ್‌ಗಳನ್ನೂ 11 ಗೋಲುಗಳನ್ನೂ ಹೊಡೆದು ಹ್ಯೂಗೊ ಬೆಳಗಿದರೆ ’ಕೊರೊ’ 14 ಗೋಲು ಹೊಡೆದು ನಾಲ್ಕು ಅಸಿಸ್ಟ್‌ಗಳನ್ನು ನೀಡಿದ್ದಾರೆ. ಬಾರ್ತೊಲೊಮೆ ಒಗ್ಬೆಚೆ ಮತ್ತು ರಾಫೆಲ್ ಮೆಸ್ಸಿ ಬೌಲಿ ಜೋಡಿಯನ್ನು ಕೇರಳ ಬ್ಲಾಸ್ಟರ್ಸ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಗೋಲು ಗಳಿಸಿದವರ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಒಗ್ಬೆಚೆ 15 ಬಾರಿ ಚೆಂಡನ್ನು ಬಲೆಯೊಳಗೆ ಸೇರಿಸಿದರೆ, ಮೆಸ್ಸಿ ಬೌಲಿ ಎಂಟು ಗೋಲು ಗಳಿಸಿದ್ದಾರೆ. 

ತಂಡದ ಯಶಸ್ಸಿನಲ್ಲಿ ಸುರೇಶ್ ಸಿಂಗ್ ವಾಂಗ್ಜಂ ಅವರ ಪಾತ್ರ ಮಹತ್ವದ್ದು. ಫಾರ್ವರ್ಡ್‌ ವಿಭಾಗಕ್ಕೆ ಆಕ್ರಮಣಕಾರಿ ಆಟದ ಮೂಲಕ ಅವಕಾಶಗಳನ್ನು ಗಳಿಸಿಕೊಡುವ ಅವರು ಡಿಫೆಂಡರ್‌ಗಳಿಗೂ ಸಾಕಷ್ಟು ನೆರವು ನೀಡುತ್ತಾರೆ. 
– ಕಾರ್ಲಸ್ ಕ್ವದ್ರತ್ ಬಿಎಫ್‌ಸಿ ಕೋಚ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು