ಬುಧವಾರ, ನವೆಂಬರ್ 20, 2019
27 °C
ದಕ್ಷಿಣ ವಲಯ ಅಂತರ ವಿವಿ ಹಾಕಿ ಚಾಂಪಿಯನ್‌ಷಿಪ್‌

ಎಸ್ಆ‌ರ್‌ಎಮ್‌ ವಿವಿ ತಂಡಕ್ಕೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಉತ್ತಮ ಆಟವಾಡಿದ ಎಸ್ಆ‌ರ್‌ಎಮ್‌ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯ ತಂಡ ದಕ್ಷಿಣ ವಲಯ ಇಂಟರ್‌ ವಾರ್ಸಿಟಿ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಪ್ರಶಸ್ತಿಗೆ ಮುತ್ತಿಕ್ಕಿತು.

ಕೆಎಸ್‌ಎಚ್‌ಎ ಹಾಕಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಎಸ್‌ಆರ್‌ಎಮ್‌ ವಿವಿ ತಂಡವು ಮದ್ರಾಸ್‌ ವಿವಿಯನ್ನು 6–3 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ಎಚ್‌.ಬಿ.ಜೀವನ್‌ಕುಮಾರ್‌ ಹ್ಯಾಟ್ರಿಕ್‌ ಗೋಲು (41, 43, 45ನೇ ನಿಮಿಷ)ದಾಖಲಿಸಿ ಮಿಂಚಿದರು. ಜಿ. ಶ್ರವಣ್‌ಕುಮಾರ್‌ (47, 59ನೇ ನಿಮಿಷ) ಎರಡು ಹಾಗೂ ಎನ್‌.ವಿಘ್ನೇಶ್‌ (48ನೇ ನಿಮಿಷ) ಒಂದು ಗೋಲು ಹೊಡೆದರು.

ಈ ಗೆಲುವಿನ ಮೂಲಕ ಎಸ್‌ಆರ್‌ಎಮ್‌ ವಿವಿ ತಂಡ ಏಳು ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನ ಪಡೆಯಿತು. ಎರಡನೇ ಸ್ಥಾನವನ್ನು ಬೆಂಗಳೂರು ಕೇಂದ್ರ ವಿವಿ ತಂಡ ಗಳಿಸಿತು.

ಮದ್ರಾಸ್‌ ವಿವಿ ಪರ ಪಿ.ಮಹೇಂದ್ರನ್‌ ಕೂಡ ಹ್ಯಾಟ್ರಿಕ್‌ (40, 52, 56ನೇ ನಿಮಿಷ) ಬಾರಿಸಿದರು. ಆದರೆ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಬೆಂಗಳೂರು ಕೇಂದ್ರ ವಿವಿ ತಂಡವು ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬೆಂಗಳೂರು ವಿವಿ ತಂಡದ ವಿರುದ್ಧ 3–2ರಿಂದ ಜಯಿಸಿತು.

ಪ್ರತಿಕ್ರಿಯಿಸಿ (+)