ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಸಮೀಕ್ಷೆ: ಉದಾರತೆ ತೋರಿ

ಜಿಲ್ಲಾಧಿಕಾರಿಗಳ ವಿರುದ್ಧ ಸಚಿವರು ಗರಂ– ಅಧಿಕಾರಿಗಳ ರಜೆ ಬಂದ್‌, ವಾರಕೊಮ್ಮೆ ಸಭೆಗೆ ಸೂಚನೆ
Last Updated 19 ಜೂನ್ 2018, 8:15 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಬೇಕು, ಸಮಸ್ಯೆ ಇರುವ ಸ್ಥಳಗಳಿಗೆ ಅಧಿಕಾರಿಗಳು ಸತತವಾಗಿ ಭೇಟಿ ನೀಡುತ್ತಿರಬೇಕು, ಅಧಿಕಾರಿಗಳಿಗೆ ರಜೆ ನೀಡಬಾರದು, ಮಳೆಯಿಂದ ಹಾನಿ ಸಂಭವಿಸಿದರೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸಬೇಕು...

ಮಳೆ ಹಾನಿ, ಪ್ರಕೃತಿ ವಿಕೋಪ ಕುರಿತು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಸೋಮವಾರ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಈ ಸೂಚನೆ ನೀಡಿದರು.

ಮಳೆ ಹಾನಿ ಸಮೀಕ್ಷೆ ಸಂಬಂಧ ಜಿಲ್ಲಾಧಿಕಾರಿಗಳನ್ನು ದೇಶಪಾಂಡೆ ತರಾಟೆಗೆ ತೆಗೆದುಕೊಂಡರು. ಮೂರೂ ಜಿಲ್ಲೆಗಳಲ್ಲಿ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಗರಂ ಆದರು.

‘ಸಮೀಕ್ಷೆ ನಡೆಸುವಾಗ ಉದಾರತೆ ತೋರಿ. ಮಳೆಯಿಂದ ಬೆಳೆ ಹಾನಿ, ಮನೆ ಹಾನಿ, ಜೀವ ಹಾನಿ ಹಾಗೂ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು. ಮಳೆಯಿಂದಾಗಿ ಮನೆ ಬಿದ್ದ ಮೇಲೆ ಪರಿಹಾರ ನೀಡಲು ಎಷ್ಟು ದಿನ ಬೇಕು? ಹೆಚ್ಚು ದಿನ ಕಾಯಿಸಬಾರದು. ಹೆಚ್ಚು ಹಾನಿಯಾಗಿದ್ದರೆ ಹೆಚ್ಚು ಪರಿಹಾರ ನೀಡಿ’ ಎಂದು ತಾಕೀತು ಮಾಡಿದರು.

ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 12 ಜಾನುವಾರು ಸಾವನ್ನಪ್ಪಿದ್ದು, 296 ಮನೆಗಳಿಗೆ ಹಾನಿಯಾಗಿದೆ. 304 ಎಕರೆ ಬೆಳೆ ನಷ್ಟವಾಗಿದ್ದು, ಒಟ್ಟು ₹ 36.86 ಲಕ್ಷ ಪರಿಹಾರ ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 16 ಜಾನುವಾರುಗಳು ಸಾವನ್ನಪ್ಪಿದ್ದು, 326 ಮನೆಗಳಿಗೆ ಹಾನಿ ಉಂಟಾಗಿದೆ. 111 ಹೆಕ್ಟೇರ್‌ ಬೆಳೆ ನಷ್ಟವಾಗಿದ್ದು, ಒಟ್ಟು ₹ 34.18 ಲಕ್ಷ ಪರಿಹಾರ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೂರು ಜಾನುವಾರು ಗಳು ಸಾವನ್ನಪ್ಪಿದ್ದು, 90 ಮನೆಗಳಿಗೆ ಹಾನಿ ಉಂಟಾಗಿದೆ. 300 ಎಕರೆ ಬೆಳೆ ನಷ್ಟವಾಗಿದೆ. ಆದರೆ, ಕೆರೆ ಕಟ್ಟೆಗಳು ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಲ್ಲ ಎಂದು ಆಯಾಯ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತ ನಾಡಿದ ಶಿವಶಂಕರ್‌ ರೆಡ್ಡಿ, ‘ನೋಂದಣಿ ಮಾಡಿಕೊಂಡ ರೈತರಿಗೆ ತ್ವರಿತಗತಿಯಲ್ಲಿ ವಿಮೆ ಪಾವತಿಸುವಂತೆ ವಿಮೆ ಕಂಪನಿಗಳಿಗೆ ಸೂಚನೆ ನೀಡ ಲಾಗಿದೆ. ಕಬ್ಬು ಅರೆಯುವ ಕಾರ್ಯ ಶುರುವಾಗಿಲ್ಲವೆಂದು ರೈತರು ದೂರಿದ್ದಾರೆ. ಈ ಬಗ್ಗೆ ಸಚಿವರು, ಅಧಿಕಾರಿಗಳೊಂದಿಗೆ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದರು.

‘ಚಾಮರಾಜನಗರ, ಮೈಸೂರು, ಬೆಳಗಾವಿ, ದಾವಣಗೆರೆ, ತುಮಕೂರು ಸೇರಿ ಸುಮಾರು 1,803 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಕಬಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವರುಣಾ ಭಾಗದಲ್ಲಿ ಭತ್ತದ ಬೆಳೆಗೆ ಹಾನಿ ಉಂಟಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕರಾದ ಎಚ್‌.ವಿಶ್ವನಾಥ್‌, ಡಾ.ಯತೀಂದ್ರ, ಎಂ.ಅಶ್ವಿನ್‌ ಕುಮಾರ್‌, ಸಿ.ಅನಿಲ್‌ಕುಮಾರ್‌, ಸುರೇಶ್‌ ಗೌಡ, ನರೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿ.ಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಇದ್ದರು.

ಶೀಘ್ರದಲ್ಲಿ 3 ಸಾವಿರ ಹುದ್ದೆ ಭರ್ತಿ

ಮೈಸೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 3 ಸಾವಿರ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು 5 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ತಿಳಿಸಿದರು.

ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಆಯ್ಕೆ ಮಾಡಲಾಗಿರುವ 600 ಕೃಷಿ ಸಹಾಯಕರಿಗೆ ಸದ್ಯದಲ್ಲೇ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದರು.

ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಉತ್ತಮ ಮಾರುಕಟ್ಟೆ ಒದಗಿಸಬೇಕು, ಬೆಂಬಲ ಬೆಲೆ ನೀಡಬೇಕು, ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ರೈತರು ಕೋರಿದರು.

ಪಾಂಡವಪುರ, ಮಂಡ್ಯ ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿ ಕಬ್ಬು ಖರೀದಿಸಬೇಕು, ದೇಸಿ ತಳಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು, ನಾಲೆಗಳಿಗೆ ನೀರು ತುಂಬಿಸಬೇಕು ಎಂದು ಮನವಿ ಮಾಡಿದರು.

ಮಳೆಯಿಂದಾಗಿ ಕೆಲವೆಡೆ ಅಂಗನವಾಡಿ, ಶಾಲೆಗಳಿಗೂ ಹಾನಿ ಆಗಿದೆ. ಈ ಮಾಹಿತಿಯನ್ನು ಏಕೆ ಮುಚ್ಚಿಟ್ಟಿದ್ದೀರಿ. ಕೂಡಲೇ ವರದಿ ನೀಡಿ‌
ಎನ್‌.ಮಹೇಶ್‌‌, ಪ್ರಾಥಮಿಕ, ‍ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT