ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಿದರೂ ಬೇಕು ವ್ಯಾಯಾಮ..

Last Updated 2 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮನೆಗೆಲಸ ಮಾಡಿದರಷ್ಟೇಸಾಕು. ಹೆಚ್ಚಿನ ವ್ಯಾಯಾಮದ ಅಗತ್ಯ ಇಲ್ಲ ಎನ್ನುವುದು ಕೆಲವು ಮಹಿಳೆಯರ ಅಭಿಪ್ರಾಯ. ಈ ಬಗ್ಗೆ ನಿಮ್ಮ ಅನಿಸಿಕೆ?

ಮನೆಕೆಲಸ ಮಾಡುವುದರಿಂದ ನಾವು ಹೆಚ್ಚು ಉತ್ಸಾಹದಿಂದ ಇರಬಹುದು. ಮನೆಯಲ್ಲಿ ಮಕ್ಕಳಿಗೆ ಅವರೊಂದಿಗಿನ ಆಟ, ಒಡನಾಟ ಎಲ್ಲವೂ ಹುರುಪು ನೀಡುತ್ತವೆ. ಇವೆಲ್ಲ ನಿಜ. ಇದರೊಂದಿಗೆ ವ್ಯಾಯಾಮ ಮಾಡುವುದು ಅಥವಾ ಮಕ್ಕಳ ಒಟ್ಟಿಗೆ ಸಂಜೆ ವೇಳೆಯಲ್ಲಿ ವಾಕ್‌ ಹೊರಡುವುದುನಮ್ಮಲ್ಲಿ ಜೀವಕಳೆ ತುಂಬುತ್ತದೆ. ಒಳ್ಳೇ ಗಾಳಿ, ಉತ್ತಮ ವಾತಾವರಣ ಸಿಗುತ್ತದೆ. ಹಾಗಾಗಿ, ನಾವು ಹೆಚ್ಚು ಸೋಷಿಯಲ್‌ ಆಗಿ ಇರಲು ಸಾಧ್ಯವಾಗುತ್ತದೆ.ಇದರ ಜೊತೆಗೆ, ಸ್ನೇಹಿತ ಅವರೊಂದಿಗೆ, ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಉತ್ತಮ ಆರೋಗ್ಯ ಮತ್ತು ಆರೋಗ್ಯಯುತ ದೇಹ ಇದ್ದರೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅದು ನಮ್ಮನ್ನು ಹೆಚ್ಚು ಪಾಸಿಟಿವ್‌ ವ್ಯಕ್ತಿಯನ್ನಾಗಿ ಮಾಡುತ್ತದೆ.

ಉದ್ಯೋಗಸ್ಥ ಹೆಣ್ಣುಮಕ್ಕಳಿಗೆ ರಾತ್ರಿಪಾಳಿ ಇರುತ್ತದೆ. ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಲು ಆಗುವುದಿಲ್ಲ. ಹೀಗಿರುವಾಗ ಕೆಲಸಕ್ಕೆ ಹೋಗುವ ಮಹಿಳೆಯರು ಫಿಟ್‌ ಇರುವುದು ಹೇಗೆ?

ಹೌದು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಮಯ ದೊರೆಯುವುದು ಕಡಿಮೆ. ಆದರೆ, ಇರುವ ಸಮಯ ಮತ್ತು ಅವಕಾಶದಲ್ಲೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗ ಇದೆ.ಸಾಮಾನ್ಯವಾಗಿ ಎಲ್ಲ ಕಚೇರಿಗಳಲ್ಲೂ ಲಿಫ್ಟ್‌ ಇರುತ್ತದೆ. ಇದನ್ನು ಬಳಸುವುದನ್ನು ಮೊದಲು ಬಿಡಬೇಕು. ಸಾಧ್ಯವಾದಷ್ಟು ಮೆಟ್ಟಿಲುಗಳನ್ನೇ ಬಳಸಬೇಕು. ಕಚೇರಿಗೆ ನೀವು ಬಸ್‌ ಅಥವಾ ಆಟೊ ಮೂಲಕವೋ ಹೋಗುತ್ತೀರಿ. ಹತ್ತು ನಿಮಿಷ ಕಚೇರಿಗೆ ನಡೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಊಟವಾದ ಬಳಿಕ 5 ನಿಮಿಷ ಬ್ರಿಸ್ಕ್‌ ವಾಕ್‌ ಮಾಡಬಹುದು.

ಮದುವೆಯ ನಂತರ ಹಲವು ಮಹಿಳೆಯರು ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಹೀಗೆ ಯೋಚಿಸುವವರಿಗೆ ಏನು ಹೇಳುತ್ತೀರಿ?

ಇಲ್ಲಿ ಕೆಲವು ವಿಷಯ ಹೇಳಿಬಿಡುತ್ತೇನೆ. ನಮ್ಮ ಆಹಾರವೇ ಸರಿ ಇಲ್ಲದೇ ಎಷ್ಟು ವ್ಯಾಯಾಮ ಮಾಡಿದರೂ ಉಪಯೋಗ ಇಲ್ಲ.ಮೊದಲು ಆಹಾರ ನಂತರ ವ್ಯಾಯಾಮ. ಮೊದಲು ಹೆಚ್ಚು ಪೌಷ್ಟಿಕ ಆಹಾರ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ಇನ್ನೊಂದು ವಿಷಯ.ವ್ಯಾಯಾಮ ಕೇವಲ ದೈಹಿಕ ಆರೋಗ್ಯ ಸೇರಿದ್ದು ಮಾತ್ರವಲ್ಲ. ಅದು ಮಾನಸಿಕವೂ ಹೌದು. ಮೊದಲೇ ಹೇಳಿದ ಹಾಗೆ, ವ್ಯಾಯಾಮದಿಂದ ಹೆಚ್ಚು ಉತ್ಸಾಹ ಹಾಗೂ ಆತ್ಮವಿಶ್ವಾಸ ನಮ್ಮದಾಗುತ್ತದೆ. ಹೀಗಿರುವಾಗ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.

ಹೆರಿಗೆ ನಂತರ ಸಾಮಾನ್ಯವಾಗಿ ಮಹಿಳೆಯರು ದಪ್ಪಗಾಗುತ್ತಾರೆ. ಅವರ ಆಹಾರಕ್ರಮ ಹೇಗಿರಬೇಕು?

ಒಬ್ಬ ತಾಯಿ ಏನು ತಿನ್ನುತ್ತಾಳೋ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತಾಯಿಯ ಆಹಾರಕ್ರಮ ಮುಖ್ಯವಾಗುತ್ತದೆ. ನನ್ನ ಆಹಾರದಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಎನ್ನುವುದನ್ನು ಮೊದಲು ಅರಿಯಬೇಕು. ದೇಹದ ಉಷ್ಣತೆ ಹೆಚ್ಚಾಗುವ ಆಹಾರ ಸೇವಿಸಬಾರದು. ಈ ಸಮಯದಲ್ಲಿ ಒಳ್ಳೆಯ ಕೊಬ್ಬಿನಂಶ ಇರುವ ಆಹಾರ ಸೇವಿಸಬೇಕು. ತೆಂಗಿನ ಎಣ್ಣೆಯೂ ಆರೋಗ್ಯಕ್ಕೆ ಉತ್ತಮ. ಕಾಳುಗಳು, ಹೆಚ್ಚು ಕಾರ್ಬೋಹೈಡ್ರೆಟ್ಸ್‌ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು.

ಋತುಚಕ್ರ ಸಮಯದಲ್ಲಿ ವ್ಯಾಯಾಮ ಮಾಡಬಾರದು ಎನ್ನುತ್ತಾರೆ. ಇದು ನಿಜವೇ?

ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿರುತ್ತದೆ. ಒಬ್ಬೊಬ್ಬರಿಗೆ ಬೆನ್ನು ನೋವು, ಕೆಲವರಿಗೆ ಹೊಟ್ಟೆ ನೋವು ಇತ್ಯಾದಿ. ಆದ್ದರಿಂದ ಎಲ್ಲರಿಗೂ ಒಂದೇ ಸಿದ್ಧ ಮಾದರಿ ಎಂದೇನೂ ಇಲ್ಲ. ಋತುಚಕ್ರದ ಸಂದರ್ಭದಲ್ಲಿ ವ್ಯಾಯಾಮ ಮಾಡಬಾರದು ಎಂಬಂತೆಯೂ ಇಲ್ಲ. ಅದು ನಮ್ಮ ಮನಸ್ಸಿನ ಇಚ್ಛೆ ಅಷ್ಟೆ. ಆ ಸಮಯದಲ್ಲಿ ಹೆಚ್ಚು ಹೊಟ್ಟೆ ಹಸಿಯುವ ಕಾರಣ ಸ್ವಲ್ಪ ಹೆಚ್ಚು ಆಹಾರ ಸೇವನೆ ಮಾಡಬಹುದು. ನೀರಿನ ಅಂಶವಿರುವ ಆಹಾರವನ್ನು ಹೆಚ್ಚು ತೆಗೆದುಕೊಳ್ಳಬೇಕು. ತುಂಬಾ ಕಠಿಣ ವ್ಯಾಯಾಮ (ಹಾರ್ಡ್‌ ವರ್ಕ್‌ಔಟ್‌) ಮಾಡಬಾರದು.

ಇವರು ಜೇಮಿ ಜಾಕೊಬ್ಸ್‌

ಜೇಮಿ ಜಾಕೊಬ್ಸ್‌ ಅವರ ವಾಸ ಆಸ್ಟ್ರೇಲಿಯಾ. ಇವರು ಫಿಟ್‌ನೆಸ್‌ ಕೋಚ್‌. ‘ಲೀವ್‌ ಯುವರ್‌ ಓನ್‌ ಫಿಟ್‌’ (Live Your Own Fit) ಎನ್ನುವ ಸಂಸ್ಥೆಯನ್ನು ಆರಂಭಿಸಿ, ಆ ಮೂಲಕ ಆರೋಗ್ಯ ಹಾಗೂ ಫಿಟ್‌ನೆಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಟ್ರಯಥ್ಲಾನ್ (1.9 ಕಿ.ಮೀ ಈಜು, 90 ಕಿ.ಮೀ ಬೈಕ್‌, 21.1 ಕಿ.ಮೀ ಓಟ ಅಥವಾ ಹಾಫ್‌ ಮ್ಯಾರಥಾನ್) ಈ ಮೂರನ್ನು ಕ್ರಮವಾಗಿ ಆಡಬೇಕು.ಇದರಲ್ಲಿ ಗೆ‌ದ್ದವರು ಐರನ್‌ಮ್ಯಾನ್‌ ಟೈಟಲ್‌ ಅನ್ನು ಮೂಡಿಗೇರಿಸಿಕೊಳ್ಳುತ್ತಾರೆ. ಈ ಸ್ಪರ್ಧೆಯಲ್ಲಿ ಇವರು ನಾಲ್ಕು ಬಾರಿ ಈ ಟೈಟಲ್‌ ಗೆದ್ದಿದ್ದಾರೆ.

ಜೇಮಿ ಜಾಕೊಬ್ಸ್‌ ಹಾಗೂ ಐರನ್‌ಮ್ಯಾನ್‌ ವರ್ಲ್ಡ್‌ ಚಾಂಪಿಯನ್‌ ಪೀಟ್‌ ಜೇಕಬ್ಸ್‌ ಅವರು ಈ ಸ್ಪರ್ಧೆಯ ರಾಯಭಾರಿಗಳಾಗಿದ್ದಾರೆ. ಈ ಕಾರಣಕ್ಕಾಗಿಯೇ ಎಲ್ಲೆಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರ ಭಾಗವಾಗಿಯೇ ಇತ್ತೀಚೆಗೆ ಬೆಂಗಳೂರಿಗೆ ಇಬ್ಬರು ಬಂದಿದ್ದರು.

2019 ಅಕ್ಟೋಬರ್‌ 20 ರಂದು ಗೋವಾದಲ್ಲಿ ಈ ಬಾರಿಯ ಟ್ರಯಥ್ಲಾನ್ ಅನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT