ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮರಕ್ಷಣೆಗೂ ಸೈ ಫಿಟ್‌ನೆಸ್‌ಗೂ ಜೈ

Last Updated 3 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ದೇಹವನ್ನೇ ಆಯುಧವನ್ನಾಗಿಸುವ ‘ಕರಾಟೆ’ ಕಲೆಯನ್ನು ವಿದ್ಯಾರ್ಥಿನಿಯರಿಗೆ ಕರಗತ ಮಾಡಿಸಿ, ಫಿಟ್‌ನೆಸ್‌ ಮಂತ್ರ ಮತ್ತು ಆತ್ಮರಕ್ಷಣೆಯ ತಂತ್ರವನ್ನು ಹೇಳಿಕೊಡುತ್ತಿದೆ ಹುಬ್ಬಳ್ಳಿಯ ‘ಆಸ್ಪೈರ್‌ ಸ್ಪೋರ್ಟ್ಸ್‌ ಕರಾಟೆ ಅಕಾಡೆಮಿ’.

ಮೂರು ವರ್ಷಗಳ ಹಿಂದೆ ನಾನು ಪಿಯು ಓದುತ್ತಿದ್ದೆ. ಒಮ್ಮೆ ಕ್ಲಾಸ್‌ ಮುಗಿಸಿಕೊಂಡು, ಕಾಲೇಜ್‌ ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಅವತ್ತು ಹುಬ್ಬಳ್ಳಿಯಲ್ಲಿ ಗಲಾಟೆ ನಡೆಯಿತು. ಇದ್ದಕ್ಕಿದ್ದಂತೆ ಬಸ್‌ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದರು. ಇದರಿಂದ ನನ್ನ ಸಹಪಾಠಿಗಳು ಮತ್ತು ಗುರುಗಳಿಗೆ ಗಾಜಿನ ಚೂರು ಚುಚ್ಚಿಕೊಂಡು ಗಾಯಗಳಾದವು. ಎಲ್ಲರೂ ಭಯದಿಂದ ಚೀರತೊಡಗಿದರು. ಆಗ ನಾನು, ಎಲ್ಲರಿಗೂ ಧೈರ್ಯ ತುಂಬಿ, ಸಮಾಧಾನ ಮಾಡಿದೆ. ಬಸ್‌ ಡೋರ್‌ಗೆ ಅಡ್ಡವಾಗಿ ನಿಂತು ಒಳಗೆ ಬರಲು ಯತ್ನಿಸುತ್ತಿದ್ದ ಕಿಡಿಗೇಡಿಗಳನ್ನು ತಡೆದೆ. ನಂತರ ನಾವೆಲ್ಲರೂ ಸುರಕ್ಷಿತವಾಗಿ ಮನೆ ತಲುಪಿದೆವು...’

ಇಂಥ ಸಂದರ್ಭಗಳಲ್ಲಿ ಧೃತಿಗೆಡದೆ, ಆತ್ಮವಿಶ್ವಾಸದಿಂದ ಸನ್ನಿವೇಶ ನಿಭಾಯಿಸುವ ಶಕ್ತಿ ನೀಡಿದ್ದು ‘ಕರಾಟೆ’ ಎನ್ನುತ್ತಾರೆ ಹುಬ್ಬಳ್ಳಿಯ ನೇಕಾರ ನಗರದ ‘ಆಸ್ಪೈರ್‌ ಸ್ಪೋರ್ಟ್ಸ್‌ ಕರಾಟೆ ಅಕಾಡೆಮಿ’ ವಿದ್ಯಾರ್ಥಿನಿ ಸಹನಾ ಕೊರ್ಲಹಳ್ಳಿ.

‘ನಾನು ಕಾಲೇಜಿಗೆ ಹೋಗುವಾಗ, ಮಹಿಳೆಯೊಬ್ಬರು ಸ್ಕೂಟರ್‌ನಿಂದ ಬಿದ್ದು ರಸ್ತೆಯಲ್ಲಿ ಒದ್ದಾಡುತ್ತಿದ್ದರು. ನನ್ನ ಸ್ನೇಹಿತೆಯರು ಮಹಿಳೆಯನ್ನು ನೋಡಿಕೊಂಡು ಸುಮ್ಮನೆ ನಿಂತಿದ್ದರು. ನಾನು ಸ್ಕೂಟರ್‌ ಅನ್ನು ಮೇಲೆತ್ತಿ, ಮಹಿಳೆಗೆ ನೀರು ಕುಡಿಸಿ, ಧೈರ್ಯ ತುಂಬಿ ಮನೆಗೆ ಕಳುಹಿಸಿಕೊಟ್ಟೆ. ಇಂತಹ ಸಾಮಾಜಿಕ ಕಳಕಳಿ, ಮುನ್ನುಗ್ಗುವ ಶಕ್ತಿ ತುಂಬಿದ್ದು ಕರಾಟೆ’ ಎನ್ನುತ್ತಾರೆ ಬಿ.ಕಾಂ. ವಿದ್ಯಾರ್ಥಿನಿ ಪೂಜಾ ಮಿಸ್ಕಿನ್‌.

ಇಂತಹ ನೂರೆಂಟು ಸ್ಫೂರ್ತಿದಾಯಕ ಅನುಭವಗಳನ್ನು ಹೇಳಿಕೊಳ್ಳುತ್ತಾರೆ ಈ ಅಕಾಡೆಮಿಯಲ್ಲಿ ಕಲಿಯುತ್ತಿರುವ ಸುಮಾರು 200 ವಿದ್ಯಾರ್ಥಿನಿಯರು.

ಕ್ರೀಡಾ ಸ್ಫೂರ್ತಿಯೇ ಅಕಾಡೆಮಿಯ ಜೀವಾಳ

ಕರಾಟೆ ಮಾಸ್ಟರ್ಸ್‌ಗಳಾದ ಶರಣಪ್ಪ ಮಮ್ಮಿಗಟ್ಟಿ, ಸಂಜು ಮಹಾಡೆ, ನಾಗರಾಜ ಮಿಸ್ಕಿನ್‌, ಮುಸ್ತಾಕ್‌ ಊಂಟ್‌ ವಾಲೆ, ಪುಲಿಕೇಶಿ ಮಲ್ಯಾಳ, ಮಹಮ್ಮದ್‌ ರಫೀಕ್‌, ಅರುಣ್‌ ಕಾಡಮ್ಮನವರ ಮುಂತಾದ ಗೆಳೆಯರು ಹುಬ್ಬಳ್ಳಿಯ ಅಕಾಡೆಮಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರದಿಂದ ಹೊರಬಂದ 9 ಸಮಾನ ಮನಸ್ಕ ಗೆಳೆಯರು ಹುಬ್ಬಳ್ಳಿಯಲ್ಲಿ ‘ಆಸ್ಪೈರ್‌ ಸ್ಪೋರ್ಟ್ಸ್‌ ಕರಾಟೆ ಅಕಾಡೆಮಿ’ಯನ್ನು 2017ರಲ್ಲಿ ಹುಟ್ಟುಹಾಕಿದರು. ಆರಂಭದಲ್ಲಿ ತಲಾ 30 ಸಾವಿರ ಬಂಡವಾಳ ಹೂಡಿ, ನೇಕಾರ ನಗರದಲ್ಲಿ ಕಚೇರಿ ತೆರೆದರು. ಇವರ ಶಿಷ್ಯರು ಕೂಡ ಗುರುಗಳನ್ನು ಹಿಂಬಾಲಿಸಿ, ಆಸ್ಪೈರ್‌ ಅಕಾಡೆಮಿಗೆ ಸೇರಿದರು.

ಕಿಕ್ಸ್‌, ಫೈಟ್‌, ಕಟ್ಟಾ, ಸೆಲ್ಫ್‌ ಡಿಫೆನ್ಸ್‌, ಫಿಟ್‌ನೆಸ್‌ ಹೀಗೆ ಒಂದೊಂದು ವಿಭಾಗದಲ್ಲೂ ಒಬ್ಬೊಬ್ಬ ಮಾಸ್ಟರ್‌ಗಳು ಪರಿಣತಿ ಹೊಂದಿದ್ದಾರೆ. ಇವರಲ್ಲಿ ನಾಲ್ವರು ‘ಬ್ಲ್ಯಾಕ್‌ ಬೆಲ್ಟ್‌’ (ಫೋರ್ತ್‌ ಡ್ಯಾನ್‌) ಪಟುಗಳಾಗಿದ್ದು, ವೈಯಕ್ತಿವಾಗಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಹೀಗೆ ಉತ್ತಮ ತರಬೇತಿ ಮತ್ತು ಕ್ರೀಡಾ ಬದ್ಧತೆಯಿರುವ ಕಾರಣ ಈ ಅಕಾಡೆಮಿಯು ಆರಂಭವಾದ ಒಂದೂವರೆ ವರ್ಷದಲ್ಲೇ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದಲ್ಲಿ 30 ಶಾಖೆಗಳನ್ನು ತೆರೆದಿದೆ. ಜತೆಗೆ, ಕಲಘಟಗಿ, ಕ್ಯಾಸಲ್‌ರಾಕ್‌, ದಾಂಡೇಲಿ, ಕೊಪ್ಪಳಗಳಲ್ಲೂ ಶಾಖೆಗಳನ್ನು ತೆರೆದಿದೆ. ಅಕಾಡೆಮಿಯಲ್ಲಿ 4ನೇ ವಯಸ್ಸಿನ ಬಾಲಕ– ಬಾಲಕಿಯರಿಂದ 40ರ ವಯೋಮಾನದ ಪುರುಷ ಮತ್ತು ಮಹಿಳೆಯರು ಸೇರಿದಂತೆ ಸುಮಾರು 700 ಮಂದಿ ಕರಾಟೆ ಕಲಿಯುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಕರಾಟೆ ತರಗತಿ ನಡೆಯುತ್ತವೆ.

ಫಿಟ್‌ನೆಸ್‌ಗೆ ಒತ್ತು

‘ಕರಾಟೆ ಅಭ್ಯಾಸಕ್ಕೂ ಮುನ್ನ, ವಾರ್ಮ್‌ಅಪ್‌ ಚಟುವಟಿಕೆಗಳಿಗೆ ಒತ್ತು ನೀಡುತ್ತೇವೆ. ರನ್ನಿಂಗ್‌, ಜಂಪಿಂಗ್‌, ಬೆಂಡಿಂಗ್‌, ಸ್ಟ್ರೆಚಿಂಗ್‌, ಸಿಟ್ಟಿಂಗ್‌, ಸ್ಲೀಪಿಂಗ್‌, ಬ್ರೀತಿಂಗ್‌ ಎಕ್ಸರ್‌ಸೈಸ್‌ಗಳನ್ನು ಮಾಡಿಸುತ್ತೇವೆ. ಇದರಿಂದ ದೇಹದ ಜಡತ್ವ ನಿವಾರಣೆಯಾಗಿ, ದೇಹ ಬಿಲ್ಲಿನಂತೆ ಬಳಕುತ್ತದೆ. ನಂತರ ಕರಾಟೆ ಪಟ್ಟುಗಳನ್ನು ಕಲಿಯುತ್ತಾರೆ. ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಕೀಳರಿಮೆ, ಹಿಂಜರಿಕೆ, ಭಯ ಹೋಗಲಾಡಿಸಿ; ಆತ್ಮವಿಶ್ವಾಸ, ಧೈರ್ಯ ತುಂಬುತ್ತೇವೆ. ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುವ, ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ರೂಢಿಸುತ್ತೇವೆ. ಓದು, ಕ್ರೀಡೆ, ಸಾಮಾಜಿಕ ಸೇವೆ ಸೇರಿದಂತೆ ಸರ್ವತೋಮುಖವಾಗಿ ಬೆಳೆಯಲು ಪೂರಕ ವಾತಾವರಣ ಕಲ್ಪಿಸುತ್ತೇವೆ. 2020ರ ಒಲಿಂಪಿಕ್ಸ್‌ನ ಕರಾಟೆ ವಿಭಾಗದಲ್ಲಿ ನಮ್ಮ ಅಕಾಡೆಮಿ ವಿದ್ಯಾರ್ಥಿನಿಯೊಬ್ಬರು ಭಾಗವಹಿಸಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ’ ಎನ್ನುತ್ತಾರೆ ಕರಾಟೆ ಮಾಸ್ಟರ್‌ ಪುಲಿಕೇಶಿ ಮಲ್ಯಾಳ.

‘ನಮ್ಮಲ್ಲಿರುವ ಸಿಟ್ಟನ್ನು ಹೋಗಲಾಡಿಸಿ, ಸಂಯಮವನ್ನು ಕರಾಟೆ ಕಲೆ ಕಲಿಸಿಕೊಡುತ್ತದೆ. ಕೆಟ್ಟ ಚಟಗಳನ್ನು ದೂರ ಮಾಡಿ, ಸಕಾರಾತ್ಮಕ ಆಲೋಚನೆಯನ್ನು ಬಿತ್ತುತ್ತದೆ. ಗುರು–ಹಿರಿಯರಿಗೆ ಗೌರವಿಸುವುದು, ಸಮಯಪಾಲನೆ, ಶಿಸ್ತು ಮುಂತಾದ ಗುಣಗಳನ್ನು ಬೆಳೆಸಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ. ಅಸ್ತಮಾ ಇದ್ದ ವೈದ್ಯರೊಬ್ಬರು, ಒಂದು ವರ್ಷ ಕರಾಟೆ ಅಭ್ಯಾಸ ಮಾಡಿದ ಫಲವಾಗಿ, ಸಂಪೂರ್ಣ ಗುಣಮುಖರಾದರು. ಹೀಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹೊಸ ಉತ್ಸಾಹ, ಚೈತನ್ಯ ತುಂಬುತ್ತದೆ’ ಎನ್ನುತ್ತಾರೆ ಬ್ಲ್ಯಾಕ್‌ ಬೆಲ್ಟ್‌ ಕರಾಟೆ ಪಟು ಸ್ಫೂರ್ತಿ ಪಾಟೀಲ.

ದೇಹವೇ ಆಯುಧ!

‘ಕರಾಟೆ ಪಟುಗಳಿಗೆ ದೇಹವೇ ಆಯುಧ. ಕಣ್ಣು ಮುಚ್ಚಿ, ಕಣ್ಣು ಬಿಡುವುದರಲ್ಲಿ ಎದುರಾಳಿಯ ಮೇಲೆ ಕರಾಟೆ ಪಟುಗಳು ಪಂಚಿಂಗ್‌ ಮಾಡಿರುತ್ತಾರೆ. ವಿದ್ಯಾರ್ಥಿನಿಯರು ಶಾಲೆ ಮತ್ತು ಕಾಲೇಜಿಗೆ ಹೋಗುವಾಗ ಅವರ ಬಳಿ ಇರುವ ಸ್ಕೂಲ್‌ ಬ್ಯಾಗ್, ಹೇರ್‌ ಪಿನ್‌, ಪೆನ್‌, ಬುಕ್‌, ವಾಟರ್‌ ಕ್ಯಾನ್‌ ಇವುಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡು, ಎದುರಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ, ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ನಾವು ಹೇಳಿಕೊಡುತ್ತೇವೆ. ಹಾಗಾಗಿಯೇ ಕರಾಟೆ ಕಲಿತ ವಿದ್ಯಾರ್ಥಿನಿಯರು ಯಾವ ಭಯವೂ ಇಲ್ಲದೇ ಒಬ್ಬಂಟಿಯಾಗಿ ಓಡಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅಕಾಡೆಮಿಯ ಅಧ್ಯಕ್ಷ ಹಾಗೂ ಕರಾಟೆ ಮಾಸ್ಟರ್‌ ಶರಣಪ್ಪ ಬಮ್ಮಿಗಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT