ಶುಕ್ರವಾರ, ಅಕ್ಟೋಬರ್ 18, 2019
24 °C
ರಣಜಿ ಕ್ರಿಕೆಟ್: ಅಲ್ಪಮೊತ್ತಕ್ಕೆ ಕುಸಿದ ಗುಜರಾತ್ : ಮಯಂಕ್, ನಿಶ್ಚಲ್‌ಗೆ ಆಘಾತ

ಕರ್ನಾಟಕ ಬೌಲರ್‌ಗಳ ಮೇಲುಗೈ

Published:
Updated:
Deccan Herald

ಸೂರತ್: ಕರ್ನಾಟಕದ ಐವರು ಬೌಲರ್‌ಗಳ ‘ಜೊತೆಯಾಟ’ದ ಮುಂದೆ ಗುಜರಾತ್ ತಂಡವು ಶುಕ್ರವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯಿತು.

ಇಲ್ಲಿಯ ಲಾಲ್‌ಭಾಯಿ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ತಂಡವು 69.4 ಓವರ್‌ಗಳಲ್ಲಿ 216 ರನ್‌ ಗಳಿಸಿತು. ಕರ್ನಾಟಕದ ವಿನಯಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ, ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಅವರು ತಲಾ  ಎರಡು ವಿಕೆಟ್ ಗಳಿಸಿದರು.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ಬಹಳ ಬೇಗನೇ ಆಘಾತ ಅನುಭವಿಸಿತು. ದಿನದಾಟದ ಕೊನೆಗೆ 14.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 45 ರನ್‌ ಗಳಿಸಿದೆ. ಆರ್. ಸಮರ್ಥ್‌ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ. ಮಯಂಕ್ ಅಗರವಾಲ್ (25; 36ಎಸೆತ; 4ಬೌಂಡರಿ) ಮತ್ತು ಡೇಗಾ ನಿಶ್ಚಲ್ (12; 38ಎಸೆತ; 2ಬೌಂಡರಿ) ಔಟಾದರು.

ಬೌಲರ್‌ಗಳ ಮೇಲುಗೈ: ಹೋದ ವಾರ ಸೌರಾಷ್ಟ್ರ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡವು ಸೋತಿತ್ತು. ಜಯದ ಹಾದಿಗೆ ಮರಳುವ ಪ್ರಯತ್ನದಲ್ಲಿರುವ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ನ್ಯೂಜಿಲೆಂಡ್ ಪ್ರವಾಸ ಮುಗಿಸಿಕೊಂಡು ಬಂದಿರುವ ಮಯಂಕ್ ಮತ್ತು ಕೆ. ಗೌತಮ್ ಸ್ಥಾನ ಪಡೆದರು. ಬಿ.ಆರ್. ಶರತ್ ಅವರಿಗೆ ವಿಶ್ರಾಂತಿ ನೀಡಿ; ಶ್ರೀನಿವಾಸ್ ಶರತ್ ಅವರಿಗೆ ವಿಕೆಟ್‌ಕೀಪಿಂಗ್ ಹೊಣೆ ನೀಡಲಾಯಿತು. ಕರುಣ್ ನಾಯರ್, ಎಡಗೈ ಸ್ಪಿನ್ನರ್ ಸುಚಿತ್, ಮಧ್ಯಮವೇಗಿ ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ ಅವರನ್ನು ಕೈಬಿಡಲಾಯಿತು. ಎಡಗೈ ಮಧ್ಯಮವೇಗಿ ಪ್ರತೀಕ್ ಜೈನ್, ರೋನಿತ್ ಮೋರೆ ಸ್ಥಾನ ಪಡೆದರು. ಯುವ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಕೆ.ವಿ. ಸಿದ್ಧಾರ್ಥ್ ಸ್ಥಾನ ಉಳಿಸಿಕೊಂಡರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ತಂಡದ ಆರಂಭ ಉತ್ತಮವಾಗಿತ್ತು. ಕೇತನ್ ಡಿ ಪಟೇಲ್ (13 ರನ್) ಮತ್ತು ನಾಯಕ ಪ್ರಿಯಾಂಕ್ ಪಾಂಚಾಲ್ ಅವರು ಗಟ್ಟಿ ಬುನಾದಿ ಹಾಕುವ ಪ್ರಯತ್ನ ಮಾಡಿದರು. ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಬಂದಿರುವ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಆರಂಭಿಕ ಜೊತೆಯಾಟವನ್ನು ಮುರಿದರು. ಕೇತನ್ ಪಟೇಲ್ ಔಟಾದರು. ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಪ್ರಿಯಾಂಕ್ ಮಾತ್ರ ದಿಟ್ಟತನದಿಂದ ಬ್ಯಾಟ್ ಬೀಸಿದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆ ಕುಸಿಯಿತು. ಕೊನೆಯಲ್ಲಿ ಪಿಯೂಷ್ ಚಾವ್ಲಾ (34 ರನ್) ಮತ್ತು ಮೇಹುಲ್ ಪಟೇಲ್ (31 ರನ್) ಅವರು ಮಾತ್ರ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಅದರಿಂದಾತಿ 200ರ ಗಡಿ ದಾಟಲು ಸಾಧ್ಯವಾಯಿತು.

ಗುಜರಾತ್ ತಂಡವು ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿದ್ದು ಒಂದರಲ್ಲಿಯೂ ಸೋತಿಲ್ಲ. ಕರ್ನಾಟಕವು ನಾಲ್ಕು ಪಂದ್ಯಗಳಲ್ಲಿ ಒಂದು ಜಯ ಮತ್ತು ಎರಡು ಡ್ರಾ ಸಾಧಿಸಿದೆ.

Post Comments (+)