ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಾಂತ್‌ ಮೇಲೆ ನಿರೀಕ್ಷೆ

ಇಂದಿನಿಂದ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 1 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಇಂಡಿಯಾ ಓಪನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಭಾರತದ ಕಿದಂಬಿ ಶ್ರೀಕಾಂತ್‌, ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವತ್ತ ಚಿತ್ತ ನೆಟ್ಟಿದ್ದಾರೆ.

ಮಂಗಳವಾರದಿಂದ ಪಂದ್ಯಗಳು ನಡೆಯಲಿವೆ.

ಶ್ರೀಕಾಂತ್‌ ಅವರು ಭಾನುವಾರ ಮುಗಿದ ಇಂಡಿಯಾ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಎದುರು ಸೋತಿದ್ದರು. ಭಾರತದ ಆಟಗಾರ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನಲ್ಲಿ 17 ತಿಂಗಳ ನಂತರ ಪ್ರಶಸ್ತಿ ಸುತ್ತು ‍ಪ್ರವೇಶಿಸಿದ್ದರು.

ಬುಧವಾರ ನಡೆಯುವ ‍ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ 26ರ ಹರೆಯದ ಶ್ರೀಕಾಂತ್‌, ಇಂಡೊನೇಷ್ಯಾದ ಇಶಾನ್‌ ಮೌಲಾನ ಮುಸ್ತಾಫ ಎದುರು ಸೆಣಸಲಿದ್ದಾರೆ.

‘ಹೋದ ವಾರ ನಡೆದ ಇಂಡಿಯಾ ಓಪನ್‌ನಲ್ಲಿ ಉತ್ತಮ ಆಟ ಆಡಿದ್ದೆ. ಈ ಟೂರ್ನಿಯಲ್ಲೂ ಹಿಂದಿನ ಆಟವನ್ನು ಮುಂದುವರಿಸಿ ಪ್ರಶಸ್ತಿ ಜಯಿಸಲು ಪ್ರಯತ್ನಿಸುತ್ತೇನೆ’ ಎಂದು ಶ್ರೀಕಾಂತ್‌ ಹೇಳಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಭಾರತದ ಭರವಸೆಯಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು, ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಮಲೇಷ್ಯಾ ಓಪನ್‌ನಲ್ಲಿ ಭಾರತದ ಆಟಗಾರ್ತಿ ಐದನೇ ಶ್ರೇಯಾಂಕ ಹೊಂದಿದ್ದಾರೆ. ಮೊದಲ ಸುತ್ತಿನಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ಎದುರು ಪೈಪೋಟಿ ನಡೆಸಲಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್‌ ಕೂಡಾ ಪ್ರಶಸ್ತಿಯ ಕನವರಿಕೆಯಲ್ಲಿದ್ದಾರೆ. ಸ್ವಿಸ್‌ ಓಪನ್‌ ಮತ್ತು ಇಂಡಿಯಾ ಓಪನ್‌ನಿಂದ ಹಿಂದೆ ಸರಿದಿದ್ದ ಸೈನಾ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ಎದುರು ಆಡಲಿದ್ದಾರೆ. ಸೈನಾ ಈ ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕ ಹೊಂದಿದ್ದಾರೆ.

ಎಚ್‌.ಎಸ್‌.ಪ್ರಣಯ್ ಕೂಡಾ ಉತ್ತಮ ಸಾಮರ್ಥ್ಯ ತೋರುವ ಉತ್ಸಾಹದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಸಿತ್ತಿಕೋಮ್‌ ಥಾಮಸಿನ್‌ ಎದುರು ಹೋರಾಡಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರು ಜಪಾನ್‌ನ ತಕುಟೊ ಇಂಜ್ವೆ ಮತ್ತು ಯೂಕಿ ಕನೆಕೊ ಎದುರು ಸೆಣಸಲಿದ್ದಾರೆ.

ಸಮೀರ್‌ ವರ್ಮಾ, ಚೀನಾದ ಶಿ ಯೂಕಿ ಎದುರು ಆಡಲಿದ್ದು, ಮಿಶ್ರ ಡಬಲ್ಸ್‌ ಜೋಡಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಚೀನಾದ ಹಾನ್‌ ಚೆಂಗ್‌ಕಾಯ್‌ ಮತ್ತು ಜಾವೊ ಹಾವೊಡೊಂಗ್‌ ಎದುರು ಸೆಣಸಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಕಣದಲ್ಲಿದ್ದು, ಮೊದಲ ಸುತ್ತಿನಲ್ಲಿ ಭಾರತದ ಜೋಡಿಯು ಬೇಕ್‌ ಹಾ ನಾ ಮತ್ತು ಕಿನ್‌ ಹೈ ರಿನ್‌ ಎದುರು ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT