ಭರವಸೆಯ ಓಟಗಾರ್ತಿ ಮೇಘಾ ಸಂಗಮ, ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟು

7
ಹೊಲದಲ್ಲೇ ತರಬೇತಿ

ಭರವಸೆಯ ಓಟಗಾರ್ತಿ ಮೇಘಾ ಸಂಗಮ, ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟು

Published:
Updated:
Deccan Herald

ಬಸವನಬಾಗೇವಾಡಿ: ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಕ್ರೀಡಾಸಕ್ತಿ. ಸಾಧನೆಗೈಯಬೇಕು ಎಂಬ ಛಲ ಹೊಂದಿದ್ದ ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ತಾಲ್ಲೂಕಿನ ಹೆಬ್ಬಾಳ ಗ್ರಾಮದ ಮೇಘಾ ಸಂಗಮ ಅವರಿಗೆ ತಮ್ಮ ಹೊಲವೇ ತರಬೇತಿ ಮೈದಾನ.

ನಿಡಗುಂದಿಯ ಜಿ.ವಿ.ಎಸ್ ಪ್ರೌಢಶಾಲೆಯಲ್ಲಿ ಪ್ರವೇಶ ಪಡೆದ ನಂತರ, ಮೇಘಾರ ಕ್ರೀಡಾಸಕ್ತಿಯನ್ನು ಅರಿತ ದೈಹಿಕ ಶಿಕ್ಷಣ ಶಿಕ್ಷಕಿ ಪುರ್ಣಿಮಾ ಶೀಲವಂತ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಶಿಕ್ಷಕಿಯ ಮಾರ್ಗದರ್ಶನದಲ್ಲಿ ಶಾಲಾ ಅವಧಿಯಲ್ಲಿ ಮೇಘಾ ತರಬೇತಿ ಪಡೆದರು.

ನಿತ್ಯ ನಸುಕಿನಲ್ಲಿ ತಮ್ಮ ಹೊಲವನ್ನೇ ತಾಲೀಮಿನ ಟ್ರ್ಯಾಕ್‌ ಮಾಡಿಕೊಂಡ ಮೇಘಾ, 9ನೇ ತರಗತಿಯಲ್ಲಿ ಓದುತ್ತಿರುವಾಗ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಮೂಲಕ ಶಾಲೆಗೆ ಕೀರ್ತಿ ತಂದರು. 10ನೇ ತರಗತಿಯ ಅಧ್ಯಯನದ ಜತೆಗೆ ಕ್ರೀಡಾಸಕ್ತಿಯನ್ನು ಮುಂದುವರೆಸಿ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗುವ ಅರ್ಹತೆ ಪಡೆದಿದ್ದರು.

ಪ್ರಸಕ್ತ ವರ್ಷ ಬಸವನಬಾಗೇವಾಡಿಯ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕೆ ಪವೇಶ ಪಡೆದಿರುವ ಮೇಘಾ ಸಂಗಮ, ತಾನು ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಇಂಗಿತವನ್ನು ಪ್ರಾಚಾರ್ಯ ಡಾ.ಸಿ.ಕೆ.ಹೊಸಮನಿ ಬಳಿ ವ್ಯಕ್ತಪಡಿಸಿದರು.

ಮೇಘಾ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸಿ, ಓಟದ ಸ್ಪರ್ಧೆಗೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ, ಶೂ ವಿತರಿಸಿ, ನಿತ್ಯ ತರಬೇತಿ ಹೊಂದುವಂತೆ ಹೊಸಮನಿ ಉತ್ತೇಜನ ನೀಡಿದರು. ಇದೀಗ ಉಪನ್ಯಾಸಕರ ಮಾರ್ಗದರ್ಶನದಲ್ಲಿ ತರಬೇತಿಯ ತಾಲೀಮು ನಡೆದಿದೆ.

ಹಲವು ತಿಂಗಳ ಸತತ ಪರಿಶ್ರಮದಿಂದ ತಾಲೀಮು ನಡೆಸಿದ ಮೇಘಾ, ಈಚೆಗೆ ಮೈಸೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತದವರೆಗೆ ಉತ್ತಮ ಸ್ಪರ್ಧೆ ನೀಡಿದ್ದಾರೆ. ಇಂತಹ ಉತ್ಸಾಹಿ ಆಟಗಾರರಿಗೆ ಸಮರ್ಪಕ ತರಬೇತಿ ದೊರೆತರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮುತ್ತಾರೆ ಎಂಬ ಮಾತುಗಳು ಸಹಪಾಠಿ ವಿದ್ಯಾರ್ಥಿನಿಯರದ್ದು.

‘ನನ್ನ ಕ್ರೀಡಾಸಕ್ತಿಗೆ ಮನೆಯವರ ಪ್ರೋತ್ಸಾಹವಿದೆ. ಓಟದ ಸ್ಪರ್ಧೆಯಲ್ಲಿ ಇನ್ನಷ್ಟು ಸಾಧನೆಗೈಯಲು ಪರಿಣಿತ ತರಬೇತುದಾರರ ಬಳಿ ತರಬೇತಿ ಪಡೆಯುವಂತೆ ತಿಳಿಸಿದ್ದಾರೆ. ಆದರೆ ನನಗೆ ಹಣ ಖರ್ಚು ಮಾಡಿ ತರಬೇತಿ ಪಡೆಯುವ ಸಾಮರ್ಥ್ಯ ಇಲ್ಲ. ಉಚಿತವಾಗಿ ತರಬೇತಿ ಪಡೆಯಬೇಕೆಂದು ಬಯಸಿದ್ದೇನೆ.

ಎಲ್ಲಿ ? ಯಾರು ತರಬೇತಿ ನೀಡುತ್ತಾರೆ ಎಂಬ ಸೂಕ್ತ ಮಾಹಿತಿ ಇಲ್ಲದ ಕಾರಣ, ಸದ್ಯ ನನ್ನ ಹೊಲದಲ್ಲಿಯೇ ತರಬೇತಿ ಮುಂದುವರೆಸಿದ್ದೇನೆ. ಅವಕಾಶಗಳು ದೊರೆತರೆ ಸಾಧನೆ ಮಾಡಿ ತೋರಿಸುತ್ತೇನೆ’ ಎಂಬ ವಿಶ್ವಾಸ ಮೇಘಾ ಸಂಗಮ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !