ಬುಧವಾರ, ನವೆಂಬರ್ 20, 2019
20 °C

ನಿವೃತ್ತಿಗೆ ಹಫೀಜ್‌ ಹಿಂದೇಟು

Published:
Updated:
Prajavani

ಕರಾಚಿ: ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಿರಾಶೆಯ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನದ ಹಿರಿಯ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ನಿವೃತ್ತಿ ಘೋಷಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅವರು ಅಂಥ ಅಲೋಚನೆ ಇಲ್ಲ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಮಾಜಿ ನಾಯಕ ಮತ್ತು ಮುಖ್ಯ ಕೋಚ್‌ ವಕಾರ್‌ ಯೂನಿಸ್‌ ಅವರು ಕಳೆದ ವಾರ ಹಫೀಜ್‌ಗೆ ನಿವೃತ್ತರಾಗುವಂತೆ ಸಲಹೆ ನೀಡಿದ್ದರು ಎಂದು ಹಫೀಜ್‌ ಅವರ ಆಪ್ತ ಮೂಲಗಳು ತಿಳಿಸಿವೆ.

‘ವಿದಾಯ ಹೇಳಲು ಇದು ಸಕಾಲ ಎಂಬುದು ತಮ್ಮ ಭಾವನೆ ಎಂದು ವಕಾರ್‌ ಹಫೀಜ್‌ಗೆ ಹೇಳಿದ್ದರು. ಆದರೆ ಇನ್ನೂ ಕೆಲವು ವರ್ಷ ಆಡುವುದಾಗಿ ಹಫೀಜ್‌ ಹೇಳಿದರು’ ಎಂದು ಮೂಲಗಳು ತಿಳಿಸಿವೆ. ಈ ಅಕ್ಟೋಬರ್‌ನಲ್ಲಿ ಹಫೀಜ್‌ 39ನೇ ವರ್ಷಕ್ಕೆ ಕಾಲಿಡುವರು. ದೈಹಿಕವಾಗಿ ತಾವು ಫಿಟ್‌ ಆಗಿದ್ದು, ಇನ್ನೂ ಕೆಲ ವರ್ಷ ಏಕದಿನ ಮತ್ತು ಟಿ–20 ಅಂತರರಾಷ್ಟ್ರೀಯ ಪಂದ್ಯ ಆಡುವುದಾಗಿ ಅವರು ಪಾಕ್‌ ಕ್ರಿಕೆಟ್‌ ಮಂಡಳಿಗೂ ತಿಳಿಸಿದ್ದಾರೆ.

ಹಫೀಜ್‌ 218 ಏಕದಿನ ಪಂದ್ಯಗಳನ್ನು ಮತ್ತು 80 ಟಿ–20 ಪಂದ್ಯಗಳನ್ನು ಆಡಿದ್ದಾರೆ. ನ್ಯೂಜಿಲೆಂಡ್‌ ಮತ್ತು ಯುಎಇ ವಿರುದ್ಧ ಸರಣಿಯಲ್ಲಿ ಪರದಾಡಿದ ನಂತರ ಹೋದ ಅಕ್ಟೋಬರ್‌ನಲ್ಲಿ ಟೆಸ್ಟ್‌ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದರು. 

 

ಪ್ರತಿಕ್ರಿಯಿಸಿ (+)