ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ: ಪಾಕ್ ವಿರುದ್ಧ ಭಾರತವೇ ನೆಚ್ಚಿನ ತಂಡ

ಇಂದು ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ
Published : 13 ಸೆಪ್ಟೆಂಬರ್ 2024, 12:50 IST
Last Updated : 13 ಸೆಪ್ಟೆಂಬರ್ 2024, 12:50 IST
ಫಾಲೋ ಮಾಡಿ
Comments

ಹುಲುನ್‌ಬುಯಿರ್‌ (ಚೀನಾ): ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿರುವ ಭಾರತ ತಂಡವು,  ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಶನಿವಾರ ಎದುರಿಸಲಿದೆ. ಭಾರತ ತಂಡವು ಇದುವರೆಗಿನ ಅಮೋಘ ಯಶಸ್ಸಿನ ಓಟವನ್ನು ಮುಂದುವರಿಸುವ ಉಮೇದಿನಲ್ಲಿದೆ.

ಆರು ತಂಡಗಳಿರುವ ಕಣದಲ್ಲಿ ಭಾರತ ಆಡಿರುವ ನಾಲ್ಕೂ ಪಂದ್ಯಗಳನ್ನು ಹೆಚ್ಚಿನ ಪ್ರಯಾಸವಿಲ್ಲದೇ ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನವು ಎರಡನೇ ಸ್ಥಾನದಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಇಲ್ಲಿ ಪ್ರಶಸ್ತಿಗೆ ನೆಚ್ಚಿನ ತಂಡವಾಗಿದ್ದು, ಇದುವರೆಗೆ ಅದಕ್ಕೆ ಯೋಗ್ಯ ರೀತಿಯಲ್ಲಿ ಆಡಿದೆ.

ಇನ್ನೊಂದೆಡೆ ಪಾಕಿಸ್ತಾನ ತಂಡ, ಪಂದ್ಯದಿಂದ ಪಂದ್ಯಕ್ಕೆ ಸುಧಾರಿತ ಪ್ರದರ್ಶನ ನೀಡುತ್ತಿದೆ. ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ವಿರುದ್ಧ 2–2 ಡ್ರಾ ಮಾಡಿಕೊಂಡಿದ್ದ ಅಹಮದ್‌ ಭಟ್‌ ನೇತೃತ್ವದ ತಂಡ ನಂತರ ಜಪಾನ್ ಮತ್ತು ಚೀನಾ ವಿರುದ್ಧ ಕ್ರಮವಾಗಿ 2–1 ಮತ್ತು 5–1 ಅಂತರದ ಜಯ ದಾಖಲಿಸಿದೆ.

ಇತ್ತೀಚಿನ ಫಲಿತಾಂಶಗಳನ್ನು ಗಮನಿಸಿದರೆ, ಈ ಪಂದ್ಯದಲ್ಲಿ ಭಾರತವೇ, ‘ದಾಯಾದಿ’ ರಾಷ್ಟ್ರದ ವಿರುದ್ಧ ಫೆವರೀಟ್ ಆಗಿದೆ.

ಕಳೆದ ವರ್ಷ ಹಾಂಗ್‌ಝೌ ಏಷ್ಯನ್‌ ಕ್ರೀಡೆಗಳಲ್ಲಿ ಭಾರತ 10–2 ರಿಂದ ಪಾಕಿಸ್ತಾನ ತಂಡವನ್ನು ಸದೆಬಡಿದಿತ್ತು. ಅದಕ್ಕಿಂತ ಕೆಲವು ತಿಂಗಳು ಮೊದಲು ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್ ವಿರುದ್ಧ 4–0 ಜಯಗಳಿಸಿತ್ತು. 2022ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಯುವ ಆಟಗಾರರಿದ್ದ ತಂಡ, ಪಾಕ್ ವಿರುದ್ಧ 1–1 ಡ್ರಾ ಸಾಧಿಸಿತ್ತು. ಢಾಕ್ಕಾದಲ್ಲಿ 2021ರಲ್ಲಿ ನಡೆದ ಇದೇ (ಎಸಿಟಿ) ಟೂರ್ನಿಯಲ್ಲಿ 4–3 ರಿಂದ ಪಾಕ್ ವಿರುದ್ಧ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.

ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್‌, ಪ್ಯಾರಿಸ್‌ನಲ್ಲಿ ತೋರಿದ ಉತ್ತಮ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ‘ನನ್ನ ಹಾಕಿ ಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಪಾಕ್‌ ತಂಡದ ಕೆಲವು ಆಟಗಾರರು ಈಗಲೂ ತಂಡದಲ್ಲಿದ್ದಾರೆ. ಅವರು ಸೋದರರಿದ್ದಂತೆ. ನಿಜ, ಮೈದಾನದಲ್ಲಿ ನಾವು ಬೇರೆ ಎದುರಾಳಿಗಳನ್ನು ಎದುರಿಸುವ ರೀತಿಯಲ್ಲೇ ಆಡುತ್ತೇವೆ. ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟು ಆಡಬೇಕಾಗುತ್ತದೆ’ ಎಂದರು.

ಪಾಕ್ ತಂಡ ಪಂದ್ಯದಿಂದ ಪಂದ್ಯಕ್ಕೆ ಸುಧಾರಿತ ಆಟವಾಡಿದ್ದೇವೆ. ತಂಡದ ಪ್ರದರ್ಶನ ಶಿಸ್ತುಬದ್ಧವಾಗಿದೆ ಎಂದು ನಾಯಕ ಅಹಮದ್‌ ಭಟ ಪ್ರತಿಕ್ರಿಯಿಸಿದರು.

ದಿನದ ಇತರ ಪಂದ್ಯಗಳಲ್ಲಿ, ಮಲೇಷ್ಯಾ, ದಕ್ಷಿಣ ಕೊರಿಯಾ ತಂಡವನ್ನು, ಆತಿಥೇಯ ಚೀನಾವು, ಜಪಾನ್ ತಂಡವನ್ನು ಎದುರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT