ಸೇಂಟ್ ಡೆನಿಸ್: ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಪೈಪೋಟಿ ನಡೆದ ಪುರುಷರ 100 ಮೀಟರ್ ಓಟದಲ್ಲಿ ಅಮೆರಿಕದ ನೋವಾ ಲೈಲ್ಸ್ ಚಿನ್ನದ ಪದಕ ಜಯಿಸಿದರು.
ಅತ್ಯಂತ ನಿಕಟ ಪೈಪೋಟಿ ಕಂಡ ಸ್ಪರ್ಧೆ ಇದಾಗಿತ್ತು. 9.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಲೈಲ್ಸ್ ತಮ್ಮ ಪ್ರತಿಸ್ಪರ್ಧಿ ಜಮೈಕಾದ ಕಿಶಾನೆ ಥಾಮ್ಸನ್ ಎದುರು ಅಕ್ಷರಶಃ ಕೂದಲೆಳೆ (0.005 ಸೆಕೆಂಡು) ಅಂತರದಲ್ಲಿ ಗೆದ್ದರು. ಇದೇ ಸ್ಪರ್ಧೆಯಲ್ಲಿ ಅಪರೂಪದ ದಾಖಲೆಯೂ ನಿರ್ಮಾಣವಾಯಿತು. ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಎಲ್ಲ ಎಂಟು ಅಥ್ಲೀಟ್‌ಗಳೂ 10 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಗೆಲುವಿನ ಗುರಿ ಮೆಟ್ಟಿದರು. ಇದರಿಂದಾಗಿ ಸ್ಪರ್ಧೆಯ ಮೊದಲ ಮೂವರು ವಿಜೇತರನ್ನು ನಿರ್ಧರಿಸಲು ತೀರ್ಪುಗಾರರು ವಿಡಿಯೊ ದಾಖಲೆಗಳ ಮೊರೆ ಹೋಗಬೇಕಾಯಿತು.
ಅದರಲ್ಲಿ ಜಮೈಕಾದ ಥಾಮ್ಸನ್ ಕೂಡ 9.79 ಸೆಕೆಂಡುಗಳಲ್ಲಿ ಓಡಿದ್ದರು. ಆದರೆ ಲೈಲ್ಸ್ ಮತ್ತು ಥಾಮ್ಸನ್ ನಡುವೆ 0.005ರಷ್ಟು ಸೂಕ್ಷ್ಮ ಅಂತರವನ್ನು ಗಮನಿಸಲಾಯಿತು. ರೌಂಡೆಡ್ ಅಪ್ ಟೈಮ್‌ನಲ್ಲಿ ಲೈಲ್ಸ್ (.784) ಪ್ರಥಮ ಸ್ಥಾನ ಪಡೆದರೆ, ಕಿಶಾನೆ (.789) ಬೆಳ್ಳಿ ಹಾಗೂ ಅಮೆರಿಕದ ಫ್ರೆಡ್ ಕೆರ್ಲೆ ಕಂಚಿನ ಪದಕ ಜಯಿಸಿದರು.
ಇದರೊಂದಿಗೆ 2004ರ ನಂತರ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಅಮೆರಿಕದ ಅಥ್ಲೀಟ್ ಎಂಬ ಹೆಗ್ಗಳಿಕೆಯು ಲೈಲ್ಸ್ ಅವರದ್ದಾಯಿತು. ಅವರು 200 ಮೀ ಓಟದಲ್ಲಿ ಸ್ಪರ್ಧಿಸಲಿದ್ದಾರೆ.
ಪುರುಷರ 100 ಮೀ ಓಟದಲ್ಲಿ ಸ್ಪರ್ಧಿಸಿದವರು (ಎಡದಿಂದ ಬಲಕ್ಕೆ) ಅಮೆರಿಕದ ನೊವಾ ಲೈಲ್ಸ್ (ಚಿನ್ನ) ಜಮೈಕಾದ ಒಬ್ಲಿಕ್ ಸೆವಿಯೆ ದಕ್ಷಿಣ ಆಫ್ರಿಕಾದ ಅಕಾನಿ ಸಿಂಬಿನೆ ಜಮೈಕಾದ ಕಿಶಾನೆ ಥಾಮ್ಸನ್ (ಬೆಳ್ಳಿ) ಅಮೆರಿಕದ ಫ್ರೆಡ್ ಕೆರ್ಲೆ (ಕಂಚು)
–ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್
ಎಲ್ಲ ಪ್ರತಿಸ್ಪರ್ಧಿಗಳೂ ಅಮೋಘ ರೀತಿಯಲ್ಲಿ ಸಿದ್ಧಗೊಂಡಿದ್ದರು. ಕಠಿಣ ಪೈಪೋಟಿಯೊಡ್ಡಿದರು. ಅವರೆಲ್ಲರಲ್ಲಿ ನಾನು ಪ್ರಥಮ ಎಂಬುದನ್ನು ತೋರಿಸುವ ಛಲ ನನ್ನದಾಗಿತ್ತು. ಇದೊಂದು ಅದ್ಭುತವಾದ ಮತ್ತು ಕಡುಕಠಿಣ ರೇಸ್ ಆಗಿತ್ತುನೋವಾ ಲೈಲ್ಸ್, ಚಿನ್ನದ ಪದಕ ವಿಜೇತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.