ನವದೆಹಲಿ: ತನ್ನ ಮಾನ್ಯತಾ ಪತ್ರದ ಮೂಲಕ ಸೋದರಿಯನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಲು ಪ್ರಯತ್ನಿಸಿ ಮುಜುಗರಕ್ಕೆ ಕಾರಣರಾದ ಮಹಿಳಾ ಕುಸ್ತಿಪಟು ಅಂತಿಮ್ ಪಂಘಲ್, ಶುಕ್ರವಾರ ತವರಿಗೆ ಮರಳಿದ್ದಾರೆ.
ಅಂತಿಮ್ ಪಂಘಲ್ ಮೇಲೆ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮೂರು ವರ್ಷಗಳ ನಿಷೇಧ ಹೇರುವ ಸಾಧ್ಯತೆಯಿದೆ.
ಶಿಸ್ತುಕ್ರಮದ ಭಾಗವಾಗಿ ಅಂತಿಮ್ ಮತ್ತು ಅವರ ನೆರವು ಸಿಬ್ಬಂದಿಯನ್ನು ಭಾರತಕ್ಕೆ ಕಳುಹಿಸಲು ಐಒಎ ನಿರ್ಧರಿಸಿದೆ.
ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಂತಿಮ್, ವಿವಾದದ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ ಅಂತಿಮ್ 0-10ರ ಅಂತರದಲ್ಲಿ ಸೋಲು ಕಂಡಿದ್ದರು.
ಈ ಮೊದಲು ಕ್ರೀಡಾಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದ ಅಂತಿಮ್, 'ನಾನು ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದೆ, ಗೊಂದಲದಿಂದಾಗಿ ಹೀಗಾಯಿತು' ಎಂದು ಹೇಳಿದ್ದರು.