ಬೆಂಗಳೂರು: ಅಚ್ಚರಿಯ ನಿರ್ಧಾರವೊಂದರಲ್ಲಿ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್ ಅವರು ಆಟಕ್ಕೆ ವಿರಾಮ ನೀಡಿದ್ದು, ಅಮೆರಿಕದಲ್ಲಿ ಮಾಸ್ಟರ್ಸ್ ಪದವಿ ವ್ಯಾಸಂಗಕ್ಕೆ ನಿರ್ಧರಿಸಿದ್ದಾರೆ. ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದ ತಂಡದಲ್ಲಿ ಆಡಿದ್ದ ಅರ್ಚನಾ ಕೆಲವೇ ದಿನಗಳ ಅಂತರದಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.
‘ಅರ್ಚನಾ ಈ ನಿರ್ಧಾರವನ್ನು ದಿಢೀರನೇ ತೆಗೆದುಕೊಂಡಿಲ್ಲ. ಒಲಿಂಪಿಕ್ಸ್ ಮುಗಿದಿದ್ದು, ಈಗ ಉನ್ನತ ವ್ಯಾಸಂಗದ ನಿರ್ಧಾರಕ್ಕೆ ಬಂದಿದ್ದೇವೆ. ಹಾಗೆ ನೋಡಿದರೆ ಅರ್ಚನಾಗೆ ಆಟದಷ್ಟೇ ಓದೂ ಕೂಡ ಅತಿ ಮೆಚ್ಚಿನ ವಿಷಯ’ ಎಂದು ಆಟಗಾರ್ತಿಯ ತಂದೆ ಡಾ.ಜಿ.ಗಿರೀಶ್ ಕಾಮತ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.
24 ವರ್ಷ ವಯಸ್ಸಿನ ಅರ್ಚನಾ ಉನ್ನತ ರ‍್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಒಲಿಂಪಿಕ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ, ಜರ್ಮನಿ ತಂಡಕ್ಕೆ 1–3ರಲ್ಲಿ ಸೋತಿತ್ತು. ತನಗಿಂತ ಉನ್ನತ ಕ್ರಮಾಂಕದ ಆಟಗಾರ್ತಿ ಷಿಯೊನಾ ಶಾನ್ ಅವರನ್ನು ಸೋಲಿಸಿದ್ದ ಅರ್ಚನಾ ಭಾರತಕ್ಕೆ ಆ ಏಕೈಕ ಗೆಲುವು ಗಳಿಸಿಕೊಟ್ಟಿದ್ದರು.
‘ಪ್ಯಾರಿಸ್ ಒಲಿಂಪಿಕ್ಸ್ ನಂತರ ಉನ್ನತ ವ್ಯಾಸಂಗದ ನಿರ್ಧಾರ ಕೈಗೊಂಡೆ. ಸಾರ್ವಜನಿಕ ನೀತಿಗೆ ಸಂಬಂಧಿಸಿ ಎರಡು ವರ್ಷಗಳ ಮಾಸ್ಟರ್ಸ್ ಪದವಿಗೆ ನೋಂದಾಯಿಸಿಕೊಂಡಿದ್ದೇನೆ. ಉನ್ನತ ವ್ಯಾಸಂಗದ ನನ್ನ ಗುರಿಯನ್ನು ಮತ್ತಷ್ಟು ಮುಂದಕ್ಕೆ ಹಾಕಲು ಬಯಸುವುದಿಲ್ಲ’ ಎಂದು ಅರ್ಚನಾ ಹೇಳಿದರು.
‘ನನ್ನ ಪಾಲಿಗೆ ಇಂಥ ನಿರ್ಧಾರ ಸುಲಭವಾಗಿರಲಿಲ್ಲ. ನಾನು ಸ್ಪರ್ಧಾತ್ಮಕ ಟೇಬಲ್ ಟೆನಿಸ್‌ಗೆ ವಿದಾಯ ಹೇಳುವುದಾದರೆ, ಅದು ನನ್ನ ಓದಿನ ಕಡೆಗಿನ ಪ್ರೀತಿಯಿಂದ ಮಾತ್ರ. ಟಿ.ಟಿ. ಅಮೋಘ ಕ್ರೀಡೆ. ದೀರ್ಘಕಾಲ ಆಡುವ ಅವಕಾಶ ನನಗೆ ದೊರಕಿತು. ಅದರ ಕಡೆಗಿನ ನನ್ನ ಪ್ರೀತಿ ಮುಂದುವರಿಯಲಿದೆ’ ಎಂದು ಅರ್ಚನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿವಿಧ ಕ್ರೀಡಾ ಯೋಜನೆಗಳ ಮೂಲಕ ತಮಗೆ ಆರ್ಥಿಕ ನೆರವು ನೀಡಿದ್ದಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ನೆರವು ನೀಡಿದ ತರಬೇತುದಾರರಿಗೆ ಮತ್ತು ನೆರವು ಸಿಬ್ಬಂದಿಗೂ ಧನ್ಯವಾದ ಸಮರ್ಪಿಸಿದ್ದಾರೆ.
‘ನನಗೆ ಅತ್ಯುತ್ತಮ ನೆರವು ತಂಡ ದೊರಕಿತು. ಅನ್ಶುಲ್ ಗಾರ್ಗ್ (ನನ್ನ ಟಿಟಿ ಕೋಚ್), ಜೈ ಸನನ್ ಸರ್ (ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಕೋಚ್) ಮತ್ತು ಶಂತನು ಕುಲಕರ್ಣಿ ಸರ್ (ನನ್ನ ಕ್ರೀಡಾ ಮನಃಶಾಸ್ತ್ರಜ್ಞ) ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.
‘ಈ ವರ್ಷ ದೇಶಿಯ ಟೂರ್ನಿಗಳಲ್ಲಿ ಅವರು ಅತ್ಯುತ್ತಮ ಸಾಧನೆ ತೋರಿದ್ದರು. ಮೂರು ಪ್ರಶಸ್ತಿಗಳ ಜೊತೆಗೆ ನಾಲ್ಕರಲ್ಲಿ ಫೈನಲ್ ತಲುಪಿದ್ದರು. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರಕಿದ್ದಕ್ಕೆ ಅವರು ಆಭಾರಿಯಾಗಿದ್ದಾರೆ’ ಎಂದು ಡಾ.ಗಿರೀಶ್ ತಿಳಿಸಿದ್ದಾರೆ.
ಅರ್ಚನಾಳ ಅಣ್ಣಅಭಿನವ್ ಅವರು ನಾಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉನ್ನತ ಶಿಕ್ಷಣ ಪಡೆಯುವ ದಿಸೆಯಲ್ಲಿ ಸೋದರಿಗೆ ಪ್ರೇರಣೆಯಾಗಿದ್ದಾರೆ.
ಅರ್ಚನಾ 2018ರಲ್ಲಿ ಮೊದಲ ರಾಷ್ಟ್ರೀಯ ಸೀನಿಯರ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅದೇ ವರ್ಷ ಬ್ಯೂನೊ ಏರ್ಸ್‌ನಲ್ಲಿ ಯೂತ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.