ಬೆಂಗಳೂರು: ಚೆನ್ನೈನಲ್ಲಿ ಗುರುವಾರ ಆರಂಭವಾಗುವ ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ) ಐದನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗೋವಾ ಚಾಲೆಂಜರ್ಸ್ ಮತ್ತು ಜೈಪುರ ಪೇಟ್ರಿಯಾಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಟೂರ್ನಿಯ ಎಲ್ಲಾ ಪಂದ್ಯಗಳು ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದೇ ಮೊದಲ ಬಾರಿಗೆ ಎಂಟು ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. 17 ದಿನಗಳ ಕಾಲ ನಡೆಯುವ ಲೀಗ್‌ಗೆ ಸೆ.7ರಂದು ಫೈನಲ್‌ನೊಂದಿಗೆ ತೆರೆಬೀಳಲಿದೆ.
ಭಾರತದ ತಾರೆಯರಾದ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ಅಚಂತಾ ಶರತ್ ಕಮಲ್, ಸತ್ಯನ್ ಜಿ, ಹರ್ಮೀತ್ ದೇಸಾಯಿ, ಮನುಷ್ ಶಾ, ಐಹಿಕಾ ಮುಖರ್ಜಿ, ಮಾನವ್ ಠಕ್ಕರ್, ಸುತೀರ್ಥ ಮುಖರ್ಜಿ ಸೇರಿದಂತೆ ಹಲವು ಆಟಗಾರರು ಲೀಗ್‌ನಲ್ಲಿ ಕಣಕ್ಕೆ ಇಳಿಯುವರು.
ವಿಶ್ವದ 13ನೇ ಶ್ರೇಯಾಂಕದ ಬರ್ನಡೆಟ್ ಸ್ಜೋಕ್ಸ್ (ಸ್ಪೇನ್), ಅಲ್ವಾರೊ ರೋಬಲ್ಸ್, ಸಕುರಾ ಮೋರಿ (ಜಪಾನ್), ಜೂಲ್ಸ್ ರೊಲ್ಯಾಂಡ್ (ಫ್ರಾನ್ಸ್) ಸೇರಿದಂತೆ ವಿದೇಶಿ ತಾರೆಗಳು ಸ್ಪರ್ಧಾಕಣದಲ್ಲಿದ್ದಾರೆ.
ಜೈಪುರ ಪೇಟ್ರಿಯಾಟ್ಸ್ ಮತ್ತು ಅಹಮದಾಬಾದ್ ಎಸ್‌ಜಿ ಪೈಪರ್ಸ್ ಈ ಆವೃತ್ತಿಗೆ ಹೊಸ ತಂಡಗಳು. ಗೋವಾ ಚಾಲೆಂಜರ್ಸ್, ಚೆನ್ನೈ ಲಯನ್ಸ್, ದಬಾಂಗ್ ಡೆಲ್ಲಿ ಟಿಟಿಸಿ, ಯು ಮುಂಬಾ ಟಿಟಿ, ಪುಣೇರಿ ಪಲ್ಟನ್, ಬೆಂಗಳೂರು ಸ್ಮಾಷರ್ಸ್ ತಂಡಗಳು ಸ್ಪರ್ಧೆಯಲ್ಲಿವೆ. ಪ್ರತಿ ತಂಡವು ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಆರು ಮಂದಿಯನ್ನು ಒಳಗೊಂಡಿದೆ.
ಕನ್ನಡಿಗರ ತೆಕ್ಕೆಗೆ ಲಯನ್ಸ್: ಚೆನ್ನೈ ಲಯನ್ಸ್ ತಂಡವನ್ನು ಕನ್ನಡಿಗ ಆಟಗಾರರು ಖರೀದಿ ಮಾಡಿದ್ದಾರೆ. ರಾಷ್ಟ್ರೀಯ ಮಾಜಿ ಆಟಗಾರರಾದ ಜಿ.ಎಸ್.ರವಿ, ಶ್ರೀಕಾಂತ ಅಯ್ಯರ್, ವಿನಯಚಂದ್ರ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಜವಾಹರ್, ರಾಜ್ಯ ಮಟ್ಟದಲ್ಲಿ ಆಡಿದವರು. ರಂಗರಾಜನ್ ಅವರು ತಮಿಳುನಾಡು ತಂಡಕ್ಕಾಗಿ ಆಡಿದ್ದರು.