ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತಕ್ಕೆ ಸುಲಭ ತುತ್ತಾದ ಇರಾನ್

ಮಹಿಳಾ ತಂಡಕ್ಕೆ ಪೋಲೆಂಡ್ ಆಘಾತ
Published : 20 ಸೆಪ್ಟೆಂಬರ್ 2024, 14:27 IST
Last Updated : 20 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ಭಾರತದ ಪುರುಷರ ತಂಡ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಗುರುವಾರ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು 3.5–0.5 ರಿಂದ ಸುಲಭವಾಗಿ ಸೋಲಿಸಿ ಓಪನ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಆದರೆ, ಮಹಿಳೆಯರ ವಿಭಾಗದ ಎಂಟನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಭಾರತ, ಪೊಲೆಂಡ್ ಎದುರು 1.5–2.5 ಅಂತರದಲ್ಲಿ ಆಘಾತ ಅನುಭವಿಸಿತು. ಇದು ಭಾರತ ವನಿತೆಯರಿಗೆ ಎದುರಾದ ಮೊದಲ ಸೋಲು.

ಪುರುಷರ ವಿಭಾಗದಲ್ಲಿ ಭಾರತ ಸಂಭವನೀಯ 16 ಪಾಯಿಂಟ್ಸ್‌ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿರುವ ಹಂಗರಿ ಮತ್ತು ಉಜ್ಬೇಕಿಸ್ತಾನ ತಂಡಗಳಿಗಿಂತ ಎರಡು ಪಾಯಿಂಟ್‌ ಮುನ್ನಡೆ ಹೊಂದಿದೆ. ಇನ್ನು ಕೇವಲ ಮೂರು ಸುತ್ತಿನ ಪಂದ್ಯಗಳಷ್ಟೇ ಉಳಿದಿವೆ.

ಕಪ್ಪು ಕಾಯಿಗಳಲ್ಲಿ ಆಡಿದ ಅರ್ಜುನ್ ಇರಿಗೇಶಿ ಅವರಿಗೆ ಬರ್ದಿಯಾ ದಾನೇಶ್ವರ್ ಅವರು ಸಾಟಿಯಾಗಲಿಲ್ಲ. ಎದುರಾಳಿಯ ರಕ್ಷಣೆಯನ್ನು ಛಿದ್ರಗೊಳಿಸುವ ಮೂಲಕ ಅರ್ಜುನ್ ಭಾರತಕ್ಕೆ ಮುನ್ನಡೆ ಒದಗಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್‌ ಡಿ.ಗುಕೇಶ್‌ ಮೊದಲ ಬೋರ್ಡ್‌ನಲ್ಲಿ  ಇರಾನ್‌ನ ಅಗ್ರ ಆಟಗಾರ ಪರ್ಹಾಮ್ ಮಘಸೂಡ್ಲು ಅವರನ್ನು ಮಣಿಸಿದರು.

ಆರ್‌.ಪ್ರಜ್ಞಾನಂದ, ಮೊಹಮದ್ ಅಮೀನ್ ತಬಾತಬೇಯಿ ಜೊತೆ ಡ್ರಾ ಮಾಡಿಕೊಳ್ಳುವ ಮೂಲಕ ಭಾರತದ ಗೆಲುವು ಖಚಿತಪಡಿಸಿಕೊಂಡರು. ವಿದಿತ್ ಗುಜರಾತಿ ನಾಲ್ಕನೇ ಬೋರ್ಡ್‌ನಲ್ಲಿ ಇದಾನಿ ಪೌಯಾ ಅವರನ್ನು ಸೋಲಿಸಿ ವಿಜಯದ ಅಂತರ ಉಬ್ಬಿಸಿದರು.

ಭಾರತೀಯರ ದಾಪುಗಾಲು:

ಅರ್ಜುನ್‌ ಇಂದಿನ ಗೆಲುವಿನಿಂದ ಎಂಟು ಪಂದ್ಯಗಳಿಂದ 7.5 ಪಾಯಿಂಟ್ಸ್ ಸಂಗ್ರಹಿಸಿದ್ದು ಯಶಸ್ಸಿನ ಓಟದಲ್ಲಿದ್ದಾರೆ. ಅವರ ಲೈವ್‌ ರೇಟಿಂಗ್‌ 2793 ಆಗಿದೆ. ಅವರು 2,800ರ ರೇಟಿಂಗ್ ದಾಟಿದಲ್ಲಿ ಈ ಸಾಧನೆಗೆ ಪಾತ್ರರಾದ ವಿಶ್ವದ 16ನೇ ಮತ್ತು ಭಾರತದ ಎರಡನೇ ಆಟಗಾರ ಎನಿಸಲಿದ್ದಾರೆ. ಭಾರತದ ದಿಗ್ಗಜ ಆಟಗಾರ ವಿಶ್ವನಾಥನ್ ಆನಂದ್ ಮಾತ್ರ ಹಿಂದೆ ಈ ಸಾಧನೆಗೆ ಭಾಜನರಾಗಿದ್ದರು.

ಅರ್ಜುನ್ ಅವರ ಹಿಂದೆಯೇ ಇರುವ ಗುಕೇಶ್‌ 2785 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಮೊದಲ ಬಾರಿ ವಿಶ್ವದ ಅಗ್ರ ಐದು ಆಟಗಾರರಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ.

ಹಾರಿಕಾ ಅವರ ಎಂಟನೇ ಸುತ್ತಿನಲ್ಲೂ ಉತ್ತಮ ಲಯಕ್ಕೆ ಮರಳಲಾಗಲಿಲ್ಲ. ಅವರು ಅಲಿನಾ ಕಾಶ್ಲಿನ್‌ಸ್ಕಾಯಾ ಎದುರು ಸೋಲನುಭವಿಸಿದರು. ಇದು ಅವರಿಗೆ ಮೂರನೇ ಸೋಲು. ಮೋನಿಕಾ ಸೊಕೊ, ಎರಡನೇ ಬೋರ್ಡ್‌ನಲ್ಲಿ ಆರ್‌.ವೈಶಾಲಿ ಎದುರು ಜಯಗಳಿಸಿದರು.

ದಿವ್ಯಾ ದೇಶಮುಖ್, ಅಲೆಕ್ಸಾಂಡ್ರಾ ಮಾಸ್ಟ್‌ಸೆವ್‌ಸ್ಕಾಯಾ ಎದುರು ಜಯಗಳಿಸಿದ್ದರಿಂದ ಎಲ್ಲರ ಕಣ್ಣು, ಕೊನೆಯ ಬೋರ್ಡ್‌ನಲ್ಲಿದ್ದ ವಂತಿಕಾ ಅಗರವಾಲ್– ಅಲಿಸಿಯಾ ಸ್ಲಿವಿಕಾ ಪಂದ್ಯದ ಮೇಲೆ ನೆಟ್ಟಿತು. ಆದರೆ ಈ ಪಂದ್ಯ ಅಂತಿಮವಾಗಿ ‘ಡ್ರಾ’ ಆಯಿತು. 

ಪುರುಷರ ತಂಡ 9ನೇ ಸುತ್ತಿನಲ್ಲಿ, ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ ತಂಡವನ್ನು, ಮಹಿಳೆಯರು ಅಮೆರಿಕ ತಂಡವನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT