ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯಾ ಚಾಂಪಿಯನ್ಸ್ ಹಾಕಿ ಟ್ರೋಫಿ: ಚೀನಾ ಮೇಲೆ ಗೆದ್ದು ಭಾರತ ಶುಭಾರಂಭ

Published : 8 ಸೆಪ್ಟೆಂಬರ್ 2024, 13:40 IST
Last Updated : 8 ಸೆಪ್ಟೆಂಬರ್ 2024, 13:40 IST
ಫಾಲೋ ಮಾಡಿ
Comments

ಹುಲುನ್‌ಬುಯಿರ್ (ಚೀನಾ), (ಪಿಟಿಐ): ಭಾರತ ಪುರುಷರ ತಂಡ 3–0 ಗೋಲುಗಳಿಂದ ಚೀನಾ ತಂಡದ ಮೇಲೆ ಅಧಿಕಾರಯುತ ಜಯಪಡೆದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾನುವಾರ ಶುಭಾರಂಭ ಮಾಡಿತು.

ಸುಖ್‌ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ ನಿಮಿಷ) ಮತ್ತು ಅಭಿಷೇಕ್ (32ನೇ ನಿಮಿಷ) ಅವರು ಭಾರತ ತಂಡದ ಗೋಲುಗಳನ್ನು ಗಳಿಸಿದರು.

ಸತತ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲುವಿನೊಡನೆ ಈ ಟೂರ್ನಿಗೆ ಬಂದಿದ್ದ  ಹರ್ಮನ್‌ಪ್ರೀತ್ ಪಡೆ ಉತ್ತಮ ಪ್ರದರ್ಶನ ನೀಡಿತು. ಅವಕಾಶಗಳನ್ನು ಸೃಷ್ಟಿಸಿಕೊಂಡು ಕೆಲವನ್ನು  ಸದುಪಯೋಗಪಡಿಸಿಕೊಂಡಿತು. ತಂಡದ ರಕ್ಷಣಾ ವಿಭಾಗ ಬಲಾಢ್ಯವಾಗಿತ್ತು.

‘ನಾವು ಚೆನ್ನಾಗಿ ಆಡಿದೆವು. ನಾವು ಕೆಲವು ಉತ್ತಮ ಅವಕಾಶಗಳನ್ನು ಗಳಿಸಿಕೊಂಡೆವು. ನಾವು ಎದುರಾಳಿಗಳಿಗೆ ಚೇತರಿಸುವ ಅವಕಾಶವನ್ನು ನೀಡಲಿಲ್ಲ’ ಎಂದು ಹರ್ಮನ್‌ಪ್ರೀತ್ ಪ್ರತಿಕ್ರಿಯಿಸಿದರು.

‘ಕೆಲವು ಹೊಸ ಆಟಗಾರರು ಅವಕಾಶ ಪಡೆದರು. ಅವರು ತುಂಬಾ ಚೆನ್ನಾಗಿ ಆಡಿದರು. ಏಷ್ಯನ್ ತಂಡಗಳೊಂದಿಗೆ ಆಡಲು ಮತ್ತು ಹಿರಿಯ ಆಟಗಾರರೊಂದಿಗೆ ಬೆರೆತು ಆಡಲು ಅವರಿಗೆ ಸದವಕಾಶ ದೊರೆಯಿತು. ಅವರು ಪ್ರತಿಭಾನ್ವಿತರಾಗಿದ್ದು, ಉತ್ತಮ ಕೌಶಲ ಪ್ರದರ್ಶಿಸಿದರು’ ಎಂದು ಹರ್ಮನ್‌ಪ್ರೀತ್ ಮೆಚ್ಚುಗೆ ಸೂಚಿಸಿದರು.

ಭಾರತ ಬಿರುಸಿನ ಆರಂಭವನ್ನೇನೂ ಮಾಡಲಿಲ್ಲ. ಚೀನಾ ಆರಂಭದಲ್ಲಿ ಪ್ರತಿದಾಳಿಗಳನ್ನು ನಡೆಸಿತು. ಆದರೆ ಕೃಷನ್ ಬಹಾದ್ದೂರ್ ಪಾಠಕ್ ಅವರು ಗೋಲಿನ ಎದುರು ಎಚ್ಚರಿಕೆಯಿಂದ ಇದ್ದರು. ಗೋಲಾಗುವ ಅವಕಾಶಗಳನ್ನು ತಡೆದು ಆಚೆಗೆ ಹಾಕಿದರು.

ಜುಗರಾಜ್ ಸಿಂಗ್ ಪಾಸ್‌ನಲ್ಲಿ ಸರ್ಕಲ್‌ ಒಳಗಿನಿಂದ ಸುಖಜೀತ್ ಚೆಂಡನ್ನು ಗುರಿತಲುಪಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಎರಡನೇ ಕ್ವಾರ್ಟರ್‌ನಲ್ಲೂ ಭಾರತ ಎಚ್ಚರಿಕೆಯೊಡನೆ ಆರಂಭಿಸಿತು. ಅಭಿಷೇಕ್‌ಗೆ ಗೋಲು ಅವಕಾಶ ದಕ್ಕಿದರೂ ಚೀನಾದ ಗೋಲ್‌ಕೀಪರ್‌ ಕೈಯು ವಾಂಗ್ ಅದನ್ನು ಉತ್ತಮವಾಗಿ ತಡೆದರು.

ಭಾರತ ಈ ಹಂತದಲ್ಲಿ ಮೇಲುಗೈ ಪಡೆಯತೊಡಗಿದ್ದು, ಚೀನಾವನ್ನು ನಿಯಂತ್ರಿಸಿತು. ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ಉತ್ತಮ್‌ ಅವರು ಭಾರತದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಭಾರತ ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆ ನಿಯಂತ್ರಣ ಮುಂದುವರಿಸಿತು. ಮನ್‌ಪ್ರೀತ್ ಅವರ ಪಾಸ್‌ನಲ್ಲಿ ಅಭಿಷೇಕ್‌ ಅವರು ಚೆಂಡನ್ನು ಕರಾರುವಾಕ್ ಆಗಿ ಗುರಿತಲುಪಿಸಿ ಭಾರತ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಮೂರನೇ ಕ್ವಾರ್ಟರ್‌ ಮುಗಿಯಲು ಮೂರು ನಿಮಿಷಗಳಿರುವಾಗ ಚೀನಾ ಪ್ರತಿದಾಳಿ ನಡೆಸಿ ಪೆನಾಲ್ಟಿ ಕಾರ್ನರ್‌ ಅವಕಾಶವನ್ನೂ ಪಡೆಯಿತು. ಆದರೆ ಈ ಅವಕಾಶದಲ್ಲಿ ಚೀನಾ ತಂಡ ನಾಯಕ ಜೀಶೆಂಗ್ ಗಾವೊ ಚೆಂಡನ್ನು ಗೋಲುಪೆಟ್ಟಿಗೆಯಾಚೆ ತಳ್ಳಿದರು. ಮತ್ತೊಮ್ಮೆ ಚೀನಾ ಚೆಂಡಿನೊಳಗೆ ಭಾರತದ ಗೋಲಿನತ್ತ ಧಾವಿಸಿದಾಗ ಜುಗರಾಜ್ ಸಿಂಗ್ ಅವರು ಸಕಾಲಿಕವಾಗಿ ಚೆಂಡು ಗೋಲಿಗೆ ಹೋಗುವುದನ್ನು ತಡೆದರು.

‌ನಾಲ್ಕನೇ ಕ್ವಾರ್ಟರ್‌ನಲ್ಲಿ ಗೋಲುಗಳು ಬರಲಿಲ್ಲ. ಕೊನೆಯ ಕೆಲವು ನಿಮಿಷ ಚೀನಾ ಗೋಲಿಗಾಗಿ ಪ್ರಯತ್ನ ನಡೆಸಿದರೂ ಖಾತೆ ತೆರೆಯಲಾಗಲಿಲ್ಲ.

ಭಾರತ ತಂಡವು ಸೋಮವಾರ ನಡೆಯುವ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ಮಲೇಷ್ಯಾ–ಪಾಕ್‌ ಪಂದ್ಯ ಡ್ರಾ: ದಿನದ ಇತರ ಪಂದ್ಯಗಳಲ್ಲಿ ಮಲೇಶ್ಯಾ ಮತ್ತು ಪಾಕಿಸ್ತಾನ 2–2 ಡ್ರಾ ಮಾಡಿಕೊಂಡರೆ, ಗೋಲುಗಳ ಸುಗ್ಗಿ ಕಂಡ ಇನ್ನೊಂದು ಪಂದ್ಯದಲ್ಲಿ ಮುಖಾಮುಖಿಯಲ್ಲಿ ಜಪಾನ್ ಮತ್ತು ಕೊರಿಯಾ ತಂಡಗಳು ಸಹ 5–5 ಸಹ ಡ್ರಾ ಮಾಡಿಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT