ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಹಾಕಿ: ಭಾರತಕ್ಕೆ ಗೆದ್ದರೂ ಕ್ವಾರ್ಟರ್‌ಗೆ ಸಿಗದ ಅವಕಾಶ

ನ್ಯೂಜಿಲೆಂಡ್ ಎದುರಿನ ಕ್ರಾಸ್‌ಓವರ್ ಪಂದ್ಯದಲ್ಲಿ ಜಯ ಅನಿವಾರ್ಯ
Last Updated 19 ಜನವರಿ 2023, 22:47 IST
ಅಕ್ಷರ ಗಾತ್ರ

ಭುವನೇಶ್ವರ್: ಭಾರತ ಹಾಕಿ ತಂಡವು ವಿಶ್ವಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ ವೇಲ್ಸ್‌ ವಿರುದ್ಧ ಜಯ ದಾಖಲಿಸಿತು. ಆದರೂ ಎಂಟರ ಘಟ್ಟದ ನೇರಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.

ಆದರೆ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಇನ್ನೊಂದು ಅವಕಾಶ ಭಾರತಕ್ಕೆ ಇದೆ. ಭಾನುವಾರ ನಡೆಯುವ ಕ್ರಾಸ್‌ ಓವರ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಗೆದ್ದರೆ ನಾಕೌಟ್ ಪ್ರವೇಶಿಸುವುದು.

ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 4–2ರಿಂದ ವೇಲ್ಸ್‌ ವಿರುದ್ಧ ಗೆದ್ದಿತು. ಭಾರತವು ಎಂಟರ ಘಟಕ್ಕೆ ನೇರಪ್ರವೇಶ ಪಡೆಯಲು ಈ ಪಂದ್ಯದಲ್ಲಿ ಎಂಟು ಗೋಲುಗಳ ಅಂತರದಿಂದ ಜಯಿಸಬೇಕಿತ್ತು. ಆದರೆ ವಿಫಲವಾಯಿತು. ಇದರಿಂದಾಗಿ ಡಿ ಗುಂಪಿನಲ್ಲಿ ಇಂಗ್ಲೆಂಡ್ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಗುಂಪಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಏಳು ಅಂಕಗಳನ್ನು ಗಳಿಸಿವೆ. ತಲಾ ಎರಡು ಪಂದ್ಯಗಳಲ್ಲಿಯೂ ಜಯಿಸಿವೆ. ಆದರೆ ಗೋಲುಗಳಿಕೆಯಲ್ಲಿ ಮುಂದಿರುವ ಇಂಗ್ಲೆಂಡ್ ಮೊದಲ ಸ್ಥಾನ ಪಡೆದಿದೆ.

ಎ ಮತ್ತು ಬಿ ಗುಂಪುಗಳ ಕೊನೆಯ ಸುತ್ತಿನ ಪಂದ್ಯಗಳು ಶುಕ್ರವಾರ ರೂರ್ಕೆಲಾದ ಮೈದಾನದಲ್ಲಿ ನಡೆಯಲಿವೆ.

ಆಕಾಶ್ ಡಬಲ್: ತಂಡದ ಆಕಾಶದೀಪ್ ಸಿಂಗ್ (32ನಿ ಮತ್ತು 45ನೇ ನಿ) ಎರಡು ಗೋಲು ಗಳಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು., ಶಂಶೇರ್ ಸಿಂಗ್ (21ನಿ) ಹಾಗೂ ಹರ್ಮನ್‌ಪ್ರೀತ್ ಸಿಂಗ್ (59ನಿ) ಗೋಲು ಗಳಿಸಿ ಬಲ ತುಂಬಿದರು.

ವೇಲ್ಸ್‌ ತಂಡದ ಗರೆತ್ ಫರ್ಲಾಂಗ್ (42ನಿ) ಹಾಗೂ ಜೇಕಬ್ ಡ್ರೇಪರ್ (44ನಿ) ಗೋಲು ಹೊಡೆದರು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಸಂಜೆಯ ಚಳಿಗಾಳಿಯಲ್ಲಿ ಭಾರತದ ಆಟಗಾರರ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಭಾರತವು ಬಹುತೇಕ ಹಂತಗಳಲ್ಲಿ ಚೆಂಡಿನ ನಿಯಂತ್ರಣದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ, ಸಿಕ್ಕ ಅವಕಾಶಗಳಲ್ಲಿ ಗೋಲುಗಳನ್ನು ಗಳಿಸುವಲ್ಲಿ ವಿಫಲವಾಯಿತು. ಏಳು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಕನಿಷ್ಟ ಆರು ಗೋಲು ಗಳಿಸುವ ಅವಕಾಶಗಳಿದ್ದವು. ಆದರೆ ಫಾರ್ವರ್ಡ್‌ ಆಟಗಾರರು ಕೈಚೆಲ್ಲಿದರು.

ವಿಶ್ವ ಶ್ರೇಯಾಂಕದಲ್ಲಿ 14ನೇ ಸ್ಥಾನದಲ್ಲಿರುವ ವೇಲ್ಸ್ ತಂಡದ ರಕ್ಷಣಾ ಆಟಗಾರರು ಉತ್ತಮ ಆಟವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT