ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಗೇಮ್ಸ್‌ಗೆ ಭಾರತ ಚೆಸ್‌ ತಂಡ: ಹಂಪಿ, ಹಾರಿಕ ಭರವಸೆ

Published 9 ಜುಲೈ 2023, 14:13 IST
Last Updated 9 ಜುಲೈ 2023, 14:13 IST
ಅಕ್ಷರ ಗಾತ್ರ

‌ನವದೆಹಲಿ: ಎರಡು ಬಾರಿಯ ಚಿನ್ನದ ಪದಕ ವಿಜೇತೆ ಕೊನೇರು ಹಂಪಿ ಅವರು ಏಷ್ಯನ್‌ ಗೇಮ್ಸ್‌ನ ಚೆಸ್‌ ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಭಾರತವು 10 ಸದಸ್ಯರ ತಂಡವನ್ನು ಕಳುಹಿಸಲಿದೆ. ಹಂಪಿ, ದ್ರೋಣವಲ್ಲಿ ಹಾರಿಕ ಅವರು ಮಹಿಳೆಯರ ಹಾಗೂ ವಿದಿತ್‌ ಗುಜರಾತಿ ಮತ್ತು ಅರ್ಜುನ್‌ ಎರಿಗೈಸಿ ಅವರು ಪುರುಷರ ವಿಭಾಗದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಪುರುಷರ ತಂಡವು ಗ್ರ್ಯಾಂಡ್‌ ಮಾಸ್ಟರ್‌ಗಳಾದ ಡಿ.ಗುಕೇಶ್, ಗುಜರಾತಿ, ಎರಿಗೈಸಿ, ಪಿ.ಹರಿಕೃಷ್ಣ ಮತ್ತು ಆರ್‌.ಪ್ರಗ್ಯಾನಂದ ಅವರನ್ನು ಒಳಗೊಂಡಿದೆ. ಮಹಿಳೆಯರ ತಂಡದಲ್ಲಿ ಹಂಪಿ ಮತ್ತು ಹಾರಿಕ ಜತೆಯಲ್ಲಿ ಆರ್‌.ವೈಶಾಲಿ, ವಂತಿಕಾ ಅಗರವಾಲ್ ಮತ್ತು ಸವಿತಾ ಶ್ರೀ  ಸ್ಥಾನ ಪಡೆದಿದ್ದಾರೆ.

ಕಾನ್ಪುರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್‌) ಸಾಮಾನ್ಯ ಸಭೆಯಲ್ಲಿ ತಂಡದ ಆಯ್ಕೆ ನಡೆಯಿತು. ಎಐಸಿಎಫ್‌ ಅಧ್ಯಕ್ಷ ಸಂಜಯ್‌ ಕಪೂರ್‌ ನೇತೃತ್ವದಲ್ಲಿ ಸಭೆ ನಡೆಯಿತು.

ಚೀನಾದಲ್ಲಿ ಕೋವಿಡ್‌ ಆತಂಕ ಇರುವುದರಿಂದ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಂಪಿ ಈ ವರ್ಷದ ಆರಂಭದಲ್ಲಿ ಹೇಳಿದ್ದರು. 36 ವರ್ಷದ ಅವರು ಭಾರತ ತಂಡದಲ್ಲಿರುವ ಹಿರಿಯ ಸ್ಪರ್ಧಿ ಎನಿಸಿದ್ದಾರೆ. 2006ರ ದೋಹಾ ಏಷ್ಯನ್‌ ಗೇಮ್ಸ್‌ನಲ್ಲಿ ಅವರು ಮಹಿಳೆಯರ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಹಾರಿಕ ಅವರು 2010ರ ಗುವಾಂಗ್‌ಝೌ ಕೂಟದಲ್ಲಿ ಕಂಚು ಜಯಿಸಿದ್ದರು. ತಂಡದಲ್ಲಿರುವ ಇತರರು ಚೊಚ್ಚಲ ಪದಕದ ನಿರೀಕ್ಷೆಯಲ್ಲಿದ್ದಾರೆ.

13 ವರ್ಷಗಳ ಬಿಡುವಿನ ಬಳಿಕ ಚೆಸ್‌ ಕ್ರೀಡೆ ಏಷ್ಯನ್‌ ಗೇಮ್ಸ್‌ಗೆ ‘ಮರಳಿದೆ’. 2014ರ ಇಂಚೋನ್‌ ಮತ್ತು 2018ರ ಜಕಾರ್ತ ಏಷ್ಯನ್‌ ಗೇಮ್ಸ್‌ಗಳಲ್ಲಿ ಚೆಸ್‌ ಕ್ರೀಡೆಗೆ ಸ್ಥಾನ ಇರಲಿಲ್ಲ.

ಡಿಸೆಂಬರ್‌ನಲ್ಲಿ ಇಂಡಿಯನ್‌ ಚೆಸ್‌ ಲೀಗ್‌

ಇದೇ ಡಿಸೆಂಬರ್‌ನಲ್ಲಿ ‘ಇಂಡಿಯನ್‌ ಚೆಸ್‌ ಲೀಗ್‌’ ಆರಂಭಿಸಲು ಅಖಿಲ ಭಾರತ ಚೆಸ್‌ ಫೆಡರೇಷನ್‌ ನಿರ್ಧರಿಸಿದೆ. ಫ್ರಾಂಚೈಸ್‌ ಆಧರಿತ ಲೀಗ್‌ನ ಹರಾಜು ಪ್ರಕ್ರಿಯೆಯ ರೂಪುರೇಷೆಯನ್ನು 15 ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಐಸಿಎಫ್‌ ಅಧ್ಯಕ್ಷ ಸಂಜಯ್‌ ಕಪೂರ್‌ ತಿಳಿಸಿದರು. ‘ಐಪಿಎಲ್‌ ಮಾದರಿಯಲ್ಲಿ ಈ ಲೀಗ್‌ ನಡೆಯಲಿದ್ದು 6 ರಿಂದ 8 ತಂಡಗಳು ಪಾಲ್ಗೊಳ್ಳಲಿವೆ. ಭಾರತದ ಚೆಸ್‌ ಕ್ರೀಡೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT