ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಚೆಸ್‌ ಹಿನ್ನಡೆಗೆ ಕಾರಣ ಅರ್ಥವಾಗುತ್ತಿಲ್ಲ: ದ್ರೋಣವಲ್ಲಿ ಹಾರಿಕಾ

Published 29 ಜೂನ್ 2023, 15:50 IST
Last Updated 29 ಜೂನ್ 2023, 15:50 IST
ಅಕ್ಷರ ಗಾತ್ರ

ನವದೆಹಲಿ : ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ಚೆಸ್‌ ನಡುವೆ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ಇದು ಯಾಕೆಂಬುದು ಅರ್ಥವಾಗುರ್ತಿಲ್ಲ. ದೇಶದಲ್ಲಿ ಕೆಲವು ಪ್ರತಿಭಾನ್ವಿತ  ಆಟಗಾರ್ತಿಯರು ಮೂಡಿಬರುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸಬಹುದು ಎಂದು ಗ್ರ್ಯಾಂಡ್‌ಮಾಸ್ಟರ್‌ ದ್ರೋಣವಲ್ಲಿ ಹಾರಿಕ ಹೇಳಿದ್ದಾರೆ.

ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಕಂಚಿನ ಪದಕ ಗೆದ್ದುಕೊಂಡಿರುವ ಮತ್ತು ಫಿಡೆ ಮಹಿಳಾ ಗ್ರ್ಯಾನ್‌ ಪ್ರಿ ವಿಜೇತರಾಗಿರುವ ಹಾರಿಕಾ ಕೆಲವು ವರ್ಷಗಳಿಂದ ಅನುಭವಿ ಆಟಗಾರ್ತಿ,  ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಅವರೊಂದಿಗೆ ಭಾರತದ ಮಹಿಳಾ ಚೆಸ್‌ನಲ್ಲಿ ಮುಂಚೂಣಿ ಹೆಸರಾಗಿದ್ದಾರೆ. ಹಂಪಿ ಏಷ್ಯನ್‌ ಗೇಮ್ಸ್ ಚಿನ್ನದ ಪದಕ ವಿಜೇತೆ. ದೇಶದಲ್ಲಿ ಇವರಿಬ್ಬರು ಮಾತ್ರ ‘ಗ್ರ್ಯಾಂಡ್‌ಮಾಸ್ಟರ್‌’ ಪಟ್ಟ ಹೊಂದಿದ್ದಾರೆ.

ಹಲವು ಟ್ರೋಫಿಗಳನ್ನು ಗೆದ್ದುಕೊಂಡಿರುವ ಈ ಇಬ್ಬರು ಆಟಗಾರ್ತಿಯರು, ದುಬೈನಲ್ಲಿ ನಡೆಯುತ್ತಿರುವ  ಚೊಚ್ಚಲ ಗ್ಲೋಬಲ್‌ ಚೆಸ್‌ ಲೀಗ್‌ನಲ್ಲಿ (ಜಿಸಿಎಲ್‌) ಮುಂಬಾ ಮಾಸ್ಟರ್ಸ್‌ ತಂಡದಲ್ಲಿ ಜೊತೆಗೆ ಆಡುತ್ತಿದ್ದಾರೆ.

‌ರಮೇಶಬಾಬು ಪ್ರಗ್ನಾನಂದ, ಅರ್ಜುನ್‌ ಎರಿಗೈಸಿ ಮತ್ತು ಡಿ.ಗುಕೇಶ್ ಅವರು ಪುರುಷರ ವಿಭಾಗದಲ್ಲಿ ಅಲೆಗಳನ್ನು ಎಬ್ಬಿಸುತ್ತಿದ್ದು, ಐದು ಬಾರಿಯ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಸೇರಿದಂತೆ ವಿಶ್ವದ ಘಟಾನುಘಟಿ ಆಟಗಾರರನ್ನು ಸೋಲಿಸಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ದೇಶದ ಚಿತ್ರಣ ಉತ್ತೇಜನಕಾರಿಯಾಗಿಲ್ಲ.

‘ಈ ಕಂದರ ಏಕೆ ಉಂಟಾಗಿದೆ ಎಬುದು ನನಗೂ ಗೊತ್ತಿಲ್ಲ. ಸಾಕಷ್ಟು ಯುವ ಆಟಗಾರರು ಮುನ್ನೆಲೆಗೆ ಬರುತ್ತಿದ್ದಾರೆ. ಆದರೆ ಅತ್ಯಲ್ಪ ಆಟಗಾರ್ತಿಯರು ಭರವಸೆ ಮೂಡಿಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣ. ಆದರೆ ಅವರಿಗೂ (ಮಹಿಳಾ ಆಟಗಾರ್ತಿಯರಿಗೆ) ಮುಂದೆ ಬರಲು ಸಾಕಷ್ಟು ಅವಕಾಶವಿದೆ’ ಎಂದು 2010ರ ಏಷ್ಯನ್‌ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಹಾರಿಕಾ ಗುರುವಾರ ಆನ್‌ಲೈನ್‌ ಸಂವಾದದಲ್ಲಿ ಅಭಿಪ್ರಾಯಪಟ್ಟರು.

ಕೋವಿಡ್‌ ನಿರ್ಬಂಧಗಳ ಕಾರಣ, ಚೀನಾದ ಗುವಾಂಗ್‌ಜೌನಲ್ಲಿ ನಡೆಯಲಿರುವ ಮುಂಬರುವ ಏಷ್ಯಾಡ್‌ನಲ್ಲಿ ಭಾಗವಹಿಸುವ ಬಗ್ಗೆ ಖಚಿತ ನಿರ್ಧಾರ ಕೈಗೊಂಡಿಲ್ಲ ಎಂದು ಜಿಎಂ ಹಂಪಿ ಇತ್ತೀಚೆಗೆ ಹೇಳಿದ್ದರು. ಆದರೆ ಏಷ್ಯನ್‌ ಕ್ರೀಡಾಕೂಟದಲ್ಲಿ ಹಂಪಿ ಭಾಗವಹಿಸುವ ವಿಶ್ವಾಸವಿದೆ ಎಂದು ಹಾರಿಕ ಹೇಳಿದರು.

‘ಈ ವಿಷಯದಲ್ಲಿ ಸ್ವಲ್ಪ ಗೊಂದಲವಿರಬಹುದು. ಆದರೆ ಭಾಗವಹಿಸುತ್ತಿಲ್ಲ ಎಂದು ಹಂಪಿ ಹೇಳಿಲ್ಲ. ಚೀನಾದಲ್ಲಿನ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಿದ್ದೇನೆ ಎಂದಿದ್ದಾರೆ. ಆಡುವ ಬಗ್ಗೆ ಅವರು ಯೋಚಿಸಿರಬಹುದು’ ಎಂದು ಹಾರಿಕ ಹೇಳಿದರು

ಮಹಿಳೆಯರ ವಿಭಾಗದಲ್ಲಿ ದೇಶದ ಇಬ್ಬರು ಗ್ರ್ಯಾಂಡ್‌ಮಾಸ್ವರ್‌ಗಳ (ಹಂಪಿ ಮತ್ತು ತಮ್ಮ ನಡುವೆ) ನಡುವೆ ಹಿಂದೊಮ್ಮೆ ಹೋಲಿಕೆಗಳು ನಡೆದಿದ್ದವು. ಇದು ಬೇಕಾಗಿರಲಿಲ್ಲ ಎಂದು ಅವರು ಹೇಳಿದರು.

‘ಆರಂಭದಲ್ಲಿ ನಮ್ಮಿಬ್ಬರ ನಡುವೆ ಕೆಲವು ಕಾರಣಗಳಿಂದ ಯಾರು ಹೆಚ್ಚೆಂಬ ತುಲನೆಗಳು ನಡೆದಿದ್ದವು. ಆದರೆ ಈಗ ನಾವು ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ನಿರ್ವಹಿಸುವ ತಾಯಂದಿರು ಮಾತ್ರ. ಟೂರ್ನಿಗಳಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತೆಯರು’ ಎಂದರು.

‘ಗ್ಲೋಬಲ್‌ ಚೆಸ್‌ ಲೀಗ್‌, ಆಟಗಾರರ ಹಿತದೃಷ್ಟಿಯಿಂದ ಉತ್ತಮವಾಗಿದೆ. ಇಂಥ ದೊಡ್ಡ ವೇದಿಕೆಯ ಅಗತ್ಯ ನಮಗಿತ್ತು. ಮುಂದಿನ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಲಿದೆ. ಉದಯೋನ್ಮುಖ ಕಿರಿಯ ಆಟಗಾರರನ್ನು ಮುಖ್ಯವಾಹಿನಿಗೆ ತರಬಲ್ಲ ಸಾಮರ್ಥ್ಯ ಹೊಂದಿದೆ’ ಎಂದರು.

ಇಂಥ ದೊಡ್ಡ ಲೀಗ್‌ಳು ವಿಶ್ವದ ಬೇರೆ ಕಡೆ ತಲೆಯೆತ್ತಬಾರದು. ಇದರಿಂದ ಈ ವಿಶೇಷ ಮಾದರಿಯ ಲೀಗ್‌ನ ಮಹತ್ವ ಕಡಿಮೆಯಾಗಬಹದು. ಇಲ್ಲಿ ಪ್ರತಿ ತಂಡದಲ್ಲಿ ಪುರುಷ, ಮಹಿಳಾ, ಕಿರಿಯ ಪ್ರತಿಭೆಗಳಿಗೆ ಅವಕಾಶವಾಗುತ್ತಿದೆ ಎಂದು ಹಾರಿಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT