ಜೈಪುರ: ಇದೇ 28ರಿಂದ ಸೆ.8ರವರೆಗೆ ನಡೆಯುವ ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಭಾರತದ 84 ಕ್ರೀಡಾಪಟುಗಳ ದೊಡ್ಡ ದಂಡು ಪಾಲ್ಗೊಳ್ಳಲಿದೆ. ಈ ಕೂಟದಲ್ಲಿ 25ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ಹೇಳಿದ್ದಾರೆ.
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆಯನ್ನು ಮಾಡಲಿದ್ದು, ಟೋಕಿಯೊ ಕೂಟದ ದಾಖಲೆಯನ್ನು ಮುರಿಯುವ ವಿಶ್ವಾಸವಿದೆ ಎಂದು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವತಃ ಎರಡು ಚಿನ್ನದ ಪದಕ ಗೆದ್ದಿರುವ ಜಾವೆಲಿನ್ ಥ್ರೋ ಪಟುವಾಗಿದ್ದ ದೇವೇಂದ್ರ ಮಂಗಳವಾರ ತಿಳಿಸಿದ್ದಾರೆ.
ಭಾರತದಿಂದ ಹಿಂದೆಂದೂ ಇಷ್ಟೊಂದು ಸಂಖ್ಯೆಯ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿರಲಿಲ್ಲ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ದಾಖಲೆಯ 19 ಪದಕಗಳನ್ನು ಗೆದ್ದಿದೆ. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು.
‘ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಅತಿದೊಡ್ಡ ತಂಡ ಸಿದ್ಧವಾಗಿದೆ. ನಮ್ಮ ಕ್ರೀಡಾಪಟುಗಳ ಪ್ರದರ್ಶನವನ್ನು ಗಮನಿಸಿದಾಗ 25ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವುದು ಖಚಿತ’ ಎಂದು ಹೇಳಿದ್ದಾರೆ.
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಬ್ಲೈಂಡ್ ಜುಡೊ, ಪವರ್ ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಸೇರಿದಂತೆ 12 ಕ್ರೀಡೆಗಳಲ್ಲಿ ಭಾರತ ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.
‘ಭಾರತದ ಕ್ರೀಡಾಪಟುಗಳು ಕಠಿಣ ತರಬೇತಿಯನ್ನು ಪಡೆದು, ಉತ್ತಮ ಲಯದಲ್ಲಿದ್ದಾರೆ. ವಿಶೇಷವಾಗಿ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಆರ್ಚರಿ ಮತ್ತು ಶೂಟಿಂಗ್‌ನಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.
ಭಾರತ ತಂಡದಲ್ಲಿ ಅನುಭವಿಗಳೊಂದಿಗೆ ಯುವ ಅಥ್ಲೀಟ್‌ಗಳೂ ಇದ್ದಾರೆ. ಹಲವರಿಗೆ ಇದು ಎರಡನೇ ಅಥವಾ ಮೂರನೇ ಪ್ಯಾರಾಲಿಂಪಿಕ್ಸ್ ಆಗಿದೆ. ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತ, 39 ವರ್ಷ ವಯಸ್ಸಿನ ಅಮಿತ್ ಕುಮಾರ್ ಸರೋಹಾ ಅವರು ತಂಡದ ಹಿರಿಯ ಸದಸ್ಯರಾಗಿದ್ದಾರೆ. ಡಿಸ್ಕಸ್ ಥ್ರೋನಲ್ಲಿ (ಎಫ್ 51) ಅವರು ನಾಲ್ಕನೇ ಬಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿ (17 ವರ್ಷ) ಭಾರತ ತಂಡದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು. ಕೈಗಳಿಲ್ಲದ ಅವರು ಕಾಲಿನಿಂದಲೇ ಬಿಲ್ಲು–ಬಾಣ ಹಿಡಿದು ಸ್ಪರ್ಧಿಸುತ್ತಾರೆ. ಅವರು ಕಳೆದ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವೈಯಕ್ತಿಕ ಕಾಂಪೌಂಡ್ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.