ಪ್ಯಾರಿಸ್: ಸೆನ್ ನದಿಯಲ್ಲಿ ಒಲಿಂಪಿಕ್ಸ್ ಮ್ಯಾರಥಾನ್ ಈಜಿನಲ್ಲಿ ಭಾಗವಹಿಸಿದ್ದ ಎರಡು ದಿನಗಳ ನಂತರ ಹೊಟ್ಟೆಕೆಟ್ಟು ತಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಪ್ಯಾರಿಸ್ ಕ್ರೀಡೆಗಳ ಈಜು ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದಿರುವ ಐರ್ಲೆಂಡ್‌ನ ಈಜುಪಟು ಡೇನಿಯಲ್ ವೈಫೆನ್ ಸೋಮವಾರ ತಿಳಿಸಿದ್ದಾರೆ.
800 ಮೀ. ಈಜು ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ವೈಫೆನ್, 1,500 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಭಾನುವಾರ ಸಮಾರೋಪ ಸಮಾರಂಭದಲ್ಲಿ ಅವರು ಐರ್ಲೆಂಡ್‌ನ ಧ್ವಜಧಾರಿ ಆಗಬೇಕಿತ್ತು. ಆದರೆ ಕಾಣಿಸಿಕೊಂಡಿರಲಿಲ್ಲ.
‘ನನ್ನ ಕ್ಷೇಮದ ಬಗ್ಗೆ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು. ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ್ದಕ್ಕೆ ಅತೀವ ನಿರಾಸೆಯಾಗಿದೆ. ಹೊಟ್ಟೆನೋವು ಸಮಸ್ಯೆಯಿಂದ ನಾನು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಚಿಕಿತ್ಸೆಯ ನಂತರ ಸುಧಾರಿಸಿದ್ದೇನೆ’ ಎಂದು ಎಕ್ಸ್‌ನಲ್ಲಿ ವೈಫೆನ್ ಬರೆದಿದ್ದಾರೆ.
ಸೆನ್ ನದಿಯಲ್ಲಿ ಶುಕ್ರವಾರ ನಡೆದ ನಡೆದ ಪುರುಷರ 10 ಕಿ.ಮೀ. ಮ್ಯಾರಥಾನ್ ಈಜು ಸ್ಪರ್ಧೆಯಲ್ಲಿ ವೈಫೆನ್ ಪಾಲ್ಗೊಂಡಿದ್ದು, 18ನೇ ಸ್ಥಾನ ಪಡೆದಿದ್ದರು. 1ಗಂ.58ನಿ.ಗಳಲ್ಲಿ ದೂರ ಕ್ರಮಿಸಿದ್ದರು.
ನೂರಕ್ಕೂ ಹೆಚ್ಚು ಟ್ರಯಥ್ಲೀಟ್ ಈಜುಪಟುಗಳಲ್ಲಿ ಮೂವರು ನದಿ ನೀರಿನ ಸಮಸ್ಯೆಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ವೈಫೆನ್ ಕಲುಷಿತ ನೀರು ತಮ್ಮ ಅನಾರೋಗ್ಯಕ್ಕೆ ನೇರ ಕಾರಣ ಎಂದು ಉಲ್ಲೇಖಿಸಿಲ್ಲ.
ನದಿಯ ನೀರು ಕಲುಷಿತಗೊಂಡ ಕಾರಣ ಇಲ್ಲಿ ಅಭ್ಯಾಸ ಹಾಗೂ ಟ್ರಯಥ್ಲಾನ್‌ನ ಈಜು ಸ್ಪರ್ಧೆಗಳನ್ನು ಆರು ಸಲ ಮುಂದೂಡಲಾಗಿತ್ತು.