ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಸೀನಿಯರ್ ಈಜು ಕೂಟ: ಮತ್ತೆ 3 ಚಿನ್ನ ಗೆದ್ದು ಕರ್ನಾಟಕ ಪಾರಮ್ಯ

Published : 11 ಸೆಪ್ಟೆಂಬರ್ 2024, 20:45 IST
Last Updated : 11 ಸೆಪ್ಟೆಂಬರ್ 2024, 20:45 IST
ಫಾಲೋ ಮಾಡಿ
Comments

ಮಂಗಳೂರು: ಸಂಜೆಯ ಎಳೆಬಿಸಿಲಿನಲ್ಲಿ ಹೊಳೆಯುತ್ತಿದ್ದ ಎಮ್ಮೆಕೆರೆ ಈಜುಕೊಳದ ನಾಲ್ಕನೇ ಲೇನ್‌ ಮೇಲೆ ನೋಟವಿಟ್ಟು ಕುಳಿತಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಲಿಲ್ಲ. ಸರ್ವಿಸಸ್‌ನ ಆನಂದ್ ಎಸ್. ಅವರ ಪ್ರಬಲ ಪೈಪೋಟಿಗೆ ಸೆಡ್ಡು ಹೊಡೆದು ಭರವಸೆಯಿಂದ ಮುನ್ನುಗ್ಗಿದ ಒಲಿಂಪಿಯನ್ ಶ್ರೀಹರಿ ನಟರಾಜ್ ಚಿನ್ನ ಗೆದ್ದು ನಗೆ ಬೀರಿದಾಗ ಈಜುಪ್ರಿಯರೂ ಸಂಭ್ರಮಿಸಿದರು.

ಪುರುಷರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಶ್ರೀಹರಿ ಗೆದ್ದ ಚಿನ್ನವೂ ಸೇರಿದಂತೆ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನ ಕರ್ನಾಟಕ ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗಳಿಸಿತು. ಒಟ್ಟಾರೆ 17 ಪದಕಗಳೊಂದಿಗೆ ಚಾಂಪಿಯನ್‌ಷಿಪ್‌ ಪದಕ ಪಟ್ಟಿಯಲ್ಲಿ ಅಗ್ರ‌ಸ್ಥಾನ ಉಳಿಸಿಕೊಂಡಿತು. ಆತಿಥೇ ಯರ ಖಾತೆಯಲ್ಲಿ ಈಗ 9 ಚಿನ್ನ, 7 ಬೆಳ್ಳಿ ಮತ್ತು 1 ಕಂಚಿನ ಪದಕ ಸೇರಿದೆ.

ಮಹಿಳೆಯರ 1500 ಮೀಟರ್ ಫ್ರೀಸ್ಟೈಲ್‌ನೊಂದಿಗೆ ದಿನದ ಮೊದಲ ಫೈನಲ್‌ ರಂಗೇರಿತು. ಈ ಸ್ಪರ್ಧೆಯ ಚಿನ್ನದ ಪದಕ ತೆಲಂಗಾಣದ ವೃತ್ತಿ ಅಗರ ವಾಲ್‌ ಅವರ ಪಾಲಾಯಿತು. ಆರಂಭದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದ ವೃತ್ತಿ ಸಾವಿರ ಮೀಟರ್‌ಗಳ ಮುಕ್ತಾಯದ ವೇಳೆ 50 ಮೀಟರ್‌ಗಳಷ್ಟು ಮುಂದಿದ್ದರು. ಕೊನೆಯ ಐದು ಲ್ಯಾಪ್‌ಗಳಲ್ಲಿ ಕರ್ನಾ ಟಕದ ಶಿರೀನ್‌ ಪೈಪೋಟಿ ಒಡ್ಡಿದರು. ಐದು ಸೆಕೆಂಡುಗಳ ಅಂತರದಲ್ಲಿ ಶಿರೀನ್‌ ಚಿನ್ನ ಕಳೆದುಕೊಂಡರು. 

ಕರ್ನಾಟಕಕ್ಕೆ ಚಿನ್ನ–ಬೆಳ್ಳಿ: ಪುರುಷರ 800 ಮೀ ಫ್ರೀಸ್ಟೈಲ್‌ ಮತ್ತು 50 ಮೀ ಬ್ರೆಸ್ಟ್ ಸ್ಟ್ರೋಕ್‌ನ ಚಿನ್ನ ಕರ್ನಾಟಕದ ಪಾಲಾಯಿತು. 800 ಮೀ ಫ್ರೀಸ್ಟೈಲ್‌ ನಲ್ಲಿ ಅನೀಶ್ ಎಸ್‌.ಗೌಡ ಮತ್ತು ದರ್ಶನ್ ನಡುವೆ ಅಗ್ರಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಆರಂಭದ ಮುನ್ನಡೆಯನ್ನು ಉಳಿಸಿಕೊಂಡ ಅನೀಶ್ ಮೊದಲಿಗರಾದರು. 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್, ತಮಿಳುನಾಡಿನ ಯಾದೇಶ್ ಅವರ ಸವಾಲು ಮೀರಿ ಕರ್ನಾಟಕಕ್ಕೆ ಚಿನ್ನ ತಂದುಕೊಟ್ಟರು.

ಮೊದಲ ದಿನ 400 ಮೀ ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದಿದ್ದ ಕರ್ನಾಟಕದ ಹಾಶಿಕಾ ರಾಮಚಂದ್ರ ಅವರಿದ್ದ ಮಹಿಳೆಯರ 200 ಮೀ ವೈಯಕ್ತಿಕ ಮೆಡ್ಲೆ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ದಾಖಲೆ ಹೊಂದಿರುವ ಹಾಶಿಕಾ ಅವರನ್ನು ಹಿಂದಿಕ್ಕಿದ ತಮಿಳುನಾಡಿನ ಶ್ರೀನಿಧಿ ನಟೇಶನ್ ಚಿನ್ನ ತಮ್ಮದಾಗಿಸಿಕೊಂಡರು.

ಬಟರ್‌ಫ್ಲೈ, ಬ್ಯಾಕ್‌ಸ್ಟ್ರೋಕ್‌ ಮತ್ತು ಬ್ರೆಸ್ಟ್‌ ಸ್ಟೋಕ್‌ನಲ್ಲಿ ಮುನ್ನಡೆ ಸಾಧಿಸಿದ್ದ ಕರ್ನಾಟಕದ ಮಾನವಿ ವರ್ಮಾ ಫ್ರೀಸ್ಟೈಲ್‌ನಲ್ಲಿ ಮುಗ್ಗರಿಸಿ ಕಂಚಿಗೆ ಸಮಾಧಾನಪಟ್ಟುಕೊಂಡರು. ಮಹಿಳೆಯರ 50 ಮೀ ಬ್ರೆಸ್ಟ್‌ ಸ್ಟ್ರೋಕ್ ಸ್ಪರ್ಧೆ ಪಂಜಾಬ್‌ನ ಅವನಿ ಛಾಬ್ರ ಮತ್ತು ಚಾಹತ್ ಅರೋರ ನಡುವೆ ಪೈಪೋಟಿಗೆ ಸಾಕ್ಷಿಯಾಯಿತು. ರಾಷ್ಟ್ರೀಯ ದಾಖಲೆ ಹೊಂದಿರುವ ಚಾಹತ್ ಅರೋರ ಅವರನ್ನು ಮಿಲಿ ಸೆಕೆಂಡುಗಳ ಅಂತರದಲ್ಲಿ ಹಿಂದಿಕ್ಕಿ ಅವನಿ ನಗೆಸೂಸಿದರು.

ಮಿಶ್ರ ರಿಲೆಯಲ್ಲಿ ತಮಿಳುನಾಡು ದಾಖಲೆ
ದಿನದ ಕೊನೆಯ ಸ್ಪರ್ಧೆಯಾದ 4x100 ಮೀ ಮಿಶ್ರ ರಿಲೆಯಲ್ಲಿ ತಮಿಳುನಾಡು ದಾಖಲೆ ಬರೆಯಿತು. ಪ್ರಮಿತಿ ಜ್ಞಾನಶೇಖರನ್‌, ಧನುಷ್‌ ಸುರೇಶ್‌, ಬೆನೆಡಿಕ್ಷನ್ ರೋಹಿತ್ ಮತ್ತು ದೀಕ್ಷಾ ಶಿವಕುಮಾರ್ ಅವರನ್ನು ಒಳಗೊಂಡ ತಂಡ 4ನಿ 5.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮಹಾರಾಷ್ಟ್ರದ ಹೆಸರಿನಲ್ಲಿದ್ದ ದಾಖಲೆ ಹಿಂದಿಕ್ಕಿತು. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರ 4ನಿ 6.84 ಸೆಕೆಂಡುಗಳ ಸಾಧನೆ ಮಾಡಿತ್ತು. ಮಿಶ್ರ ರಿಲೆಯ ರಾಷ್ಟ್ರೀಯ ದಾಖಲೆ ಕರ್ನಾಟಕದ (3ನಿ 42.92ಸೆ) ಹೆಸರಿನಲ್ಲಿದೆ.

ಎರಡನೇ ದಿನದ ಫಲಿತಾಂಶಗಳು

ಪುರುಷರ ವಿಭಾಗ

50 ಮೀ ಬ್ರೆಸ್ಟ್‌ ಸ್ಟ್ರೋಕ್: ವಿದಿತ್ ಎಸ್‌.ಶಂಕರ್‌ (ಕರ್ನಾಟಕ)–1. ಕಾಲ: 28.62ಸೆ, ಯಾದೇಶ್ ಬಾಬು (ತಮಿಳುನಾಡು)–2, ಧನುಷ್ ಸುರೇಶ್ (ತಮಿಳುನಾಡು)–3

100 ಮೀ ಫ್ರೀ ಸ್ಟೈಲ್‌: ಶ್ರೀಹರಿ ನಟರಾಜ್‌ (ಕರ್ನಾಟಕ)–1. ಕಾಲ:50.59 ಸೆ, ಆನಂದ್ ಎ.ಎಸ್‌ (ಸರ್ವಿಸಸ್‌)–2, ರಿಷಭ್ ಅನುಪನ್ (ಮಹಾರಾಷ್ಟ್ರ)–3

200 ಮೀ ವೈಯಕ್ತಿಕ ಮೆಡ್ಲೆ: ವಿನಾಯಕ ವಿಜಯ್‌ (ಸರ್ವಿಸಸ್‌)–1. ಕಾಲ: 2ನಿ 7.73ಸೆ, ಶಿವ ಶ್ರೀಧರ್ (ಕರ್ನಾಟಕ)–2, ಯುಗ್ ಚೇಲಾನಿ (ರಾಜಸ್ತಾನ)–3

800 ಮೀ ಫ್ರೀಸ್ಟೈಲ್‌: ಅನೀಶ್ ಎಸ್‌.ಗೌಡ (ಕರ್ನಾಟಕ)–1.ಕಾಲ: 8ನಿ 20.1ಸೆ, ದರ್ಶನ್‌ ಎಸ್‌ (ಕರ್ನಾಟಕ)–2, ಸಂಪತ್ ಕುಮಾರ್ (ಆಂಧ್ರಪ್ರದೇಶ)–3.

ಮಹಿಳೆಯರ ವಿಭಾಗ

50 ಮೀ ಬ್ರೆಸ್ಟ್‌ ಸ್ಟ್ರೋಕ್: ಅವನಿ ಛಾಬ್ರ (ಪಂಜಾಬ್‌)–1. ಕಾಲ: 33.76ಸೆ, ಚಾಹತ್ ಅರೋರ (ಪಂಜಾಬ್‌)–2, ಹರ್ಷಿತಾ ಜಯರಾಮ್ (ರೈಲ್ವೆ)–3

100 ಮೀ ಫ್ರೀ ಸ್ಟೈಲ್‌: ಮಹಿ ಶ್ವೇತರಾಜ್‌ (ಬಿಹಾರ್‌)–1. ಕಾಲ: 58.54ಸೆ, ಶಿವಾಂಗಿ ಶರ್ಮಾ (ರೈಲ್ವೆ)–2, ಅದಿತಿ ಸತೀಶ್ ಹೆಗಡೆ (ಮಹಾರಾಷ್ಟ್ರ)–3

200 ಮೀ ವೈಯಕ್ತಿಕ ಮೆಡ್ಲೆ: ಶ್ರೀನಿಧಿ ನಟೇಶನ್‌ (ತಮಿಳುನಾಡು)–1. ಕಾಲ: 2ನಿ 25.52ಸೆ, ಹಶೀಕಾ ರಾಮಚಂದ್ರ (ಕರ್ನಾಟಕ)–2, ಮಾನವಿ ವರ್ಮಾ (ಕರ್ನಾಟಕ)–3

1500 ಮೀ ಫ್ರೀಸ್ಟೈಲ್‌: ವೃತ್ತಿ ಅಗರವಾಲ್‌ (ತೆಲಂಗಾಣ)–1. ಕಾಲ: 17ನಿ 45.63ಸೆ, ಶಿರೀನ್‌ (ಕರ್ನಾಟಕ)–2, ಭವ್ಯಾ ಸಚ್‌ದೇವ (ನವದೆಹಲಿ)–3

4x100 ಮೀ ಫ್ರೀಸ್ಟೈಲ್‌ ಮಿಶ್ರ ರಿಲೆ: ಮಹಾರಾಷ್ಟ್ರ–1. ಕಾಲ: 3ನಿ 43.13ಸೆ, ತಮಿಳುನಾಡು–2, ರೈಲ್ವೆ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT