ಚಟೌರೊಕ್ಸ್, (ಫ್ರಾನ್ಸ್): ಶೂಟರ್‌ಗಳಾದ ಮಹೇಶ್ವರಿ ಚೌಹಾನ್ ಮತ್ತು ಅನಂತ್‌ಜೀತ್ ಸಿಂಗ್ ನರುಕಾ ಅವರನ್ನು ಒಳಗೊಂಡ ಭಾರತದ ಸ್ಕೀಟ್ ಮಿಶ್ರ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕವನ್ನು ತಪ್ಪಿಸಿಕೊಂಡಿತು.
ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆದಿದ್ದ ಭಾರತ ತಂಡವು 44–43 ಅಂಕಗಳಿಂದ ಚೀನಾ ವಿರುದ್ಧ ಪರಾಭವಗೊಂಡು ನಾಲ್ಕನೇ ಸ್ಥಾನ ಪಡೆಯಿತು. ಚೀನಾದ ಶೂಟರ್‌ಗಳಾದ ಜಿಯಾಂಗ್ ಯಿಟಿಂಗ್ ಮತ್ತು ಜಿಯಾನ್ಲಿನ್ ಲ್ಯು ಕಂಚಿನ ಪದಕ ಗೆದ್ದರು.
ಮೊದಲ ಅರ್ಹತಾ ಸುತ್ತಿನ ಬಳಿಕ ಭಾರತದ ಜೋಡಿಯು 49 ಅಂಕಗಳೊಂದಿಗೆ ಆಸ್ಟ್ರೇಲಿಯಾ, ಕೊರಿಯಾ, ಫ್ರಾನ್ಸ್ ಮತ್ತು ಇಟಲಿಯ ಎರಡು ತಂಡಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿತ್ತು. ಮೊದಲ ಅರ್ಹತಾ ಸುತ್ತಿನಲ್ಲಿ ಅನಂತ್ ಜೀತ್ 25/25 ಗಳಿಸಿದರೆ, ಮಹೇಶ್ವರಿ 24/25 ಅಂಕ ಗಳಿಸಿದ್ದರು.
ಎರಡನೇ ಸುತ್ತಿನಲ್ಲಿ ಮಹೇಶ್ವರಿ ಪೂರ್ಣ 25 ಅಂಕ ಗಳಿಸಿದರೆ, ಅನಂತ್‌ಜೀತ್ 23 ಅಂಕ ಗಳಿಸಲಷ್ಟೇ ಶಕ್ತವಾದರು. ಕೊನೆಯ ಸುತ್ತಿನಲ್ಲೂ ಕ್ರಮವಾಗಿ 25 ಮತ್ತು 24 ಅಂಕ ಪಡೆದರು. ತಲಾ 146/150 ಅಂಕ ಪಡೆದ ಭಾರತ ಮತ್ತು ಚೀನಾ ತಂಡಗಳು ಕಂಚಿನ ಸುತ್ತಿಗೆ ಅರ್ಹತೆ ಪಡೆದಿದ್ದವು.
ಈ ಸ್ಪರ್ಧೆಯಲ್ಲಿ ಇಟಲಿ (45) ಚಿನ್ನ ಗೆದ್ದರೆ, ಅಮೆರಿಕ (44) ಬೆಳ್ಳಿಯನ್ನು ಜಯಿಸಿತು.