ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷಾಗೆ ಚಿನ್ನದ ಪದಕ

ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ:ಬೆಳ್ಳಿ ಗೆದ್ದ ರಿತಿಕಾ
Published 3 ಜೂನ್ 2023, 16:58 IST
Last Updated 3 ಜೂನ್ 2023, 16:58 IST
ಅಕ್ಷರ ಗಾತ್ರ

ಬಿಷ್ಕೆಕ್‌: ಭಾರತದ ಮನೀಷಾ ಅವರು ಇಲ್ಲಿ ನಡೆಯುತ್ತಿರುವ ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡರು. ರಿತಿಕಾ ಹಾಗೂ ಸರಿತಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಶನಿವಾರ ನಡೆದ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮನೀಷಾ 6–2 ರಲ್ಲಿ ಉಕ್ರೇನ್‌ನ ಯೂಲಿಯಾ ಲೆಸ್ಕೊವೆಟ್ಸ್‌ ಅವರನ್ನು ಮಣಿಸಿದರು. ಇದಕ್ಕೂ ಮುನ್ನ ನಡೆದ ಮೂರೂ ಬೌಟ್‌ಗಳನ್ನು ಅವರು ತಾಂತ್ರಿಕ ಕೌಶಲ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಮೊದಲ ಬೌಟ್‌ನಲ್ಲಿ ಕಜಕಸ್ತಾನದ ಐರಿನಾ ಕಜಿಯುಲಿನಾ ವಿರುದ್ಧ ಗೆದ್ದರೆ, ಎರಡನೇ ಸುತ್ತಿನಲ್ಲಿ ಕಜಕಸ್ತಾನದವರೇ ಆದ ಗೌಖರ್ ಮುಕತಾಯ್‌ ಅವರನ್ನು ಮಣಿಸಿದರು. ಆ ಬಳಿಕ ಮಂಗೋಲಿಯದ ಪುರೆವ್‌ಸುರೆನ್ ಯುಲ್ಜಿಸೈಖಾನ್‌ ವಿರುದ್ಧ ಜಯಿಸಿದರು. ಈ ಮೂರೂ ಬೌಟ್‌ಗಳಲ್ಲಿ ಅವರು ಎದುರಾಳಿಗೆ ಯಾವುದೇ ಪಾಯಿಂಟ್ಸ್‌ ಬಿಟ್ಟುಕೊಡಲಿಲ್ಲ.

ರಿತಿಕಾ ಅವರು ಕಣಕ್ಕಿಳಿದ 72 ಕೆ.ಜಿ. ವಿಭಾಗದಲ್ಲಿ ಮೂವರು ಕುಸ್ತಿಪಟುಗಳು ಮಾತ್ರ ಪೈಪೋಟಿಯಲ್ಲಿದ್ದರು. ಮೊದಲ ಬೌಟ್‌ನಲ್ಲಿ 7–0 ರಲ್ಲಿ ಇಟಲಿಯ ಡಲ್ಮಾ ಕನೇವಾ ಅವರನ್ನು ಸೋಲಿಸಿದರು. ಆದರೆ ಎರಡನೇ ಬೌಟ್‌ನಲ್ಲಿ ಕಜಕಸ್ತಾನದ ಜಮಿಲಾ ಬಕ್ಬೆರ್‌ಗೆನೊವಾ ಎದುರು 0–4 ರಲ್ಲಿ ಪರಾಭವಗೊಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ಸರಿತಾ ತಂದುಕೊಟ್ಟರು. ಅವರು 59 ಕೆ.ಜಿ ವಿಭಾಗದಲ್ಲಿ ಕಂಚು ಜಯಿಸಿದರು.

ಮೊದಲ ಎರಡು ಬೌಟ್‌ಗಳಲ್ಲಿ ಟರ್ಕಿಯ ಎಬ್ರು ದಾಗ್ಬಸಿ ಮತ್ತು ಕಜಕಸ್ತಾನದ ಡಯಾನ ಕಯುಮೊವಾ ಅವರನ್ನು ಕ್ರಮವಾಗಿ 4–0 ಹಾಗೂ 7–0 ರಲ್ಲಿ ಮಣಿಸಿದ ಸರಿತಾ ಸೆಮಿಫೈನಲ್‌ ಪ್ರವೇಶಿಸಿದರು.

ಆದರೆ ನಾಲ್ಕರಘಟ್ಟದ ಹಣಾಹಣಿಯಲ್ಲಿ 4–5 ರಲ್ಲಿ ಉಕ್ರೇನ್‌ನ ಸೊಲೊಮಿಯಾ ವ್ಯಾನಿಕ್‌ ಎದುರು ಸೋತರು. ಕಂಚಿನ ಪದಕಕ್ಕಾಗಿ ಪಡೆದ ಪ್ಲೇ ಆಫ್‌ನಲ್ಲಿ ತಾಂತ್ರಿಕ ಕೌಶಲದ ಶ್ರೇಷ್ಠತೆಯ ಆಧಾರದಲ್ಲಿ ಕಯುಮೊವಾ ಅವರನ್ನು ಮಣಿಸಿದರು.

50 ಕೆ.ಜಿ. ವಿಭಾಗದಲ್ಲಿ ನೀಲಂ ಅವರು ಚೀನಾದ ಜಿಗಿ ಫೆಂಗ್‌ ಎದುರು ಸೋತು ಸೆಮಿಫೈನಲ್‌ ಪ್ರವೇಶಿಸದೆ ಹೊರಬಿದ್ದರು. 53 ಕೆ.ಜಿ. ವಿಭಾಗದಲ್ಲಿ ಪೂಜಾ ಅವರು ಅರ್ಹತಾ ಹಂತದಲ್ಲಿ 0–4 ರಲ್ಲಿ ಚೀನಾದ ಮೆಯಿಂಗ್ ಜಿಯಾಂಗ್ ಎದುರು ಸೋತರು. ವಿನೇಶಾ ಫೋಗಟ್‌ ಅವರು ಪಾಲ್ಗೊಳ್ಳದ ಕಾರಣ, ಪೂಜಾ ಅವರಿಗೆ ಸ್ಪರ್ಧಿಸಲು ಅವಕಾಶ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT