ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ವಿಶ್ವ ಬಾಕ್ಸಿಂಗ್: ಐತಿಹಾಸಿಕ ಸಾಧನೆಯತ್ತ ಭಾರತ

ಸೆಮಿಫೈನಲ್‌ಗೆ ಹುಸಾಮುದ್ದೀನ್‌, ದೀಪಕ್‌, ನಿಶಾಂತ್‌
Published 10 ಮೇ 2023, 13:58 IST
Last Updated 10 ಮೇ 2023, 13:58 IST
ಅಕ್ಷರ ಗಾತ್ರ

ತಾಷ್ಕೆಂಟ್‌ (ಪಿಟಿಐ): ಜಯದ ಓಟ ಮುಂದುವರಿಸಿದ ಭಾರತದ ದೀಪಕ್ ಭೋರಿಯಾ, ಮೊಹಮ್ಮದ್ ಹುಸಾಮುದ್ದೀನ್ ಮತ್ತು ನಿಶಾಂತ್ ದೇವ್‌ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಸೆಮಿಫೈನಲ್‌ ತಲುಪಿದ್ದಾರೆ. ಇದರೊಂದಿಗೆ ಮೂವರೂ ಪದಕ ಖಚಿತಪಡಿಸಿದ್ದಾರೆ.

ಎರಡು ಪದಕ ಜಯಿಸಿದ್ದು ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. 2019ರ ಆವೃತ್ತಿಯಲ್ಲಿ ಅಮಿತ್ ಪಂಘಲ್‌ ಬೆಳ್ಳಿ ಮತ್ತು ಮನೀಷ್‌ ಕೌಶಿಕ್ ಕಂಚು ಜಯಿಸಿದ್ದರು. ಈ ಬಾರಿ ಈಗಾಗಲೇ ಮೂರು ಪದಕ ಖಚಿತವಾದ್ದರಿಂದ ಐತಿಹಾಸಿಕ ಸಾಧನೆ ಮೂಡಿಬರುವುದು ಸ್ಪಷ್ಟ.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 51 ಕೆಜಿ ವಿಭಾಗದ ಎಂಟರಘಟ್ಟದ ಬೌಟ್‌ನಲ್ಲಿ ದೀಪಕ್‌ 5–0ಯಿಂದ ಕಿರ್ಗಿಸ್ತಾನದ ನುರ್ಜಿಗಿತ್‌ ದಿಯುಶೆಬೆವ್ ಅವರನ್ನು ಪರಾಭವಗೊಳಿಸಿದರು.

ಬೌಟ್‌ನ ಆರಂಭದಿಂದಲೇ ಉಭಯ ಬಾಕ್ಸರ್‌ಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಡೆಯಿತು. ಸ್ವಲ್ಪ ದೂರದಿಂದಲೇ ನಿಖರ ಪಂಚ್‌ಗಳನ್ನು ಪ್ರಯೋಗಿಸಿದ ದೀಪಕ್‌ ಎದುರಾಳಿಯನ್ನು ಕಂಗೆಡಿಸಿದರು.

ಮೊದಲ ಸುತ್ತಿನಲ್ಲಿ 5–0ಯಿಂದ ಮೇಲುಗೈ ಸಾಧಿಸಿದ ಭಾರತದ ಬಾಕ್ಸರ್‌, ಎರಡನೇ ಸುತ್ತಿನಲ್ಲೂ ಸಂಯೋಜಿತ ಪಂಚ್‌ಗಳ ಮೂಲಕ ದಿಯುಶೆಬೆವ್ ಅವರನ್ನು ಕಾಡಿದರು. ಎರಡು ಸುತ್ತುಗಳ ಮುನ್ನಡೆಯ ಬಳಿಕ ಬೌಟ್‌ನ ಅಂತಿಮ ಮೂರು ನಿಮಿಷಗಳಲ್ಲಿ ದೀಪಕ್‌, ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಗೆಲುವು ಒಲಿಸಿಕೊಂಡರು.

ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ದೀಪಕ್ ಅವರು ಫ್ರಾನ್ಸ್‌ನ ಬಿ. ಬೆನ್ನಾಮಾ ಎದುರು ಕಣಕ್ಕಿಳಿಯುವರು.

57 ಕೆಜಿ ವಿಭಾಗದ ಎಂಟರಘಟ್ಟದ ಮತ್ತೊಂದು ಹಣಾಹಣಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಹುಸಾಮುದ್ದೀನ್ ಅವರಿಗೆ 4–3ರಿಂದ ಬಲ್ಗೇರಿಯಾದ ಜೆ. ಡಿಯಾಜ್‌ ಇಬನೆಜ್ ವಿರುದ್ಧ ಗೆಲುವು ಒಲಿಯಿತು.

ಈ ಬೌಟ್‌ನಲ್ಲಿ ಉಭಯ ಬಾಕ್ಸರ್‌ಗಳಿಂದ ಬಿರುಸಿನ ಪಂಚ್‌ಗಳ ಪ್ರಯೋಗ ನಡೆಯಿತು. ಅಂತಿಮವಾಗಿ ಗೆಲುವು ಹುಸಾಮುದ್ದೀನ್ ಅವರದಾಯಿತು. ಮುಂದಿನ ಬೌಟ್‌ನಲ್ಲಿ ಭಾರತದ ಬಾಕ್ಸರ್‌ಗೆ ಕ್ಯೂಬಾದ ಸೈದೆಲ್ ಹೊರ್ಟಾ ಸವಾಲು ಎದುರಾಗಿದೆ.

71 ಕೆಜಿ ವಿಭಾಗದ ಬೌಟ್‌ನಲ್ಲಿ ನಿಶಾಂತ್ ಸುಲಭ ಗೆಲುವು ಸಂಪಾದಿಸಿದರು. 22 ವರ್ಷದ ಬಾಕ್ಸರ್‌ ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ಅವರು 5–0ಯಿಂದ ಕ್ಯೂಬಾದ ಜೋರ್ಗ್ ಕ್ಯುಲ್ಲರ್ ಅವರನ್ನು ಮಣಿಸಿದರು. ಹೋದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದ್ದ ಭಾರತದ ಬಾಕ್ಸರ್‌, ಈ ಬೌಟ್‌ನಲ್ಲಿ ಚುರುಕಿನ ಹೊಡೆತಗಳ ಮೂಲಕ ಎದುರಾಳಿಯನ್ನು ವಿಚಲಿತಗೊಳಿಸಿದರು.

ನಿಶಾಂತ್ ಅವರು ಮುಂದಿನ ಬೌಟ್‌ನಲ್ಲಿ ಏಷ್ಯನ್ ಚಾಂಪಿಯನ್‌, ಕಜಕಸ್ತಾನದ ಅಸ್ಲನ್‌ಬೆಕ್‌ ಶಿಂಬರ್ಜೆನೊವ್ ಅವರಿಗೆ ಮುಖಾಮುಖಿಯಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT