ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೇಸಿ ಜಾವೆಲಿನ್’ ಎಸೆಯಲು ಗೋಧಿ ಹೊಲಗಳನ್ನೇ ಆಶ್ರಯಿಸಿದ್ದ ‘ಚಿನ್ನದ ಹುಡುಗ’

ಕಟ್ಟಡ ಕಾರ್ಮಿಕನ ಮಗನಾಗಿ ಹುಟ್ಟಿದ ‘ಚಿನ್ನದ ಹುಡುಗ’ ಅರ್ಷದ್‌ ನದೀಮ್‌-ದೇಸಿ ಜಾವೆಲಿನ್‌, ಹೊಲ ಅಭ್ಯಾಸದ ತಾಣ...
Published 10 ಆಗಸ್ಟ್ 2024, 23:45 IST
Last Updated 10 ಆಗಸ್ಟ್ 2024, 23:45 IST
ಅಕ್ಷರ ಗಾತ್ರ

ಲಾಹೋರ್: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಖಾನೆವಾಲ್ ಜಿಲ್ಲೆಯ ಮಿಯಾನ್ ಚಾನು ಕುಗ್ರಾಮ. ಇಲ್ಲಿನ ಇಟ್ಟಿಗೆ ಮಿಶ್ರಿತ ಮಣ್ಣಿನ ಮನೆಯೊಂದರಲ್ಲಿ ಕಟ್ಟಡ ಕಾರ್ಮಿಕನ ಮಗನಾಗಿ ಹುಟ್ಟಿದ ಅರ್ಷದ್‌ ನದೀಮ್‌ ಸಾಧನೆ ಸ್ಫೂರ್ತಿದಾಯಕವಾದುದು. 

ಎಂಟು ಮಕ್ಕಳಲ್ಲಿ ನದೀಮ್‌ ಮೂರನೆಯವರು. ಮನೆಯಲ್ಲೇ ತಯಾರು ಮಾಡಿದ್ದ ‘ದೇಸಿ ಜಾವೆಲಿನ್’  ಎಸೆಯಲು ಗೋಧಿ ಹೊಲಗಳನ್ನೇ ಆಶ್ರಯಿಸಿದ್ದರು. ಅವರ ಒಲಿಂಪಿಕ್ಸ್‌ ಕನಸು ಚಿಗುರೊಡೆದಿದ್ದು ಇದೇ ಹಳ್ಳಿಯಲ್ಲಿ.

ರಾಜಧಾನಿಯಿಂದ ದೂರದ ಗ್ರಾಮಗಳ ರೀತಿ ಇಲ್ಲೂ ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆಯಿಲ್ಲ. ವಿದ್ಯುತ್‌ ಸಂಪರ್ಕವೂ ಅಷ್ಟಕ್ಕಷ್ಟೇ. ಕ್ರೀಡಾ ಸೌಲಭ್ಯಗಳ ಮಾತಂತೂ ದೂರ.

ಕಳೆದ ಗುರುವಾರ ತಡರಾತ್ರಿ ನದೀಮ್‌ ಚಿನ್ನ ಗೆದ್ದಾಗ ಇದೇ ಗ್ರಾಮದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ಈ ಹಳ್ಳಿಯ ಹುಡುಗ ದೂರದ ಪ್ಯಾರಿಸ್‌ನಲ್ಲಿ, ಫೆವರೀಟ್‌ ಆಗಿದ್ದ ನೀರಜ್‌ ಚೋಪ್ರಾ ಅವರನ್ನು ಎರಡನೇ ಸ್ಥಾನಕ್ಕೆ ಸರಿಸಿದ್ದರು. ಅದೂ ದಾಖಲೆಯೊಡನೆ.

‘ಅಂದು ರಾತ್ರಿ ನಾವು ನಿದ್ದೆ ಮಾಡಲಿಲ್ಲ. ಇಡೀ ದಿನ ಬಂಧುಗಳು, ಮಾಧ್ಯಮದವರು, ಸ್ನೇಹಿತರು, ಅಭಿಮಾನಿಗಳು ಅಭಿನಂದಿಸುತ್ತಲೇ ಇದ್ದರು. ಖುದ್ದಾಗಿ ಬಂದವರೂ ಇದ್ದರು’ ಎಂದು ಅವರ ದೊಡ್ಡ ಅಣ್ಣ ಶಹೀದ್‌ ನದೀಮ್‌ ಶುಕ್ರವಾರ ತಿಳಿಸಿದರು.

‌‘ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಗೇ ಬಂದು ಫೈನಲ್ ನೋಡಿದ್ದರು. ನಾವು ದೊಡ್ಡ ಪರದೆಯ ವ್ಯವಸ್ಥೆ ಮಾಡಿದ್ದೆವು. ಅವರು ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟರು’ ಎಂದು ಅವರು ಹೆಮ್ಮೆಪಟ್ಟರು.

ನದೀಮ್ ಗೆದ್ದ ಪದಕ, ಪಾಕಿಸ್ತಾನಕ್ಕೆ 1992ರ ಬಾರ್ಸಿಲೋನಾ ಕ್ರೀಡೆಗಳ ನಂತರ ಮೊದಲನೆಯದು. 1984ರ ಲಾಸ್‌ ಏಂಜಲೀಸ್‌ ಕ್ರೀಡೆಗಳ ನಂತರ ಮೊದಲ ಚಿನ್ನ. ‘ಇದು ದೇಶದ ಸ್ವಾತಂತ್ರ್ಯೋತ್ಸವಕ್ಕೆ ನನ್ನ ಕಾಣಿಕೆ’ ಎಂದು ನದೀಮ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದರು. 27 ವರ್ಷದ ನದೀಮ್‌ ಎರಡು ಮಕ್ಕಳ ತಂದೆ.

‘ನಾವು ನೀಲಗಿರಿ ಕಾಂಡದಿಂದ ಜಾವೆಲಿನ್ ತಯಾರಿಸಿ, ಅದರ ತುದಿಗೆ ತಗಡನ್ನು ಹೊದಿಸುತ್ತಿದ್ದೆವು. ಗೋಧಿ ಹೊಲಗಳು ನಮಗೆ ತರಬೇತಿಯ ತಾಣವಾಗಿದ್ದವು’ ಎಂದು ಶಹೀದ್‌ ಕಳೆದುಹೋದ ದಿನಗಳನ್ನು ನೆನಪಿಸಿದರು.

‘ನಾವು ದೇಸಿ ರೀತಿಯಲ್ಲಿ ತೂಕ ನಿರ್ವಹಣೆ ತರಬೇತಿ ನಡೆಸುತ್ತಿದ್ದೆವು. ಕಬ್ಬಿಣದ ಸಲಾಕೆ, ಸಿಮೆಂಟ್‌ ತುಂಬಿದ ಎಣ್ಣೆ ಡಬ್ಬ, ಗಟ್ಟಿ ಕಾಂಕ್ರಿಟ್‌ – ಇವೆಲ್ಲವೂ ನಮಗೆ ಜಿಮ್‌ ಪರಿಕರಗಳಾಗಿದ್ದವು’ ಎಂದರು.

ನದೀಮ್ ಅವರು ಪಾಕಿಸ್ತಾನ ನೀರು ಮತ್ತು ಇಂಧನ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮೇಲೆ ಅವರಿಗೆ ಕ್ರೀಡಾ ಸೌಲಭ್ಯಗಳು ದೊರೆತವು ಎಂದು ಅವರು ಹೇಳಿದರು.

ಕೆಲವೇ ತಿಂಗಳ ಹಿಂದಿನವರೆಗೆ ಅವರು ಕಡಿಮೆ ದರ್ಜೆಯ, ಸವಕಲಾದ ಜಾವೆಲಿನ್ ಬಳಸುತ್ತಿದ್ದರು. ಪ್ಯಾರಿಸ್‌ಗೆ ಹೋಗುವ ಕೆಲವೇ ತಿಂಗಳ ಹಿಂದೆ ಕೊನೆಯ ಕ್ಷಣದ ಮನವಿಗೆ ಸರ್ಕಾರ ಸ್ಪಂದಿಸಿತು ಎಂದು ಅವರ ತಾಯಿ ರಝಿಯಾ ಪರ್ವೀನ್‌ ‘ರಾಯಿಟರ್ಸ್‌’ಗೆ ತಿಳಿಸಿದರು.

‘ಸರ್ಕಾರ ಜಾವೆಲಿನ್‌ಗಳಿಗೆ ಮತ್ತು ಇತರ ಸೌಲಭ್ಯಗಳಿಗೆ ಪ್ರಾಯೋಜಕತ್ವ ನೀಡಿತು. ಅವನು ದಕ್ಷಿಣ ಆಫ್ರಿಕಾಕ್ಕೆ ಹೋಗಿ ಅಂತರರಾಷ್ಟ್ರೀಯ ದರ್ಜೆಯ ಮೂರು ಜಾವೆಲಿನ್‌ಗಳನ್ನು ಕೊಂಡು ತಂದ’ ಎಂದು ಅವರು ತಿಳಿಸಿದರು.

ನೀರಜ್‌ಗೂ ಅಭಿನಂದನೆ:
‘ನದೀಮ್‌ ಮತ್ತು ಪಾಕಿಸ್ತಾನಕ್ಕೆ ಪದಕ ಬಂದಿದ್ದರಿಂದ ಸಂಸತವಾಗಿದೆ’ ಎಂದರು. ನದೀಮ್ ಜೊತೆ ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ ಅವರನ್ನೂ ರಝಿಯಾ ಅಭಿನಂದಿಸಿದರು. ‘ಅವರ ತಾಯಿ ಮತ್ತು ಕುಟುಂಬಕ್ಕೂ ಅಭಿನಂದನೆ ಸಲ್ಲಿಸುವೆ. ಸೋಲು ಗೆಲುವು ವಿಧಿಲಿಖಿತ’ ಎಂದರು. ನೀರಜ್ ಚೋಪ್ರಾ ತಾಯಿ ಕೂಡ ಶುಕ್ರವಾರ ನದೀಮ್ ಅವರನ್ನು ಅಭಿನಂದಿಸಿದ್ದು, ಆತನೂ ತಮ್ಮ ಮಗನ ಹಾಗೆ ಎಂದಿದ್ದರು.
ನದೀಮ್‌ಗೆ ಪಾಕ್‌ನ 2ನೇ ಅತ್ಯುನ್ನತ ಪ್ರಶಸ್ತಿ
ಇಸ್ಲಾಮಾಬಾದ್‌ (ಪಿಟಿಐ): ಒಲಿಂಪಿಕ್ಸ್‌ ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ಎಸೆಗಾರ ಅರ್ಷದ್ ನದೀಮ್‌ ಅವರ ಸಾಧನೆಯನ್ನು ಗುರುತಿಸಿ ಪಾಕಿಸ್ತಾನ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಹಿಲಾಲ್‌–ಇ–ಇಮ್ತಿಯಾಜ್‌’ ಪ್ರದಾನ ಮಾಡುವುದಾಗಿ ಶನಿವಾರ ಪ್ರಕಟಿಸಿದೆ.
ಕ್ರಿಕೆಟ್‌ನ ನಷ್ಟ, ಅಥ್ಲೆಟಿಕ್ಸ್‌ಗೆ ಲಾಭ
ಅರ್ಷದ್‌ ನದೀಮ್‌ಗೆ ಶಾಲಾ ದಿನಗಳಲ್ಲಿ ಕ್ರಿಕೆಟ್‌ ಅಚ್ಚುಮೆಚ್ಚು.ಕೆಲಕಾಲ ಟೇಬಲ್‌ ಟೆನಿಸ್‌ ಆಡಿದ್ದರು ಸಹ. ಆದರೆ ಕ್ರಿಕೆಟ್ ಆದ್ಯತೆಯಾಯಿತು. ವೇಗದ ಬೌಲರ್‌ ಆಗುವ ಆಸೆಹೊತ್ತರು. ಫುಟ್‌ಬಾಲ್‌, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಆದರೆ ಕ್ರಿಕೆಟ್‌ನಲ್ಲೇ ನೆಲೆಕಂಡುಕೊಳ್ಳುವ ಆಸೆ ಹೊತ್ತ ಅವರ ಕ್ರೀಡಾಬದುಕಿಗೆ ತಿರುವು ದೊರೆತಿದ್ದು ಶಾಲಾ ಕ್ರೀಡಾಕೂಟವೊಂದರ ಸಂದರ್ಭದಲ್ಲಿ. ಅದೂ ದಶಕದ ಹಿಂದೆ. ಅವರನ್ನು ಗಮಿಸಿದ ಅಥ್ಲೆಟಿಕ್ ಕೋಚ್‌ ರಶೀದ್‌ ಅಹ್ಮದ್ ಸಾಖಿ ಅವರು ನದೀಮ್ ಒಳ್ಳೆಯ ಜಾವೆಲಿನ್‌ ಥ್ರೋವರ್‌ ಆಗಬಲ್ಲರೆನ್ನುವ ಸಾಮರ್ಥ್ಯ ಗುರುತಿಸಿದರು. 2016ರ ಸುಮಾರಿಗೆ ಜಾವೆಲಿನ್‌ನಲ್ಲೇ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದರು. ಉಳಿದಿದ್ದೆಲ್ಲಾ ಇತಿಹಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT