ಬೆಂಗಳೂರು: ಕರ್ನಾಟಕದ ಈಜುಪಟುಗಳು ಹೈದರಾಬಾದ್‌ನಲ್ಲಿ ಬುಧವಾರ ಕೊನೆಗೊಂಡ 76ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಾಲ್ಕು ದಿನ ನಡೆದ ಕೂಟದಲ್ಲಿ ಕರ್ನಾಟಕ ತಂಡ 16 ಚಿನ್ನ, 10 ಬೆಳ್ಳಿ ಮತ್ತು 12 ಕಂಚು ಸೇರಿದಂತೆ ಒಟ್ಟು 38 ಪದಕಗಳನ್ನು ಜಯಿಸಿತು. 299 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತು. ಪುರುಷರ ಮತ್ತು ಮಹಿಳೆಯರ ವಿಭಾಗಗಳ ತಂಡ ಪ್ರಶಸ್ತಿ ಕರ್ನಾಟಕದ ಪಾಲಾಯಿತು. ಎಂಟು ಚಿನ್ನ ಒಳಗೊಂಡಂತೆ 25 ಪದಕಗಳನ್ನು ಜಯಿಸಿದ ಮಹಾರಾಷ್ಟ್ರ ತಂಡ ‘ರನ್ನರ್ಸ್ ಅಪ್’ ಆಯಿತು.
ಕೂಟದ ಕೊನೆಯ ದಿನವೂ ಮಿಂಚಿದ ಕರ್ನಾಟಕದ ಸ್ಪರ್ಧಿಗಳು ಮೂರು ರಾಷ್ಟ್ರೀಯ ದಾಖಲೆ ಸ್ಥಾಪಿಸಿದರಲ್ಲದೆ, ಐದು ಚಿನ್ನ ಮತ್ತು ಐದು ಬೆಳ್ಳಿ ಗೆದ್ದುಕೊಂಡರು.
ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯನ್ನು ಎ.ಕೆ.ಲಿನೇಶಾ 1 ನಿ. 12.67 ಸೆ.ಗಳಲ್ಲಿ ಪೂರೈಸಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಚಾಹತ್ ಅರೋರಾ (1 ನಿ. 13.61 ಸೆ., 2022 ರಲ್ಲಿ) ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು. ಮಾನವಿ ವರ್ಮಾ (1 ನಿ. 13.7 ಸೆ.) ಬೆಳ್ಳಿ ತಮ್ಮದಾಗಿಸಿಕೊಂಡರು. ಲಿನೇಶಾ, 200 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲೂ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.
ನೀನಾ ವೆಂಕಟೇಶ್ ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 1 ನಿ. 02.51 ಸೆ.ಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಬರೆದರು. ಆಸ್ಥಾ ಚೌಧರಿ (1 ನಿ.03.07 ಸೆ.) ಅವರು ಕಳೆದ ವರ್ಷ ಸ್ಥಾಪಿಸಿದ್ದ ದಾಖಲೆಯನ್ನು ಮೀರಿ ನಿಂತರು.
ಮತ್ತೊಂದು ರಾಷ್ಟ್ರೀಯ ದಾಖಲೆ ಮಹಿಳೆಯರ 200 ಮೀ. ಫ್ರೀಸ್ಟೈಲ್‌ನಲ್ಲಿ ಮೂಡಿಬಂತು. ಧೀನಿಧಿ ದೇಸಿಂಗು ಅವರು 2 ನಿ. 04.24 ಸೆ.ಗಳಲ್ಲಿ ಕ್ರಮಿಸಿದರು. ಶಿವಾನಿ ಕಟಾರಿಯಾ ಅವರು 2019 ರಲ್ಲಿ (2 ನಿ. 05.80 ಸೆ.) ಸ್ಥಾಪಿಸಿದ್ದ ದಾಖಲೆ ಮುರಿದರು. ಈ ಸ್ಪರ್ಧೆಯ ಬೆಳ್ಳಿಯನ್ನು ಹಷಿಕಾ ರಾಮಚಂದ್ರ (2 ನಿ. 07.64 ಸೆ.) ಗೆದ್ದುಕೊಂಡರು.
ಪುರುಷರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಮೊದಲ ಎರಡೂ ಸ್ಥಾನಗಳು ಕರ್ನಾಟಕದ ಪಾಲಾದವು. 1 ನಿ. 52.10 ಸೆ.ಗಳಲ್ಲಿ ಗುರಿ ತಲುಪಿದ ತನಿಷ್ ಜಾರ್ಜ್ ಮ್ಯಾಥ್ಯೂ ಚಿನ್ನ ಗೆದ್ದರೆ, ಅನೀಶ್ ಎಸ್.ಗೌಡ (1 ನಿ. 52.18 ಸೆ.) ಬೆಳ್ಳಿ ಜಯಿಸಿದರು.
ಎಸ್.ಲಕ್ಷ್ಯ ಅವರು ಮಹಿಳೆಯರ 400 ಮೀ. ಮೆಡ್ಲೆಯಲ್ಲಿ 5 ನಿ. 10.93 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಶೋಯನ್ ಗಂಗೂಲಿ (4 ನಿ. 33.90 ಸೆ.) ಬೆಳ್ಳಿ ಪಡೆದರು.
ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್ ಎಸ್.ಪಾಟೀಲ್ (2 ನಿ. 06.01 ಸೆ.) ಬೆಳ್ಳಿ ಜಯಿಸಿದರು.
ಆರ್ಯನ್ ದಾಖಲೆ: ಗುಜರಾತ್‌ನ ಆರ್ಯನ್ ನೆಹ್ರಾ ಪುರುಷರ 400 ಮೀ.ಮೆಡ್ಲೆ ಸ್ಪರ್ಧೆಯಲ್ಲಿ (4 ನಿ. 25.62 ಸೆ.) ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು. ಕರ್ನಾಟಕದ ರೆಹಾನ್ ಪೂಂಚಾ (4 ನಿ. 30.13 ಸೆ.) ಅವರು 2009 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು.
ಲಿನೇಶಾ ‘ಶ್ರೇಷ್ಠ ಈಜುಪಟು’
ಕರ್ನಾಟಕದ ಎ.ಕೆ.ಲಿನೇಶಾ ಮತ್ತು ಗುಜರಾತ್‌ನ ಆರ್ಯನ್ ನೆಹ್ರಾ ಅವರು ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗಗಳಲ್ಲಿ ‘ಶ್ರೇಷ್ಠ ಈಜುಪಟು’ ಗೌರವಕ್ಕೆ ಪಾತ್ರರಾದರು. ಲಿನೇಶಾ ಅವರು ಎರಡು ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದಿದ್ದಾರೆ. ಎರಡು ರಾಷ್ಟ್ರೀಯ ದಾಖಲೆಯನ್ನೂ ಸ್ಥಾಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.