ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರು ಮುಂಬರುವ ಡೈಮಂಡ್ ಲೀಗ್‌ನ ಲೂಸಾನ್ ಲೆಗ್‌ನಲ್ಲಿ ಕಣಕ್ಕೆ ಇಳಿಯುವುದಾಗಿ ಶನಿವಾರ ಖಚಿತಪಡಿಸಿದ್ದಾರೆ.
26 ವರ್ಷ ವಯಸ್ಸಿನ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಕಳೆದ ವಾರ ಪ್ಯಾರಿಸ್‌ನಲ್ಲಿ ತೊಡೆಯ ನೋವಿನ ಹೊರತಾಗಿಯೂ ಋತುವಿನ ಅತ್ಯುತ್ತಮ ಸಾಧನೆಯೊಂದಿಗೆ (89.45 ಮೀ) ಬೆಳ್ಳಿ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ (92.97 ಮೀ) ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದಾರೆ.
‘ಆಗಸ್ಟ್ 22ರಂದು ಪ್ರಾರಂಭವಾಗುವ ಲೂಸಾನ್ ಲೆಗ್‌ನಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ’ ಎಂದು ಚೋಪ್ರಾ ಶನಿವಾರ ವರ್ಚುವಲ್ ಸಂವಾದದಲ್ಲಿ ತಿಳಿಸಿದರು.
ಪ್ಯಾರಿಸ್‌ನಲ್ಲಿ ಗೆದ್ದ ಬೆಳ್ಳಿ ಪದಕವು ಟೋಕಿಯೊದಲ್ಲಿ ಗೆದ್ದ ಚಿನ್ನದಷ್ಟೇ ಖುಷಿ ಕೊಟ್ಟಿದೆ ಎಂದು ಚೋಪ್ರಾ ಹೇಳಿದರಾದರೂ, ಅವರ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಚಿನ್ನವನ್ನು ಉಳಿಸಿಕೊಳ್ಳುವ ಮತ್ತು 90 ಮೀಟರ್ ಮೈಲುಗಲ್ಲನ್ನು ದಾಟುವ ಅವರ ಕನಸು ಈ ಬಾರಿಯೂ ನನಸಾಗದ ಕೊರಗು ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವಾಗ ಮಾನಸಿಕವಾಗಿ ಪೂರ್ಣಪ್ರಮಾಣದಲ್ಲಿ ಸಿದ್ಧನಾಗಿದ್ದೆ. ಆದರೆ, ದೈಹಿಕವಾಗಿ ಶೇ 100ರಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ನದೀಮ್ ಅವರಿಂದ ದಾಖಲೆಯ ದೂರದ ಎಸೆತ ಬಂದ ನಂತರವೂ ನನಗೆ ಚಿನ್ನ ಗೆಲ್ಲಲು ಸಾಧ್ಯವಿಲ್ಲ ಎಂದು ಒಮ್ಮೆಯೂ ಅನಿಸಿರಲಿಲ್ಲ’ ಎಂದು ಚೋಪ್ರಾ ಹೇಳಿದರು.
ಪ್ಯಾರಿಸ್‌ನಲ್ಲಿ ಆಗಸ್ಟ್ 8ರಂದು ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನ ನಂತರ ಸ್ವಿಟ್ಜರ್ಲೆಂಡ್‌ಗೆ ತೆರಳಿರುವ ಚೋಪ್ರಾ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದೀರ್ಘಕಾಲದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಋತುವನ್ನು ಯಶಸ್ವಿಯಾಗಿ ಮುಗಿಸಲು ಅವರು ನಿರ್ಧರಿಸಿದ್ದಾರೆ.
ಸೆ.13ರಿಂದ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಡೈಮಂಡ್ ಲೀಗ್‌ನ ಫೈನಲ್ ನಡೆಯಲಿದ್ದು, ಅದರಲ್ಲಿ ಭಾಗವಹಿಸಿದ ನಂತರ ಚೋಪ್ರಾ ಅವರು ತೊಡೆಯ ನೋವಿನ ಸಮಸ್ಯೆ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಶಸ್ತ್ರಚಿಕಿತ್ಸೆಯ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
‘ಪ್ರಸ್ತುತ ಋತು ಮುಕ್ತಾಯಕ್ಕೆ ಇನ್ನು ಒಂದು ತಿಂಗಳು ಉಳಿದಿದೆ. ಅಲ್ಲಿಯವರೆಗೆ ಆದಷ್ಟು ಕಾಳಜಿ ವಹಿಸಲು ಪ್ರಯತ್ನಿಸುತ್ತೇನೆ. ಋತು ಮುಗಿದ ನಂತರ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆಗೆ ಒಳಪಡುತ್ತೇನೆ’ ಎಂದು ಚೋಪ್ರಾ ಹೇಳಿದರು.
‘ನಾನು ಜ್ಯೂರಿಕ್ ಲೆಗ್ (ಸೆ.5) ಮತ್ತು ಡೈಮಂಡ್ ಲೀಗ್ ಫೈನಲ್ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅದೃಷ್ಟವಶಾತ್ ಗಾಯದ ತೀವ್ರತೆ ಕಡಿಮೆಯಿರುವುದರಿಂದ ಅದಕ್ಕೂ ಮೊದಲು ಲೂಸಾನ್ ಲೆಗ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದೇನೆ’ ಎಂದು ಹೇಳಿದರು.
‘ಸಾಮಾನ್ಯವಾಗಿ ಸ್ಪರ್ಧೆಯ ನಂತರ ಗಾಯದ ತೀವ್ರತೆ ಹೆಚ್ಚಾಗುತ್ತದೆ. ಆದರೆ, ಈ ಬಾರಿ ಇಶಾನ್ ಮರ್ವಾಹಾ (ಫಿಸಿಯೊ) ಪ್ಯಾರಿಸ್‌ನಲ್ಲಿ ನನಗೆ ಸೂಕ್ತ ಚಿಕಿತ್ಸೆ ನೀಡಿದರು. ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು 2017ರಿಂದ ನನ್ನೊಂದಿಗೆ ಇದ್ದಾರೆ. ಪ್ರತಿ ಹಂತದಲ್ಲೂ ಅವರು ನೆರವಾಗಿದ್ದಾರೆ’ ಎಂದರು.
ಚೋಪ್ರಾ ಅವರು ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಬಳಿಕ ತೊಡೆಯ ಸ್ನಾಯು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಬ್ರಸೆಲ್ಸ್‌ನಲ್ಲಿ ನಡೆಯುವ ಫೈನಲ್‌ಗೆ ಅರ್ಹತೆ ಪಡೆಯಲು ಚೋಪ್ರಾ, ಡೈಮಂಡ್ ಲೀಗ್ ಲೆಗ್ ಸರಣಿಯಲ್ಲಿ ಅಗ್ರ ಆರರಲ್ಲಿ ಸ್ಥಾನ ಪಡೆಯಬೇಕಾಗಿದೆ. ಪ್ರಸ್ತುತ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಚೋಪ್ರಾ, ಕಳೆದ ಆವೃತ್ತಿಯಲ್ಲಿ ಬೆಳ್ಳಿ ಗೆದ್ದಿದ್ದರು. ಝೆಕ್ ರಿಪಬ್ಲಿಕ್‌ನ ಜೇಕಬ್ ವಾಡ್ಲೆಚ್ ಚಿನ್ನ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.