ಬೆಂಗಳೂರು: ನೀರಜ್ ಚೋಪ್ರಾ ಅವರ ಮತ್ತೊಂದು ಒಲಿಂಪಿಕ್ಸ್ ಯಶಸ್ಸಿನೊಂದಿಗೆ ಇಡೀ ಭಾರತ ಸಂಭ್ರಮಿಸುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೊನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ
ನೀರಜ್ ಚೋಪ್ರಾ ಒಬ್ಬ ಶ್ರೇಷ್ಠ ಕ್ರಿಡಾಪಟು. ಅವರು ಪದೇ ಪದೇ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ನೀರಜ್ ಮತ್ತೊಂದು ಒಲಿಂಪಿಕ್ ಯಶಸ್ಸಿನೊಂದಿಗೆ ಮಿಂಚಿರುವುದಕ್ಕೆ ಭಾರತ ಸಂಭ್ರಮಿಸುತ್ತಿದೆ ಎಂದಿದ್ದಾರೆ.
ಬೆಳ್ಳಿ ಗೆದ್ದಿರುವ ಅವರು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳನ್ನು ಪ್ರೇರೇಪಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿ ದಾಖಲೆ ಮಾಡಿದ್ದರು. ಅದೇ ಸ್ಪರ್ಧೆಯಲ್ಲಿ ಚೋಪ್ರಾಗೆ ಪೈಪೋಟಿಯೊಡ್ಡಿದ್ದ ನದೀಮ್ ಅವರು 84.62 ಮೀಟರ್ಸ್ ದೂರ ಎಸೆದು ಐದನೇ ಸ್ಥಾನ ಗಳಿಸಿದ್ದರು.
ಆದರೆ ಅಲ್ಲಿಂದ ಇಲ್ಲಿಯವರೆಗೂ ನದೀಂ ಮತ್ತು ನೀರಜ್ ಅವರ ಸ್ನೇಹ ಉತ್ತಮವಾಗಿ ಬೆಳೆದಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ವಿರಸವಿದ್ದರೂ ಇವರಿಬ್ಬರ ಕ್ರೀಡಾಸ್ಫೂರ್ತಿ ಉತ್ತಮ ಉದಾಹರಣೆಯಾಗಿ ಗಮನ ಸೆಳೆದಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಈ ಬಾರಿ 26 ವರ್ಷದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ಥ್ರೋ ಮಾಡುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಫೈನಲ್‌ನಲ್ಲಿ 12 ಸ್ಪರ್ಧಿಗಳ ಜತೆ ಹೋರಾಟ ನಡೆಸಿದರು.