ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Olympics | ಮಹಿಳೆಯರ ಮ್ಯಾರಥಾನ್: ತೀವ್ರ ಪೈಪೋಟಿಯ ರೇಸ್‌ ಗೆದ್ದ ಸಿಫಾನ್ ಹಸನ್

Published : 11 ಆಗಸ್ಟ್ 2024, 13:52 IST
Last Updated : 11 ಆಗಸ್ಟ್ 2024, 13:52 IST
ಫಾಲೋ ಮಾಡಿ
Comments

ಪ್ಯಾರಿಸ್‌: ಸುದೀರ್ಘ ಅಂತರದ ಓಟದಲ್ಲಿ ಅವಕಾಶ ನೋಡುವ ಸಿಫಾನ್‌ ಹಸನ್‌ ಅವರ ನಿರ್ಧಾರ ಫಲನೀಡಿತು. ಹಾಲೆಂಡ್‌ನ ಓಟಗಾರ್ತಿ ಸಿಫಾನ್‌ ಅವರು ಭಾನುವಾರ ನಡೆದ ಒಲಿಂಪಿಕ್ಸ್‌ ಮಹಿಳೆಯರ ಮ್ಯಾರಥಾನ್ ಓಟದಲ್ಲಿ ದಾಖಲೆಯೊಡನೆ ಚಿನ್ನದ ಪದಕ ಗೆದ್ದುಕೊಂಡರು.

ಇಥಿಯೋಪಿಯಾ ಸಂಜಾತೆಯಾದ ಡಚ್‌ ಓಟಗಾರ್ತಿ ಸಿಫಾನ್ ಹಾಲಿ ಒಲಿಂಪಿಕ್ಸ್‌ನಲ್ಲಿ 5,000 ಮತ್ತು 10,000 ಮೀಟರ್‌ ಓಟದಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಮೂರನೇ ಪದಕದ ನಿರೀಕ್ಷೆಯಲ್ಲಿ ಮ್ಯಾರಥಾನ್ ಓಟ ಓಡಿದ್ದರು.

ಈ ಪ್ರಯತ್ನ ಸಿಫಾನ್ ಅವರ ಛಲಕ್ಕೆ ನಿದರ್ಶನವಾಯಿತು. ಕೋವಿಡ್‌ ಸಮಯದಲ್ಲಿ ನಡೆದ ಟೋಕಿಯೊ ಕ್ರೀಡೆಗಳಲ್ಲಿ ಇದೇ ಓಟಗಾರ್ತಿ ಎರಡು ಚಿನ್ನ (5,000 ಮತ್ತು 10,000 ಮೀ. ಓಟ) ಮತ್ತು ಒಂದು ಕಂಚಿನ ಪದಕ (1,500 ಮೀ. ಓಟ) ಗೆದ್ದುಕೊಂಡಿದ್ದರು.

ಸಿಫಾನ್‌ 2 ಗಂಟೆ 22.55 ಸೆ.ಗಳಲ್ಲಿ ಮುಕ್ತಾಯದ ರೇಖೆ ದಾಟಿದರು. ಇದು ಒಲಿಂಪಿಕ್ ದಾಖಲೆ. ಅವರಿಗೆ ತೀವ್ರ ಪೈಪೋಟಿ ನೀಡಿದ ಇಥಿಯೋಪಿಯಾದ ಟಿಗ್ಸ್ಟ್‌ ಅಸೀಫಾ (2:22.58) ಮೂರು ಸೆಕೆಂಡುಗಳ ಅಂತರದಲ್ಲಿ ಬೆಳ್ಳಿಗೆ ಸಮಾಧಾನಪಡಬೇಕಾಯಿತು. ಕೆನ್ಯಾದ ಹೆಲೆನ್‌ ಒಬಿರಿ (2:23.10) ಕಂಚಿನ ಪದಕ ಗೆದ್ದುಕೊಂಡರು.

ಶನಿವಾರ ನಡೆದ ಪುರುಷರ ವಿಭಾಗದ ರೇಸ್‌ನಲ್ಲಿ ಇಥಿಯೋಪಿಯಾದ ತಮಿರತ್‌ ತೋಲಾ ಚಿನ್ನ ಗೆದ್ದಿದ್ದರು. ಅಸಿಫಾ ಪೈಪೋಟಿ ನೋಡಿದಾಗ, ಇಥಿಯೋಪಿಯಾ ಮಹಿಳಾ ವಿಭಾಗದ ಚಿನ್ನವೂ ದಕ್ಕುವಂತೆ ಕಂಡಿತ್ತು.

‘ಈ ರೇಸ್‌ ಸುಲಭವಾಗಿರಲಿಲ್ಲ. 5,000 ಮತ್ತು 10,000 ಮೀ. ಓಟದಲ್ಲಿ ಓಡಿದ್ದಕ್ಕೆ ವಿಷಾದವೆನಿಸುತಿತ್ತು. ಈಗ ಇಲ್ಲಿ ಚಿನ್ನ ಗೆದ್ದಿದ್ದರಿಂದ ನಿರಾಳವಾಗಿದೆ’ ಎಂದು 31 ವರ್ಷ ವಯಸ್ಸಿನ ಸಿಫಾನ್ ಹಸನ್ ಹೇಳಿದರು.

‘ನಾನು ಇಂದು ಎದುರಿಸಿದಷ್ಟು ಪೈಪೋಟಿಯನ್ನು ಹಿಂದೆಂದೂ ಎದುರಿಸಿರಲಿಲ್ಲ’ ಎಂದೂ ಪ್ರತಿಕ್ರಿಯಿಸಿದರು.

42 ಕಿ.ಮೀ. ದೂರವಿರುವ ಈ ಓಟ ಸೆಂಟ್ರಲ್ ಪ್ಯಾರಿಸ್‌ನಿಂದ ವರ್ಸೈಲ್‌ ಮಾರ್ಗದಲ್ಲಿತ್ತು. ಹಿಂದೆ ಫ್ರೆಂಚ್‌ ಕ್ರಾಂತಿಯ ಸಂದರ್ಭದಲ್ಲಿ (1789ರ ಅಕ್ಟೋಬರ್‌ 5ರಂದು) ಮಹಿಳೆಯರು ಇದೇ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ್ದರು.

ಕೆನ್ಯಾದ ಮೂವರು ಪ್ರಮುಖ ಓಟಗಾರ್ತಿಯರಾದ ಶರೊನ್ ಲೊಕೆಡಿ, ಟೋಕಿಯೊದಲ್ಲಿ ಚಿನ್ನ ಗೆದ್ದಿದ್ದ ಪೆರೆಸ್‌ ಮತ್ತು ಒಬಿರಿ ಅವರು ಸುಮಾರು 30 ಕಿ.ಮೀ. ವರೆಗೆ ಇಥಿಯೋಪಿಯಾ ಓಟಗಾರ್ತಿಯರಿಗೆ ತೀವ್ರ ಸ್ಪರ್ಧೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT