ಬಲಾಲಿ, ಹರಿಯಾಣ: 'ನಮ್ಮ ಹೋರಾಟ ಮುಗಿದಿಲ್ಲ. ಅದು ಮುಂದುವರಿಯಲಿದೆ. ಸತ್ಯ ಜಯಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದು ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದರು.
ಪ್ಯಾರಿಸ್‌ನಿಂದ ಶನಿವಾರ ದೆಹಲಿಗೆ ಮರಳಿದ ಅವರನ್ನು ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಹರಿಯಾಣದ ಅವರ ತವರೂರು ಬಲಾಲಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು. 135 ಕಿ.ಮೀ ದೂರ ಕ್ರಮಿಸಲು ಅವರಿಗೆ 13 ಗಂಟೆಗಳು ಬೇಕಾದವು. ದಾರಿಯುದ್ದಕ್ಕೂ ಬೇರೆ ಬೇರೆ ಗ್ರಾಮಗಳ ಕಾಪ್ ಪಂಚಾಯತ್‌ಗಳಲ್ಲಿ ಅವರನ್ನು ಸನ್ಮಾನಿಸಲಾಯಿತು.
ವಿನೇಶ್ ಅವರು ಶನಿವಾರ ಮಧ್ಯರಾತ್ರಿ ತಮ್ಮ ತವರು ಬಲಾಲಿಗೆ ತಲುಪಿದರು. ಅಲ್ಲಿ ನೂರಾರು ಗ್ರಾಮಸ್ಥರು ಸೇರಿದ್ದ ಅದ್ದೂರಿ ಸಮಾರಂಭದಲ್ಲಿ ವಿನೇಶ್ ಅವರನ್ನು ಸತ್ಯರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
‘ನನ್ನ ದೇಶವಾಸಿಗಳು, ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರಿಂದ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಿದೆ. ಈಗ ಆಗಿರುವ ಗಾಯವು ಬೇಗನೆ ಮಾಯುವ ಭರವಸೆ ಮೂಡಿದೆ. ಇದರಿಂದ ನಾನು ಕುಸ್ತಿಗೆ ಮರಳಲೂ ಬಹುದು’ ಎಂದು 29 ವರ್ಷದ ವಿನೇಶ್ ಹೇಳಿದರು.
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿಕಟಪೂರ್ವ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ವಿನೇಶ್ ಮತ್ತಿತರ ಕುಸ್ತಿಪಟುಗಳು ದೆಹಲಿಯಲ್ಲಿ ಧರಣಿ ನಡೆಸಿದ್ದರು.
ಅವರು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿಯ ಫೈನಲ್ ತಲುಪಿದ್ದರು. ಆದರೆ ಬೌಟ್‌ಗೂ ಮುನ್ನ ತೂಕ ಪರೀಕ್ಷೆಯಲ್ಲಿ ಅವರ ದೇಹತೂಕ 100 ಗ್ರಾಮ್ ಹೆಚ್ಚಿತ್ತು. ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ಇದರಿಂದ ಪದಕ ಕೈತಪ್ಪಿತ್ತು. ಇದನ್ನು ಪ್ರಶ್ನಿಸಿ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಅವರ ಮೇಲ್ಮನವಿಯನ್ನು ತಿರಸ್ಕರಿಸಲಾಯಿತು.
‘ಈ ರೀತಿ ಪದಕ ಕೈತಪ್ಪಿಸಿಕೊಂಡಿರುವುದು ನನ್ನ ಜೀವನದ ಬಹಳ ದೊಡ್ಡ ಗಾಯವಾಗಿದೆ. ಇದು ಗುಣವಾಗಬೇಕಾದರೆ ಎಷ್ಟು ಸಮಯ ಹಿಡಿಯಬಹುದು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಮುಂದೆ ಕುಸ್ತಿಯನ್ನು ಮುಂದುವರಿಸುತ್ತೇನೋ ಇಲ್ಲವೋ ಅದೂ ಗೊತ್ತಿಲ್ಲ. ಆದರೆ ಇವತ್ತು ಮೂಡಿರುವ ಧೈರ್ಯವನ್ನು ಸರಿಯಾದ ದಿಕ್ಕಿನಲ್ಲಿ ವಿನಿಯೋಗಿಸುತ್ತೇನೆ’ ಎಂದು ವಿನೇಶ್ ಹೇಳಿದರು.
‘ಈ ಗ್ರಾಮದಲ್ಲಿ ಜನಿಸಿದ್ದು ನನ್ನ ಅದೃಷ್ಟ. ನಾನು ಸದಾ ಕಾಲ ಮಹಿಳೆಯರ ಗೌರವ ಮತ್ತು ಈ ಊರಿನ ಗೌರವವನ್ನು ಹೆಚ್ಚಿಸಲು ಹೋರಾಡುತ್ತೇನೆ. ಕುಸ್ತಿಯಲ್ಲಿ ನಾನು ಮಾಡಿರುವ ಎಲ್ಲ ದಾಖಲೆಗಳನ್ನೂ ಈ ಊರಿನ ಮಹಿಳಾ ಪೈಲ್ವಾನರು ಮುರಿಯಬೇಕೆಂಬುದೇ ನನ್ನ ಆಶಯವಾಗಿದೆ. ಇಲ್ಲಿರುವ ಪ್ರತಿಭಾನ್ವಿತರು ಬಹಳಷ್ಟನ್ನು ಸಾಧಿಸಬಲ್ಲರು. ಆದರೆ ಅವರಿಗೆ ನೀವೆಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡುತ್ತೇನೆ. ನಾನು ಕಲಿತಿರುವುದೆಲ್ಲವನ್ನೂ ಈ ಊರಿನಲ್ಲಿರುವ ಎಲ್ಲ ಸಹೋದರಿಯರಿಗೆ ಧಾರೆಯೆರೆಯಲು ಸಿದ್ಧವಾಗಿರುವೆ. ಆದರೆ ಪರಂಪರೆ ಮುಂದುವರಿಯಬೇಕು’ ಎಂದರು.
ಈ ಸಂದರ್ಭದಲ್ಲಿ ಒಲಿಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತಿತರರು ಹಾಜರಿದ್ದರು.
ವಿನೇಶ್ ಮೇಲೆ ಸಹೋದರಿಯರ ಮುನಿಸು
ವಿನೇಶ್ ಫೋಗಟ್ ಅವರು ತಮ್ಮ ಬಾಲ್ಯದ ಜೀವನದ ಕಷ್ಟಗಳು ತಂದೆಯ ಅಗಲಿಕೆ ಹಾಗೂ ಕುಸ್ತಿಯಲ್ಲಿ ತಮ್ಮ ಸಾಧನೆಗೆ ಕಾರಣರಾದವರೆಲ್ಲರ ಕುರಿತು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದಿದ್ದರು. ಆದರೆ ಅದರಲ್ಲಿ ತಮ್ಮ ದೊಡ್ಡಪ್ಪ ಮಹಾವೀರ್ ಫೋಗಟ್ ಸಹೋದರಿಯರ ಬಗ್ಗೆ ಉಲ್ಲೇಖಿಸಿರಲಿಲ್ಲ ಇದು ಮಹಾವೀರ್ ಅವರ ದೊಡ್ಡ ಮಗಳು ಒಲಿಂಪಿಯನ್ ಗೀತಾ ಫೋಗಟ್ ಅವರಿಗೆ ಅಸಮಾಧಾನ ಮೂಡಿಸಿದೆ. ‘ಕರ್ಮಗಳ ಫಲಿತಾಂಶ ಬಹಳ ಸರಳ. ಮಾಡಿದ ವಂಚನೆಗೆ ಇವತ್ತಲ್ಲದಿದ್ದರೆ ನಾಳೆಯಾದರೂ ವಂಚನೆಯೇ ಪ್ರತಿಫಲವಾಗುತ್ತದೆ’ ಎಂದು ಗೀತಾ ‘ಎಕ್ಸ್’ ನಲ್ಲಿ ಹಿಂದಿ ಸಂದೇಶ ಹಾಕಿದ್ದಾರೆ. ಗೀತಾ ಅವರ ಪತಿ ಕುಸ್ತಿಪಟು ಪವನ್ ಸರೋಹಾ ‘ನೀವು ಎಲ್ಲವನ್ನೂ ಚೆನ್ನಾಗಿ ಬರೆದಿದ್ದೀರಿ. ಆದರೆ ಇವತ್ತು ನಿಮ್ಮ ದೊಡ್ಡಪ್ಪ ಮಹಾವೀರ್ ಫೋಗಟ್ ಅವರನ್ನು ಮರೆತಿದ್ದೀರಿ. ನೀವು ಕುಸ್ತಿಪಟುವಾಗಿ ಬೆಳೆಯಲು ಕಾರಣರಾದವರೇ ಅವರು. ಆ ದೇವರು ತಮಗೆ ಸದ್ಭುದ್ಧಿ ಕೊಡಲಿ’ ಎಂದು ಸಂದೇಶ ಹಾಕಿದ್ದಾರೆ. ಗೀತಾ ಅವರ ಸಹೋದರಿ ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಕೂಡ ಅಸಮಾಧಾನ ಹೊರಹಾಕಿದ್ದು ‘ಎಲ್ಲರನ್ನೂ ನೆಲಕಚ್ಚಿಸುವುದೊಂದೇ ಉದ್ಧೇಶವಾದರೆ ಪ್ರತಿಯೊಂದು ಯಶಸ್ಸು ಕೂಡ ಸೋಲು’ ಎಂದು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.