ಪ್ಯಾರಿಸ್: ಭಾರತದ ನಿತೇಶ್ ಕುಮಾರ್ ಅವರು ಮೂರು ಗೇಮ್‌ಗಳ ಸೆಣಸಾಟದಲ್ಲಿ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಎಸ್‌ಎಲ್3 ಬ್ಯಾಡ್ಮಿಂಟನ್ ನಲ್ಲಿ ಸೋಮವಾರ ಚಿನ್ನ ಗೆದ್ದುಕೊಂಡರು. ಜಾವೆಲಿನ್ ಥ್ರೋ ತಾರೆ ಸುಮಿತ್ ಅಂಟಿಲ್ ಅವರು ದಾಖಲೆಯೊಂದಿಗೆ ಚಿನ್ನ ಉಳಿಸಿಕೊಂಡರು. ಇದರ ಜೊತೆಗೆ ಭಾರತದ ಸ್ಪರ್ಧಿಗಳು ಆರನೇ ದಿನ ಎಂಟು ಪದಕಗಳನ್ನು ಬಾಚಿಕೊಂಡು ಬೆಳಕಿನ ನಗರಿಯಲ್ಲಿ ಮಿಂಚಿದರು.
ಭಾನುವಾರ ತಡರಾತ್ರಿ (ಭಾರತದ ಕಾಲಮಾನ) ನಿಷಾದ್ ಕುಮಾರ್ ಹೈಜಂಪ್ ಟಿ27 ವಿಭಾಗದಲ್ಲಿ ಸತತ ಎರಡನೇ ಬೆಳ್ಳಿ ಗೆದ್ದಿದ್ದರು. ಸೋಮವಾರ ಎರಡು ಚಿನ್ನ, ಮೂರು ಬೆಳ್ಳಿ, ಎರಡು ಕಂಚಿನ ಪದಕ ಭಾರತದ ಕ್ರೀಡಾಪಟುಗಳ ಪಾಲಾಯಿತು. ಇವು ಗಳಲ್ಲಿ ನಾಲ್ಕು ಬ್ಯಾಡ್ಮಿಂಟನ್‌ನಲ್ಲೇ ಬಂದವು.
ಹರಿಯಾಣದ 29 ವರ್ಷ ವಯಸ್ಸಿನ ನಿತೇಶ್ ಅಮೋಘವಾಗಿ ಹೋರಾಡಿ 21–14, 18–21, 23–21 ರಿಂದ ಬೆಥೆಲ್ ಅವರನ್ನು 1 ಗಂಟೆ 20 ನಿಮಿಷಗಳ ಸೆಣಸಾಟದಲ್ಲಿ ಹಿಮ್ಮೆಟ್ಟಿಸಿದರು. ಬ್ರಿಟನ್‌ನ ಸ್ಪರ್ಧಿ, ಟೋಕಿಯೊ ಕ್ರೀಡೆಗಳಲ್ಲೂ ಬೆಳ್ಳಿ ವಿಜೇತರಾಗಿದ್ದರು. ತೀವ್ರ ಪ್ರಮಾಣದ ಕಾಲಿನ ಊನಕ್ಕೆ ಒಳಗಾದ ಆಟಗಾರರು ಎಸ್‌ಎಲ್3 ವಿಭಾಗ ದಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ.
2019ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತದಲ್ಲಿ ನಿತೇಶ್ ಅವರ ಕಾಲು ಜಜ್ಜಿಹೋಗಿತ್ತು. ಆದರೆ ಇದರಿಂದ ಅವರ ಮನೋಬಲ ಕುಗ್ಗಲಿಲ್ಲ. ಅವರಿಗೆ ಆಗ 15 ವರ್ಷ. ಈ ನಿಟ್ಟಿನಲ್ಲಿ ಮಂಡಿಯ ಐಐಟಿ ಪದವೀಧರನ ಚಿನ್ನದ ಪಯಣದ ಹಿಂದಿನ ಪರಿಶ್ರಮ ಸಾಮಾನ್ಯದ್ದಾಗಿರಲಿಲ್ಲ.
ಸ್ಫೂರ್ತಿಯ ಸೆಲೆ: ನೌಕಾಪಡೆ ಅಧಿಕಾರಿಯ ಪುತ್ರನಾಗಿರುವ ನಿತೇಶ್ ಕೂಡ ತಂದೆಯ ಹಾದಿಯಲ್ಲೇ ಸಾಗುವ ಕನಸು ಕಂಡಿದ್ದರು. ಆದರೆ ಅಪಘಾತ ಅವರ ಕನಸನ್ನು ಭಗ್ನಗೊಳಿಸಿತು. ಪುಣೆಯ ಕೃತಕ ಅಂಗಜೋಡಣಾ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ, ಗಾಯಗೊಂಡ ಸೈನಿಕರ ಅಂಗಜೋಡಣೆಯ ನಂತರ ಸವಾಲುಗಳಿಗೆ ಸಜ್ಜಾಗುತ್ತಿದ್ದ ಪರಿ ನೋಡಿದ್ದು ಅವರಲ್ಲೂ ಸ್ಪೂರ್ತಿ ಮೂಡಿಸಿತು.
ಇನ್ನೊಂದೆಡೆ, ಕನ್ನಡಿಗ, ಉತ್ತರ ಪ್ರದೇಶ ಕೇಡರ್‌ನ ಐಎಸ್‌ಎಸ್ ಅಧಿಕಾರಿ ಸುಹಾಸ್ ಎಲ್. ಯತಿರಾಜ್ ಅವರೂ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸತತ ಎರಡನೇ ಸಲ ಎಸ್‌ಎಲ್4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಸೋಮವಾರ ನಡೆದ ಏಕಪಕ್ಷೀಯ ಫೈನಲ್‌ನಲ್ಲಿ 41 ವರ್ಷದ ಸುಹಾಸ್ 9–21, 13–21 ರಲ್ಲಿ ನೇರಗೇಮ್‌ಗಳಿಂದ ಫ್ರಾನ್ಸ್‌ನ ಲುಕಸ್ ಮಝುರ್ ಅವರಿಗೆ ಮಣಿದರು. ಮೂರು ವರ್ಷ ಹಿಂದೆ ಟೋಕಿಯೊದಲ್ಲೂ ಇದೇ ಫಲಿತಾಂಶ ಪುನರಾವರ್ತನೆಯಾಗಿತ್ತು. ಸುಹಾಸ್ ಅವರಿಗೆ ಹುಟ್ಟಿನಿಂದಲೇ ಎಡಪಾದದ ನ್ಯೂನತೆ ಇತ್ತು. ಸುಹಾಸ್, ಹಾಸನ ಜಿಲ್ಲೆಯ ಅರಸೀಕೆರೆಯವರು.
ಯೋಗೇಶ್‌ಗೆ ಮತ್ತೆ ಬೆಳ್ಳಿ
ಪ್ಯಾರಿಸ್: ಹರಿಯಾಣದ ಬಹಾದ್ದೂರ್‌ಗಢದ ಯೋಗೇಶ್ ಕಥುನಿಯಾ ಅವರು ಸತತ ಎರಡನೇ ಪ್ಯಾರಾಲಿಂಪಿಕ್ಸ್‌ನಲ್ಲೂ ಬೆಳ್ಳಿ ಗೆದ್ದು ಸಂಭ್ರಮಿ ಸಿದರು. ಸೋಮವಾರ ನಡೆದ ಪುರುಷರ ಡಿಸ್ಕಸ್ ಥ್ರೊ ಎಫ್56 ಸ್ಪರ್ಧೆ ಯಲ್ಲಿ ಅವರು 42.22 ಮೀ. ಎಸೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದರು.
ಬ್ರೆಜಿಲ್‌ನ ಕ್ಲಾಡಿನ ಬ್ಯಾಟಿಸ್ಟಾ ಡೊಸ್ ಸ್ಯಾಂಟೊಸ್ ಅವರು ಡಿಸ್ಕ್ ಅನ್ನು 46.86 ಮೀ. ದೂರಕ್ಕೆಸೆದು ಪ್ಯಾರಾಲಿಂಪಿಕ್ಸ್ ದಾಖಲೆಯೊಡನೆ ಚಿನ್ನ ಗೆದ್ದರು. ಒಂಬತ್ತನೇ ವಯಸ್ಸಿನಲ್ಲಿ ಯೋಗೇಶ್ ಅವರಿಗೆ ಜಿಬಿಎಸ್ ಎಂಬ ನರಸಂಬಂಧಿ ಕಾಯಿಲೆ ಬಾಧಿಸಿ ಕಾಲಿನ ನ್ಯೂನತೆ ಎದುರಾಯಿತು. ಇದರಿಂದ ಅವರು ಗಾಲಿಕುರ್ಚಿ ಅವಲಂಬಿಸಬೇಕಾಯಿತು. ಯೋಗೇಶ್ ಅವರ ತಂದೆ ಗ್ಯಾನ್‌ಚಂದ್ ಕಥುನಿಯಾ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದಾರೆ.
ಎರಡನೇ ಕೂಟದಲ್ಲೂ ನಿಷಾದ್‌ಗೆ ಬೆಳ್ಳಿ
ನಿಷಾದ್ ಪುರುಷರ ಟಿ47 ವಿಭಾಗದ ಹೈಜಂಪ್‌ನಲ್ಲಿ ಸತತ ಎರಡನೇ ಬಾರಿ ಬೆಳ್ಳಿ ಪದಕ ಗೆದ್ದುಕೊಂಡರು. ಭಾನುವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ 24 ವರ್ಷ ವಯಸ್ಸಿನ ನಿಷಾದ್ 2.04 ಮೀ. ಎತ್ತರ ಜಿಗಿದರು.
ಟೋಕಿಯೊದಲ್ಲೂ ರಜತ ಗೆದ್ದಾಗ 2.06 ಮೀ. ಜಿಗಿದಿದ್ದರು. 2.12 ಮೀ. ಎತ್ತರ ಹಾರಿದ ಅಮೆರಿಕದ ರೊಡೆರಿಕ್ ಟೌನ್ಸೆಂಡ್ ಅವರಿಗೆ ಚಿನ್ನ ದಕ್ಕಿತು.
ಆರ್ಚರಿ: ಶೀತಲ್– ರಾಕೇಶ್ ಜೋಡಿಗೆ ಕಂಚು
ಭಾರತದ ಬಿಲ್ಗಾರರಾದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರು ಸೋಮವಾರ ಪ್ಯಾರಾಲಿಂಪಿಕ್ಸ್ ಮಿಶ್ರ ತಂಡ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಜೋಡಿಯು156-155 ಅಂತರದಲ್ಲಿ ಇಟಲಿಯ ಎಲಿಯೊನೊರಾ ಸರ್ತಿ ಮತ್ತು ಮ್ಯಾಟಿಯೊ ಬೊನಾಸಿನಾ ಅವರನ್ನು ಮಣಿಸಿ ಈ ಸಾಧನೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.