ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics : ಭಾರತದ ಅಲ್ಡ್ರಿನ್‌, ಪಾರುಲ್‌ಗೆ ನಿರಾಸೆ

Published : 5 ಆಗಸ್ಟ್ 2024, 1:11 IST
Last Updated : 5 ಆಗಸ್ಟ್ 2024, 1:11 IST
ಫಾಲೋ ಮಾಡಿ
Comments

ಪ್ಯಾರಿಸ್‌ : ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ನಲ್ಲಿ ಭಾರತದ ಕಳಾಹೀನ ಪ್ರದರ್ಶನ ಮುಂದುವರಿಯಿತು. ಮಹಿಳೆಯರ 3000 ಮೀಟರ್ಸ್ ಸ್ಟೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ ಮತ್ತು ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಅವರು ಭಾನುವಾರ ಹೀಟ್ಸ್‌ ಹಂತದಿಂದ ಮೇಲೇರಲಿಲ್ಲ.

ಪಾರುಲ್ ತಮ್ಮ ಹೀಟ್‌ ರೇಸ್‌ನಲ್ಲಿ ಎಂಟನೇ ಸ್ಥಾನದಲ್ಲಿ ಮುಗಿಸಿದರು ಹಾಗೂ ಒಟ್ಟಾರೆ 21ನೇ ಸ್ಥಾನದ ಕಾಲಾವಧಿ ದಾಖಲಿಸಿದರು. 29 ವರ್ಷದ ಪಾರುಲ್‌, ಕ್ರೀಡೆಗಳಿಗೆ ಸಜ್ಜುಗೊಳ್ಳಲು ಕೆಲವು ತಿಂಗಳಿಂದ ಅಮೆರಿಕದ ಎತ್ತರದ ಪ್ರದೇಶದಲ್ಲಿ ತರಬೇತಿ ಪಡೆದಿದ್ದರು. ಅವರು 3000 ಮೀ.ಸ್ಟೀಪಲ್‌ಚೇಸ್‌ ಸ್ಪರ್ಧೆಯನ್ನು 9ನಿ.23.39 ಸೆ.ಗಳಲ್ಲಿ ಕ್ರಮಿಸಿದರು. ಇದು ಅವರ ಈ ವರ್ಷದ ಉತ್ತಮ ಓಟ ಎನಿಸಿತು.

ಹಾಲಿ (ಟೋಕಿಯೊ ಕ್ರೀಡೆಗಳ) ಚಾಂಪಿಯನ್ ಪೆರುತ್‌ ಚೆಮುತೈ ಅವರು ಹೀಟ್ಸ್ ರೇಸ್‌ ಒಂದರಲ್ಲಿ 9ನಿ.10.51 ಸೆ. ತೆಗೆದುಕೊಂಡು ಗೆದ್ದರೆ, ಹೀಟ್‌ ರೇಸ್‌ ಎರಡರಲ್ಲಿ ಕೆನ್ಯಾದ ಫೇತ್‌ ಚೆರೊಟಿಚ್‌ 9:10.57 ಅವಧಿಯೊಡನೆ ಮತ್ತು ಮೂರನೇ ಹೀಟ್‌ ರೇಸ್‌ನಲ್ಲಿ ಜರ್ಮನಿಯ ಗೆಸಾ ಫೆಲಿಸಿಟಾಸ್‌ ಕ್ರಾಸೆ (9:10.68) ಅಗ್ರಸ್ಥಾನ ಪಡೆದರು.

ಸ್ಟೀಪಲ್‌ಚೇಸ್‌ನಲ್ಲಿ ಒಲಿಂಪಿಕ್ಸ್‌ ಪ್ರವೇಶಕ್ಕೆ ಬೇಕಾದ ಅರ್ಹತಾ ಮಾನ ದಂಡ (9:23.00) ಸಾಧಿಸಿ ಪಾರುಲ್ ನೇರವಾಗಿ ಅರ್ಹತೆ ಪಡೆದಿದ್ದರು.

ಈ ಹಿಂದೆ ಲಲಿತಾ ಬಾಬರ್ ಮಾತ್ರ ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್ ತಲುಪಿದ್ದರು. ರಿಯೊದಲ್ಲಿ ಆ ಸಾಧನೆ ಮಾಡಿದ್ದರು.

ಅಲ್ಡ್ರಿನ್‌ ವಿಫಲ: ಪುರುಷರ ಲಾಂಗ್‌ಜಂಪ್‌ನಲ್ಲಿ ಮೊದಲೆರಡು ಯತ್ನಗಳಲ್ಲಿ ಫೌಲ್‌ ಮಾಡಿದ ಜೆಸ್ವಿನ್ ಆಲ್ಡ್ರಿನ್‌, ಮೂರನೇ ಯತ್ನದಲ್ಲಿ 7.61 ಮೀ. ದೂರ ಜಿಗಿದರು. ಗ್ರೂಪ್‌ ಬಿ ಕಾಲ್ವಿಫಿಕೇಷನ್‌ನಲ್ಲಿ ಅವರು 16 ಸ್ಪರ್ಧಿಗಳ ಪೈಕಿ 13ನೇ ಸ್ಥಾನ ಪಡೆದರು. ಒಟ್ಟಾರೆ 26ನೇ ಸ್ಥಾನಕ್ಕೆ ಸರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT