ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics Hockey | ಭಾರತಕ್ಕೆ ಇಂದು ಜರ್ಮನಿ ಸವಾಲು

‘ಬ್ಲಾಕ್‌ಬಸ್ಟರ್‌’ ಸೆಮಿಫೈನಲ್ ನಿರೀಕ್ಷೆ l ಅಮಿತ್‌ ಸ್ಥಾನದಲ್ಲಿ ಮನ್‌ಪ್ರೀತ್ ಆಡುವ ನಿರೀಕ್ಷೆ
ಸಿಡ್ನಿ ಕಿರಣ್‌
Published 5 ಆಗಸ್ಟ್ 2024, 23:30 IST
Last Updated 5 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಬ್ರಿಟನ್‌ ವಿರುದ್ಧ ದೀರ್ಘಕಾಲ ನೆನಪಿಟ್ಟುಕೊಳ್ಳುವಂಥ ವೀರೋಚಿತ ಆಟವಾಡಿದ ಭಾರತ ಹಾಕಿ ತಂಡ ದೇಶದಲ್ಲಿ ಸಂಭ್ರಮದ ಅಲೆಯೆಬ್ಬಿಸಿದೆ. ಭಾರತ ತಂಡ ಈಗ ಮತ್ತೊಂದು ಸಮರಕ್ಕೆ ಬೇಗನೇ ಅಣಿಯಾಗಬೇಕಿದೆ. ಮಂಗಳವಾರ ರಾತ್ರಿ ಒಲಿಂಪಿಕ್ಸ್‌ ಹಾಕಿ ಸ್ಪರ್ಧೆಯಲ್ಲಿ ಬಲಿಷ್ಠ ಜರ್ಮನಿಯನ್ನು ಎದುರಿಸಲಿದ್ದು ಇವ್ಸ್‌ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ‘ಬ್ಲಾಕ್‌ಬಸ್ಟರ್‌ ಸೆಮಿಫೈನಲ್’ ನಿರೀಕ್ಷಿಸಲಾಗಿದೆ.

ಟೋಕಿಯೊ (2021) ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾದ ಭಾರತ ಭಾನುವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದ 42 ನಿಮಿಷಗಳ ದೀರ್ಘ ಅವಧಿಯನ್ನು 10 ಮಂದಿಯೊಡನೆ ಆಡಬೇಕಾಯಿತು. ಅಜಾಗರೂಕತೆಯಿಂದ ಸ್ಟಿಕ್ ಎತ್ತಿದ ಡಿಫೆಂಡರ್‌ ಅಮಿತ್ ರೋಹಿದಾಸ್ ‘ರೆಡ್‌ ಕಾರ್ಡ್‌’ ದರ್ಶನದಿಂದ ಹೊರನಡೆಯಬೇಕಾಯಿತು. ಇದರ ನಡುವೆಯೂ ಕೆಚ್ಚೆದೆಯಿಂದ ಆಡಿ ಇಂಗ್ಲೆಂಡ್‌ ತಂಡಕ್ಕೆ ಅದರ ಲಾಭ ಪಡೆಯಲು ಬಿಡಲಿಲ್ಲ. 1–1 ಡ್ರಾ ನಂತರ, ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಪಡೆಯಿತು. ನಿಗದಿ ಅವಧಿಯಲ್ಲೂ, ನಂತರವೂ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅಮೋಘ ತಡೆಗಳೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡದ ಶಿಸ್ತುಬದ್ಧ ರಕ್ಷಣೆಯ ಆಟ ತಂಡದ ನೆರವಿಗೆ ಬಂತು. ಪ್ಯಾರಿಸ್‌ಗೆ ಬಂದಿಳಿದ ನಂತರ ತಂಡ ಯೋಜನಾಬದ್ಧ ಆಟವಾಡಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವಿಗೆ ಮತ್ತು ಅರ್ಜೆಂಟೀನಾ ವಿರುದ್ಧ ‘ಡ್ರಾ’ಕ್ಕೆ ಕೊನೆಯ ಕ್ಷಣಗಳಲ್ಲಿ ಗಳಿಸಿದ ಗೋಲುಗಳು ನೆರವಾದವು. ಭಾರತ ಹೆಚ್ಚು ಗುರಿ ಮತ್ತು ಛಲದಿಂದ ಆಡಿದೆ. ಗ್ರೇಟ್‌ ಬ್ರಿಟನ್‌ ವಿರುದ್ಧವೂ ಇಂಥ ಛಲದ ಆಟವೇ ಎದ್ದುಕಂಡಿತ್ತು. ಈಗ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧವೂ ಇಂಥ ಆಟದ ಅಗತ್ಯವಿದೆ. ಜರ್ಮನಿ ಒಲಿಂಪಿಕ್ಸ್‌ನಲ್ಲಿ ಐದನೇ ಬಾರಿ ಚಿನ್ನದ ಮೇಲೆ ಕಣ್ಣಿಟ್ಟಿದೆ.

ಅಮಿತ್‌ ಕೊರತೆ:

ಭಾರತಕ್ಕೆ ಇರುವ ದೊಡ್ಡಚಿಂತೆಯೆಂದರೆ ಅಮಿತ್ ರೋಹಿದಾಸ್ ಅವರ ಅಮಾನತು. ಹೀಗಾಗಿ ಕೋಚ್‌ ಕ್ರೇಗ್ ಫುಲ್ಟನ್ ಅವರು ಮಿಡ್‌ಫೀಲ್ಡ್‌ನ ಒಬ್ಬ ಆಟಗಾರರನ್ನು ಈ ಸ್ಥಾನ ತುಂಬಲು ಬಳಸಬೇಕಾಗಿದೆ. ಮಾಜಿ ನಾಯಕ ಹಾಗೂ ಅನುಭವಿ ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಆ ಸ್ಥಾನದಲ್ಲಿ ಆಡುವ ಸಾಧ್ಯತೆ ಬಹಳ. ಬ್ರಿಟನ್ ವಿರುದ್ಧವೂ ಅವರು ಹೆಚ್ಚಿನ ಅವಧಿಗೆ ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದರು. ಹಿರಿಯ ಆಟಗಾರನಿಗೆ ಇದು ಕಷ್ಟವೇನೂ ಆಗಲಾರದು.

ಜರ್ಮನಿಗೆ ಭಾರತ ಬಳಸುವ ತಂತ್ರದ ಅರಿವು ಇದ್ದೇ ಇದೆ. ಅದನ್ನು ನಿಭಾಯಿಸಲು ಅವರಲ್ಲಿ ಗುಣಮಟ್ಟದ  ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದರೆ ಲಂಡನ್ ಒಲಿಂಪಿಕ್ಸ್‌ ನಂತರ ಆ ತಂಡ ಒಲಿಂಪಿಕ್ಸ್‌ ಪ್ರಶಸ್ತಿ ಗೆದ್ದಿಲ್ಲ. ಆದರೆ ತಂಡ ಈಗಲೂ ಪ್ರಬಲವಾಗಿಯೇ ಇದೆ. ಕಳೆದ ವರ್ಷ ಭುವನೇಶ್ವರ–ರೂರ್ಕೆಲಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆ ತಂಡ ಚಾಂಪಿಯನ್ ಆಗಿತ್ತು. ಈಗ ಒಲಿಂಪಿಕ್ಸ್‌ ಪ್ರಶಸ್ತಿಯನ್ನೂ ಸೇರಿಸಲು ತಂಡ ತುದಿಗಾಲಲ್ಲಿ ನಿಂತಿದೆ.

ಜರ್ಮನಿ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಸ್ಪೇನ್‌ಗೆ 0–2 ರಿಂದ ಸೋತಿದ್ದರೂ, ಉಳಿದಂತೆ ಪ್ರಬಲ ನೆದರ್ಲೆಂಡ್ಸ್‌ ವಿರುದ್ಧ ಲೀಗ್‌ನಲ್ಲಿ, 2016ರ ಕ್ರೀಡೆಗಳ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಜಯಗಳಿಸಿದೆ.

ಭಾರತಕ್ಕೆ ಈಗ ಏರಲು ಪರ್ವತವೇ ಇದೆ. ಆದರೆ ತಂಡದ ವಿಶ್ವಾಸ ಮತ್ತು ಉತ್ಸಾಹ ನೋಡಿದರೆ,  ಆಟಗಾರರು ಅದಕ್ಕೆ ಸಜ್ಜಾದಂತಿದೆ

ಭಾರತದ ಮನವಿ ತಿರಸ್ಕೃತ ರೋಹಿದಾಸ್‌ ಅಮಾನತು
ಭಾರತ ತಂಡ ಮಂಗಳವಾರ ಜರ್ಮನಿ ವಿರುದ್ಧ ನಡೆಯುವ ಪಂದ್ಯದಲ್ಲಿ ಅನುಭವಿ ರಕ್ಷಣೆ ಆಟಗಾರ ಅಮಿತ್ ರೋಹಿದಾಸ್‌ ಅವರ ಸೇವೆಯಿಲ್ಲದೇ ಆಡಬೇಕಾಗಿದೆ. ಬ್ರಿಟನ್‌ನ ಆಟಗಾರ ವಿಲ್‌ ಕಲ್ನನ್‌ ಅವರೆದುರು ಅಪಾಯಕಾರಿ ರೀತಿ ಸ್ಟಿಕ್‌ ಎತ್ತಿದ ಕಾರಣ ಕಾರಣಕ್ಕೆ ಅವರಿಗೆ ಭಾನುವಾರ ರೆಡ್ ಕಾರ್ಡ್ ತೋರಿಸಲಾಗಿತ್ತು. ಭಾರತ ಅಮಾನತು ವಿರುದ್ಧ ಮನವಿ ಸಲ್ಲಿಸಿತ್ತು. ಆದರೆ ವಿಶ್ವ ಹಾಕಿ ಫೆಡರೇಷನ್‌ ಮನವಿ ತಿರಸ್ಕರಿಸಿ ಒಂದು ಪಂದ್ಯಕ್ಕೆ ಅಮಾನತು ಮಾಡಿದೆ. ವಿಡಿಯೊ ಅಂಪೈರ್‌ ಪಂದ್ಯದ ವೇಳೆ ದೃಶ್ಯಾವಳಿಗಳನ್ನು ಪರಿಶೀಲಿಸಿ ರೆಡ್‌ ಕಾರ್ಡ್‌ ನಿರ್ಧಾರ ಸಮ್ಮತಿಸಿದ್ದರು. ಎದುರಾಳಿ ಫಾರ್ವರ್ಡ್‌ ಆಟಗಾರ ಕಲ್ನನ್‌ ಅವರನ್ನು ಮುನ್ನುಗ್ಗದಂತೆ ತಡೆಯುವ ಉದ್ದೇಶದಿಂದ ಅಮಿತ್‌ ಎತ್ತಿದ ಸ್ಟಿಕ್‌ ಕಲ್ನನ್‌ ಮುಖಕ್ಕೆ ತಾಗಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ಫುಟ್‌ಬಾಲ್‌ನಲ್ಲಿ ಒಂದು ರೆಡ್‌ಕಾರ್ಡ್‌ ಅಥವಾ ಎರಡು ‘ಎಲ್ಲೊ (ಹಳದಿ) ಕಾರ್ಡ್‌’ ಪಡೆದರೆ ಅಂಥ ಆಟಗಾರ ಒಂದು ಪಂದ್ಯ ಕಳೆದುಕೊಳ್ಳುತ್ತಾನೆ. ಆದರೆ ಹಾಕಿ ಆಟದಲ್ಲಿ ಅಂಪೈರ್‌ ಅವರು ತಾಂತ್ರಿಕ ನಿಯೋಗಕ್ಕೆ ಸಲ್ಲಿಸುವ ವರದಿಯ ಮೇರೆಗೆ ತಪ್ಪು ಎಸಗಿದ ಆಟಗಾರನ ಅಮಾನತು ಶಿಕ್ಷೆಯ ನಿರ್ಧಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT