ಪ್ಯಾರಿಸ್: ರಾಷ್ಟ್ರೀಯ ದಾಖಲೆ ಹೊಂದಿರುವ ಜ್ಯೋತಿ ಯರ್ರಾಜಿ ಅವರು ಒಲಿಂಪಿಕ್ಸ್ ಮಹಿಳೆಯರ 100 ಮೀ. ಹರ್ಡಲ್ಸ್ ಸೆಮಿಫೈಣಲ್ ತಲುಪಲು ವಿಫಲರಾದರು. ಗುರುವಾರ ನಡೆದ ತಮ್ಮ ರೆಪೆಷಾಜ್ ಹೀಟ್‌ನಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು.
ಒಲಿಂಪಿಕ್ಸ್‌ನ 100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಅಥ್ಲೀಟ್ ಎನಿಸಿದ ಜ್ಯೋತಿ, ರೆಪೆಷಾಜ್ ಹೀಟ್‌ನಲ್ಲಿ 13.17 ಸೆ.ಗಳಲ್ಲಿ ಗುರಿತಲುಪಿದರು. ಒಟ್ಟು 40 ಓಟಗಾರ್ತಿಯಲ್ಲಿ 16ನೇ ಸ್ಥಾನ ಪಡೆದರು.
ಆದರೆ ಇದು ಅವರ ಒಳ್ಳೆಯ ಸಾಧನೆಯೇನಲ್ಲ. ರಾಷ್ಟ್ರೀಯ ದಾಖಲೆ ಸ್ಥಾಪಿಸುವಾಗ 12.78 ಸೆ.ಗಳಲ್ಲಿ ಓಡಿದ್ದ ಅವರು, ಬುಧವಾರ ನಡೆದ ಗೇಮ್ಸ್‌ನ ಹೀಟ್ಸ್‌ನಲ್ಲಿ 13.16 ಸೆ.ಗಳಲ್ಲಿ ಅಂತರ ಕ್ರಮಿಸಿದ್ದರು.
ಪ್ರತಿ ರೆಪೆಷಾಜ್‌ನಲ್ಲಿ ಮೊದಲ ಎರಡು ಸ್ಥಾನ ಪಡೆದವರು ಸೆಮಿಫೈನಲ್ ತಲುಪುತ್ತಾರೆ.
ದಕ್ಷಿಣ ಆಫ್ರಿಕಾದ ಮರಿಯೋನ್ ಫೌರಿ (12.79 ಸೆ.) ಮತ್ತು ಡಚ್ ಅಥ್ಲೀಟ್ ಮಾಯ್ಕೆ ಟಿನ್–ಎ–ಲಿಮ್ ಅವರು ರೆಷೆಪಾಜ್ ಹೀಟ್ 1ರಿಂದ ಸೆಮಿಫೈನಲ್‌ಗೆ ಮುನ್ನಡೆದರು.