ಹಾಂಗ್‌ಝೌ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಪರ್ವೀನ್ ಹೂಡ ಅವರು ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಭಾನುವಾರ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದರು. ಅಷ್ಟೇ ಅಲ್ಲ, 57 ಕೆ.ಜಿ. ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾ ಕಾದಿರಿಸಿದರು.
ಕಳೆದ ವರ್ಷ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 63 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಸಿತೊರಾ ತುರ್ದಿಬೆಕೊವಾ ಅವರನ್ನು ಸೋಲಿಸಿದರು. ರೆಫ್ರಿಗಳ ಒಮ್ಮತದ ತೀರ್ಪಿನಲ್ಲಿ ಪರ್ವಿನ್ ವಿಜಯಿಯಾದರು.
ಆದರೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದ ಜೈಸ್ಮಿನ್ ಲಂಬೋರಿಯಾ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಹೊರಬಿದ್ದರು. ಉತ್ತರ ಕೊರಿಯಾದ ಬಾಕ್ಸರ್ ವಾನ್ ಉಗ್ಯಾಂಗ್ ಎದುರು ಆರ್‌ಎಸ್‌ಸಿ (ರೆಫ್ರಿ ಸ್ಟಾಪ್ಸ್ ಕಂಟೆಸ್ಟ್) ಆಧಾರದಲ್ಲಿ ಸೋತರು.
ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಪರ್ವೀನ್ ಆರಂಭದಿಂದಲೇ ಲಯದಲ್ಲಿದ್ದರು. ದೀರ್ಘ ಬಾಹುಗಳನ್ನು ಬಳಸಿ ಅಂತರದಿಂದಲೇ 21 ವರ್ಷದ ಎದುರಾಳಿಯತ್ತ ಪಂಚ್‌ಗಳನ್ನು ಪ್ರಯೋಗಿಸಿದರು. ಆರಂಭದ ಸುತ್ತಿನ ನಂತರ ಅವರು ಎದುರಾಳಿಗೆ ಮುನ್ನುಗ್ಗಲು ಅವಕಾಶ ನೀಡಿದರೂ, ಪ್ರಹಾರದ ವೇಗ ತಗ್ಗಿಸಲಿಲ್ಲ.
ತುರ್ದಿಬೆಕೊವಾ, ಭಾರತದ ಸ್ಪರ್ಧಿಯತ್ತ ಹಲವು ಬಾರಿ ಪಂಚ್‌ಗಳನ್ನು ಮಾಡಿ ಸೆಣಸಾಟದಲ್ಲಿ ಪುನರಾಗಮನಕ್ಕೆ ಯತ್ನಿಸಿದರು. ಆದರೆ ತೀರ್ಪುಗಾರರಿಗೆ ಒಟ್ಟಾರೆಯಾಗಿ ಭಾರತೀಯ ಸ್ಪರ್ಧಿಯ ಶ್ರೇಷ್ಠತೆ ಮನವರಿಕೆಯಾಯಿತು.
ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್ (50 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ), ಲವ್ಲಿನಾ ಬೋರ್ಗೊಹೈನ್ (75 ಕೆ.ಜಿ) ಮತ್ತು ನರೇಂದರ್ ಬೆರ್ವಾಲ್ (+92 ಕೆ.ಜಿ) ಅವರು ಈಗಾಗಲೇ ತಮ್ಮ ತಮ್ಮ ಕೆಟಗರಿಗಳಲ್ಲಿ ಒಲಿಂಪಿಕ್ ಕೋಟಾದಲ್ಲಿ ಪ್ಯಾರಿಸ್‌ನಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.