ಕಾಂಗ್ಡಾ, ಹಿಮಾಚಲಪ್ರದೇಶ: ಬುಧವಾರ ಇಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಅತಿ ಹೆಚ್ಚು ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದಾರೆ.
ಬಾಲಕ, ಬಾಲಕಿ, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ 12 ಕೆಟಗರಿಗಳಲ್ಲಿ 2300 ಪ್ರವೇಶಗಳು ನೋಂದಣಿಯಾಗಿವೆ. 32 ರಾಜ್ಯ ಸಂಸ್ಥೆಗಳು ಮತ್ತು 12 ಮಾನ್ಯತೆ ಪಡೆದ ಸಂಸ್ಥೆಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ಡಾ ನಿಸರ್ಗ ಸೌಂದರ್ಯ ತುಂಬಿ ತುಳುಕುವ ಪ್ರದೇಶವಾಗಿದೆ. ಪ್ರವಾಸಿ ತಾಣವೂ ಆಗಿದೆ. ಇಲ್ಲಿ ನಡೆಯಲಿರುವ ಟೂರ್ನಿಯಲ್ಲಿ 11 ಹಾಗೂ 13 ವರ್ಷದೊಳಗಿನವರ ವಿಭಾಗದ ಸ್ಪರ್ಧೆಗಳೂ ನಡೆಯಲಿವೆ. ಸೀನಿಯರ್ ವಿಭಾಗಗಳಲ್ಲಿಯೂ ಪೈಪೋಟಿ ನಡೆಯಲಿದೆ.
ಆದರೆ ಖ್ಯಾತನಾಮ ಆಟಗಾರರಾದ ಅಚಂತ ಶರತ್ ಕಮಲ್, ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ಐಹಿಕಾ ಮುಖರ್ಜಿ ಅವರು ಭಾಗವಹಿಸುತ್ತಿಲ್ಲ.
ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾಗವಹಿಸಿದ್ದ ಜಿ. ಸತ್ಯನ್, ಹರ್ಮಿತ್ ದೇಸಾಯಿ ಹಾಗೂ ಮಾನವ್ ಠಕ್ಕರ್ ಅವರು ಇಲ್ಲಿ ಆಡಲಿದ್ದಾರೆ.
ಈ ತಿಂಗಳಾತ್ಯಂದಲ್ಲಿ ಚೀನಾ ಎದುರು ಟೂರ್ನಿ ಮತ್ತು ಮುಂದಿನ ತಿಂಗಳು ಏಷ್ಯನ್ ಚಾಂಪಿಯನ್‌ಷಿಪ್ ನಡೆಯಲಿದೆ. ಇದರಿಂದಾಗಿ ಭಾರತ ತಂಡದ ಆಯ್ಕೆಯ ದೃಷ್ಟಿಯಿಂದ ರಾಷ್ಟ್ರೀಯ ಟಿಟಿ ಚಾಂಪಿಯನ್‌ಷಿಪ್ ಮಹತ್ವ ಪಡೆದುಕೊಂಡಿದೆ.