ಪ್ಯಾರಿಸ್: ತೀವ್ರ ಹೋರಾಟದ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಸರ್ಬಿಯಾ, ಒಲಿಂಪಿಕ್ಸ್ ಬ್ಯಾಸ್ಕೆಟ್‌ಬಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಂಗಳವಾರ 95–90 ಪಾಯಿಂಟ್‌ಗಳಿಂದ ಸೋಲಿಸಿತು. ವಿರಾಮದ ವೇಳೆ ಸರ್ಬಿಯಾ 24 ಪಾಯಿಂಟ್‌ಗಳ ಹಿನ್ನಡೆಯಲ್ಲಿತ್ತು.
ಸೆಮಿಫೈನಲ್‌ನಲ್ಲಿ ಸರ್ಬಿಯಾದ ಸಂಭವನೀಯ ಎದುರಾಳಿ ಸತತ ಐದು ಬಾರಿ ಒಲಿಂಪಿಕ್ ಚಾಂಪಿಯನ್ ಅಮೆರಿಕ.
ಎನ್‌ಬಿಎದ ಅತಿ ಮೌಲ್ಯಯುತ ಆಟಗಾರ ಎನಿಸಿರುವ ನಿಕೋಲಾ ಜೋವಿಕ್ 14 ರಿಬೌಂಡ್ಸ್ ಸೇರಿದಂತೆ 21 ಪಾಯಿಂಟ್ಸ್ ಗಳಿಸಿದರು. ಬೊಗ್ದಾನ್ ಬೊಗ್ದಾನೋವಿಕ್ 17 ಪಾಯಿಂಟ್ಸ್ ಹಾಕಿದರು. ಎರಡನೇ ಕ್ವಾರ್ಟರ್ ಕೊನೆಗೆ ಆಸ್ಟ್ರೇಲಿಯಾ 44–20ರಲ್ಲಿ ಮುಂದಿತ್ತು.
ಸೆಮಿಗೆ ಜರ್ಮನಿ: ವಿಶ್ವ ಚಾಂಪಿಯನ್ ಜರ್ಮನಿ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಗ್ರೀಸ್ ತಂಡವನ್ನು 76–63 ಪಾಯಿಂಟ್ ಗಳಿಂದ ಸೋಲಿಸಿತು.
ಮೊದಲ ಕ್ವಾರ್ಟರ್ ನಂತರ 12 ಪಾಯಿಂಟ್‌ಗಳಿಂದ ಹಿಂದಿದ್ದ ಜರ್ಮನಿ ನಂತರ ಚೇತರಿಸಿ ವಿರಾಮದ ವೇಳೆ 36–36ರಲ್ಲಿ ಸಮ ಮಾಡಿಕೊಂಡಿತು. ತೀವ್ರ ಹೋರಾಟದ ಮೂರನೇ ಕ್ವಾರ್ಟರ್ ನಂತರ ಉತ್ತಮ ಹಿಡಿತ ಪಡೆಯಿತು.
ಜರ್ಮನಿ ಪರ ಫ್ರಾಂಝ್ ವ್ಯಾಗ್ನರ್ 22 ಪಾಯಿಂಟ್ ಗಳಿಸಿ ಮಿಂಚಿದರು.