ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಕ್ವೆಫೀಲ್ಡ್ ಕಪ್‌ ಚೆಸ್‌: ಎಂಟನೇ ಸಲ ‘ಡ್ರಾ’ ಮಾಡಿಕೊಂಡ ಗುಕೇಶ್, ಪ್ರಜ್ಞಾನಂದ

ಪ್ರಶಸ್ತಿ ಖಚಿತಪಡಿಸಿಕೊಂಡ ಅಲಿರೇಜಾ
Published : 28 ಆಗಸ್ಟ್ 2024, 14:36 IST
Last Updated : 28 ಆಗಸ್ಟ್ 2024, 14:36 IST
ಫಾಲೋ ಮಾಡಿ
Comments

ಸೇಂಟ್‌ ಲೂಯಿ (ಅಮೆರಿಕ): ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ.ಗುಕೇಶ್ ಮತ್ತು ಆರ್‌.ಪ್ರಜ್ಞಾನಂದ ಅವರು ಸಿಂಕ್ವೆಫೀಲ್ಡ್‌ ಕಪ್‌ ಚೆಸ್ ಟೂರ್ನಿಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಸತತ ಎಂಟನೇ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು. ಈ ಟೂರ್ನಿಯಲ್ಲಿ ಇನ್ನೊಂದು ಸುತ್ತಷ್ಟೇ ಉಳಿದಿವೆ.

ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿರುವ ಈ ಟೂರ್ನಿಯಲ್ಲಿ ಗುಕೇಶ್‌ ಮಂಗಳವಾರ ಕೇವಲ 23 ನಡೆಗಳ ನಂತರ ಹಾಲೆಂಡ್‌ನ ಅನಿಶ್ ಗಿರಿ ಜೊತೆ ‘ಡ್ರಾ’ ಒಪ್ಪಂದಕ್ಕೆ ಸಹಿಮಾಡಿದರು. ಪ್ರಜ್ಞಾನಂದ ಸಹ ಡ್ರಾ ಸರಪಣಿಯಿಂದ ಹೊರಬರಲಿಲ್ಲ. ಅವರು 28 ನಡೆಗಳ ಬಳಿಕ ಸ್ಥಳೀಯ ಆಟಗಾರ ಫ್ಯಾಬಿಯಾನೊ ಕರುವಾನ ಜೊತೆ ಪಾಯಿಂಟ್‌ ಹಂಚಿಕೊಳ್ಳಲು ನಿರ್ಧರಿಸಿದರು.

ಹತ್ತು ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯ ಎಂಟನೇ ಸುತ್ತಿನ ಇತರ ಮೂರು ಪಂದ್ಯಗಳಲ್ಲೂ ನಿರ್ಣಾಯಕ (ಸೋಲು–ಗೆಲುವು) ಫಲಿತಾಂಶ ಬರಲಿಲ್ಲ.

ಅಲಿರೇಜಾಗೆ ಬಂಪರ್‌:

ಒಂದು ಸುತ್ತು ಉಳಿದಿರುವಂತೆ ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಅವರು ಗ್ರ್ಯಾಂಡ್‌ ಚೆಸ್‌ ಟೂರ್ನಿ ಟ್ರೋಫಿ ಖಚಿತಪಡಿಸಿಕೊಂಡರು. ಅವರು ಐದು ಟೂರ್ನಿಗಳ ಸರಣಿಯುದ್ದಕ್ಕೂ ಉತ್ತಮ ಸಾಧನೆಗಾಗಿ ಸುಮಾರು ₹84 ಲಕ್ಷ ನಗದು ಬಹುಮಾನವನ್ನು ಬೋಸನ್‌ ಆಗಿ ಪಡೆದರು.

ಅವರು ಎಂಟನೇ ಸುತ್ತಿನಲ್ಲಿ ಫಿರೋಜ್‌ ಸುದೀರ್ಘ ಪಂದ್ಯವಾಡಿದರೂ 80 ನಡೆಗಳ ರಷ್ಯಾದ ಇಯಾನ್‌ ನಿಪೊಮ್‌ನಿಯಾಷಿ ಜೊತೆ ‘ಡ್ರಾ’ ಮಾಡಿಕೊಳ್ಳಬೇಕಾಯಿತು.

ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಅವರು ವಿಶ್ವ ಚಾಂಪಿಯನ್ ಡಿಂಗ್ ಲಿರೆನ್‌ (ಚೀನಾ) ಜೊತೆ ಡ್ರಾ ಮಾಡಿಕೊಂಡರೆ, ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌, ಅಮೆರಿಕದ ವೆಸ್ಲಿ ಸೊ ಜೊತೆ ಪಾಯಿಂಟ್‌ ಹಂಚಿಕೊಳ್ಳಲು ತೀರ್ಮಾನಿಸಿದರು.‌

ಅಲಿರೇಜಾ 5.5 ಪಾಯಿಂಟ್ಸ್ ಸಂಗ್ರಹಿಸಿದ್ದು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಕರುವಾನ (4.5) ಅವರಷ್ಟೇ ಅಲಿರೇಜಾ ಅವರ ಜೊತೆ ಪಾಯಿಂಟ್ಸ್‌ ಸಮಮಾಡಿಕೊಳ್ಳಲು ಅವಕಾಶವಿದೆ. ಅಲಿರೇಜಾ ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧ ಸೋತರೆ, ಕರುವಾನ ಅವರು ಡಚ್‌ ಆಟಗಾರ ಅನಿಶ್ ಗಿರಿ ವಿರುದ್ಧ ಗೆದ್ದರೆ ಮಾತ್ರ ಇದು ಸಾಧ್ಯ. ಒಂದೊಮ್ಮೆ ಸೋತರೂ ಅಲಿರೇಜಾ ಅವರ ಟೈಬ್ರೇಕ್ ಸ್ಕೋರ್ ಉತ್ತಮವಾಗಿದ್ದು ಅವರ ಅಗ್ರಸ್ಥಾನಕ್ಕೆ ಚ್ಯುತಿಯಾಗದು.

‘ಈ ಸರಣಿಯಲ್ಲಿ ಗೆಲುವು ಅತ್ಯಂತ ಕಠಿಣವಾಗಿತ್ತು. ಮಾನಸಿಕವಾಗಿ ಸಾಕಷ್ಟು ಆಯಾಸವಾಗುತ್ತದೆ. ಗ್ರ್ಯಾಂಡ್‌ ಚೆಸ್‌ ಟೂರ್‌ನಲ್ಲಿ ಗೆಲುವು ಸಾಧಿಸಿದ್ದರಿಂದ ಸಂಸತವಾಗಿದೆ’ ಎಂದು ಅಲಿರೇಜಾ ಪ್ರತಿಕ್ರಿಯಿಸಿದರು.

ಐವರು ಆಟಗಾರರು– ಗುಕೇಶ್, ಪ್ರಜ್ಞಾನಂದ, ವೇಷಿಯರ್ ಲಗ್ರಾವ್, ಸೊ ಮತ್ತು ಅಬ್ದುಸತ್ತಾರೋವ್‌ ನಾಲ್ಕು ಅಂಕ ಸಂಗ್ರಹಿಸಿದ್ದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ನಿಪೊಮ್‌ನಿಯಾಷಿ ಮತ್ತು ಲಿರೆನ್‌ (ತಲಾ 3.5) ನಂತರದ ಸ್ಥಾನದಲ್ಲಿದ್ದರೆ, ಅನಿಶ್‌ ಗಿರಿ (3) ಕೊನೆಯ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT