ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಕ್ವೆಫೀಲ್ಡ್ ಕಪ್‌ ಚೆಸ್ ಟೂರ್ನಿ: ನಿಪೊಮ್‌ನಿಷಿ ಜತೆ ‘ಡ್ರಾ’ಮಾಡಿದ ಗುಕೇಶ್‌

ಎಲ್ಲ ಐದೂ ಪಂದ್ಯ ‘ಡ್ರಾ’
Published 21 ಆಗಸ್ಟ್ 2024, 12:25 IST
Last Updated 21 ಆಗಸ್ಟ್ 2024, 12:25 IST
ಅಕ್ಷರ ಗಾತ್ರ

ಸೇಂಟ್‌ ಲೂಯಿ: ವಿಶ್ವ ಚಾಂಪಿಯನ್‌ಷಿಪ್‌ ಪಟ್ಟಕ್ಕೆ ಚಾಲೆಂಜರ್‌ ಆಗಿರುವ ಭಾರತದ ಡಿ.ಗುಕೇಶ್‌, ಸಿಂಕ್ವೆಫೀಲ್ಡ್ ಕಪ್‌ ಚೆಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ರಷ್ಯಾದ ಇಯಾನ್ ನಿಪೊಮ್‌ನಿಷಿ ಜೊತೆ ‘ಡ್ರಾ’ ಮಾಡಿಕೊಂಡರು. ಎರಡನೇ ಸುತ್ತಿನ ಎಲ್ಲ ಐದೂ ಪಂದ್ಯಗಳು ಮಂಗಳವಾರ ‘ಡ್ರಾ’ ಆದವು.

ಮೊದಲ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್ ಜೊತೆ ಸುಲಭವಾಗಿ ‘ಡ್ರಾ’ ಮಾಡಿಕೊಂಡಿದ್ದ ಗುಕೇಶ್ ಅವರಿಗೆ ಎರಡನೇ ಸುತ್ತಿನ ಪಂದ್ಯ ಭಿನ್ನರೀತಿಯದಾಗಿತ್ತು.

ಪಂದ್ಯದ ಬಹುತೇಕ ಭಾಗ ಅವರು, ರಷ್ಯಾದ ಎದುರಾಳಿ ವಿರುದ್ಧ ಕೊಂಚಮಟ್ಟಿಗೆ ಮೇಲುಗೈ ಸಾಧಿಸಿದ್ದರು. ಆದರೆ ಎರಡು ಬಾರಿ ಕ್ಯಾಂಡಿಡೇಟ್ಸ್ ಚಾಂಪಿಯನ್ ಆಗಿರುವ ನಿಪೊಮ್‌ನಿಷಿ ಸುಲಭವಾಗಿ ಬಿಟ್ಟುಕೊಡಲಿಲ್ಲ. ಕರಾರುವಾಕ್ ರಕ್ಷಣೆ ಮತ್ತು ಪ್ರತಿದಾಳಿಗಳ ಮೂಲಕ ಸೋಲುತಪ್ಪಿಸಿಕೊಂಡರು. ಪಾನ್‌ (ಕಾಲಾಳು), ನೈಟ್‌ (ಕುದುರೆ) ಎಂಡ್‌ಗೇಮ್‌ ಕಂಡ ಪಂದ್ಯ 60 ನಡೆಗಳಲ್ಲಿ ಡ್ರಾ ಆಯಿತು.

ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು, ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ ‘ಡ್ರಾ’ ಮಾಡಿಕೊಂಡರು.

ಮೊದಲ ಸುತ್ತಿನಲ್ಲಿ ಜಯಗಳಿಸಿದ್ದ ಫ್ರಾನ್ಸ್‌ನ ಅಲಿರೇಜಾ ಫಿರೋಜ್ (1.5) ಉಳಿದವರಿಗಿಂತ ಅರ್ಧ ಪಾಯಿಂಟ್‌ ಮುನ್ನಡೆ ಸಾಧಿಸಿದ್ದಾರೆ. ಎಂಟು ಆಟಗಾರರು ತಲಾ ಒಂದು ಪಾಯಿಂಟ್ಸ್‌ ಹೊಂದಿದ್ದಾರೆ. ಮೊದಲ ಸುತ್ತಿನಲ್ಲಿ ಅಲಿರೇಜಾ ಅವರಿಗೆ ಸೋತಿದ್ದ ಕರುವಾನ ಅರ್ಧ ಪಾಯಿಂಟ್ಸ್‌ ಹೊಂದಿದ್ದು ಕೊನೆಯ ಸ್ಥಾನದಲ್ಲಿದ್ದಾರೆ. ಟೂರ್ನಿಯು 9 ಸುತ್ತುಗಳನ್ನು ಹೊಂದಿದೆ.

ಇರಾನ್‌ ಮೂಲದ ಅಲಿರೇಜಾ ಎರಡನೇ ಸುತ್ತಿನಲ್ಲಿ ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಜೊತೆ ‘ಡ್ರಾ’ ಮಾಡಿಕೊಂಡರು. ಡಚ್ ಆಟಗಾರ ಅನೀಶ್ ಗಿರಿ ಕೂಡ ಚೀನಾದ ಡಿಂಗ್ ಲಿರೆನ್ ಜೊತೆ ‘ಡ್ರಾ’ ಒಪ್ಪಂದಕ್ಕೆ ಸಹಿಹಾಕಿದರು.

ಅಮೆರಿಕದ ಆಟಗಾರರ ವ್ಯವಹಾರವಾಗಿದ್ದ ದಿನದ ಇನ್ನೊಂದು ಪಂದ್ಯದಲ್ಲೂ ನಿರ್ಣಾಯಕ ಫಲಿತಾಂಶ ಬರಲಿಲ್ಲ. ವೆಸ್ಲಿ ಸೊ ಅವರು ಕರುವಾನ ಜೊತೆ ‘ಕದನ ವಿರಾಮ’ಕ್ಕೆ ಸಹಿ ಮಾಡಿದರು.

₹2.93 ಕೋಟಿ ಬಹುಮಾನ ಮೊತ್ತದ ಈ ಟೂರ್ನಿ ಗ್ರ್ಯಾಂಡ್‌ ಚೆಸ್‌ ಸರಣಿಯ ಅಂತಿಮ ಟೂರ್ನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT