ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಹಾ ಡೈಮಂಡ್‌ ಲೀಗ್‌: ನೀರಜ್‌ ಚೋಪ್ರಾ ಮೇಲೆ ಚಿತ್ತ

25 ವರ್ಷದ ಚೋಪ್ರಾ ಅವರು ‘ಡೈಮಂಡ್‌ ಲೀಗ್‌ ಚಾಂಪಿಯನ್‌’ ಆಗಿದ್ದುಕೊಂಡು ಸ್ಪರ್ಧಿಸಲಿರುವ ಮೊದಲ ಕೂಟ ಇದಾಗಿದೆ.
Published 4 ಮೇ 2023, 14:25 IST
Last Updated 4 ಮೇ 2023, 14:25 IST
ಅಕ್ಷರ ಗಾತ್ರ

ದೋಹಾ: ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಶುಕ್ರವಾರ ನಡೆಯಲಿರುವ ದೋಹಾ ಡೈಮಂಡ್‌ ಲೀಗ್‌ ಕೂಟದ ಮೂಲಕ ಸ್ಪರ್ಧಾ ಋತು ಆರಂಭಿಸಲಿದ್ದು, ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

25 ವರ್ಷದ ಚೋಪ್ರಾ ಅವರು ‘ಡೈಮಂಡ್‌ ಲೀಗ್‌ ಚಾಂಪಿಯನ್‌’ ಆಗಿದ್ದುಕೊಂಡು ಸ್ಪರ್ಧಿಸಲಿರುವ ಮೊದಲ ಕೂಟ ಇದಾಗಿದೆ. ಕಳೆದ ಋತುವಿನಲ್ಲಿ ಡೈಮಂಡ್‌ ಲೀಗ್‌ ಕೂಟದ ಫೈನಲ್‌ನಲ್ಲಿ ಅವರು ಚಿನ್ನ ಗೆದ್ದಿದ್ದರು.

2022ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದಅವರಿಗೆ ಕತಾರ್ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಅಥ್ಲೀಟ್‌ಗಳಿಂದ ಪ್ರಬಲ ಪೈಪೋಟಿ ಎದುರಾಗಲಿದೆ.

ಹಾಲಿ ವಿಶ್ವ ಚಾಂಪಿಯನ್‌ ಆಗಿರುವ ಗ್ರೆನೇಡಾದ ಆ್ಯಂಡರ್ಸನ್‌ ಪೀಟರ್ಸ್‌ ಮತ್ತು ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವದ್ಲೇಚ್ ಅವರು ಕಣದಲ್ಲಿದ್ದಾರೆ.

ಚೋಪ್ರಾ ಅವರು ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ 2018 ರಲ್ಲಿ ಮಾತ್ರ ಪಾಲ್ಗೊಂಡಿದ್ದರು. ಅಂದು 87.43 ಮೀ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಫಿಟ್‌ನೆಸ್‌ ಸಮಸ್ಯೆಯ ಕಾರಣ 2022ರ ಕೂಟದಲ್ಲಿ ಸ್ಪರ್ಧಿಸಿರಲಿಲ್ಲ.

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಕಳೆದ ವರ್ಷದ ಡೈಮಂಡ್‌ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆಯುವಾಗ ಸಾಧಿಸಿದ 89.94 ಮೀಟರ್‌ಗಳ ದೂರ, ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ನೀರಜ್‌ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 89.94 ಮೀಟರ್‌ ದೂರ ಆಗಿದೆ. ಪೀಟರ್ಸ್‌ ಮತ್ತು ವದ್ಲೇಚ್‌ ಅವರು ಕ್ರಮವಾಗಿ 93.07 ಮೀ. ಹಾಗೂ 90.88 ಮೀ. ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ವದ್ಲೇಚ್‌ ಅವರ ಸಾಧನೆ ಕಳೆದ ವರ್ಷ ಇದೇ ತಾಣದಲ್ಲಿ ಮೂಡಿಬಂದಿತ್ತು.

ಯುರೋಪಿಯನ್‌ ಚಾಂಪಿಯನ್ ಆಗಿರುವ ಜರ್ಮನಿಯ ಜೂಲಿಯನ್ ವೆಬರ್‌ (ಶ್ರೇಷ್ಠ ಸಾಧನೆ:89.54 ಮೀ), 2012ರ ಒಲಿಂಪಿಕ್‌ ಚಾಂಪಿಯನ್‌, ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ಕೆಶೊರ್ನ್‌ ವಾಲ್ಕಟ್ (90.16 ಮೀ.), ಮಾಜಿ ವಿಶ್ವ ಚಾಂಪಿಯನ್‌ ಕೆನ್ಯಾದ ಜೂಲಿಯಸ್‌ ಯೆಗೊ (92.72 ಮೀ.) ಅವರಿಂದಲೂ ಚೋಪ್ರಾಗೆ ಪೈಪೋಟಿ ಎದುರಾಗಲಿದೆ.

‘ಇದು ಈ ಋತುವಿನಲ್ಲಿ ನನ್ನ ಮೊದಲ ಸ್ಪರ್ಧೆಯಾಗಿದ್ದು, ಪ್ರಬಲ ಎದುರಾಳಿಗಳು ಇರುವುದು ಒಳ್ಳೆಯ ವಿಚಾರ’ ಎಂದು ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

'ವದ್ಲೇಚ್‌ ಈ ಋತುವಿನಲ್ಲಿ ಈಗಾಗಲೇ 88.38 ಮೀ. (ಏ.18 ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಸ್ಪರ್ಧೆ) ಸಾಧನೆ ಮಾಡಿದ್ದಾರೆ. ಆದ್ದರಿಂದ ಶುಕ್ರವಾರ ಪ್ರಬಲ ಪೈಪೋಟಿ ನಿರೀಕ್ಷಿಸುತ್ತಿದ್ದೇನೆ. 90 ಮೀ.ಗಿಂತಲೂ ಹೆಚ್ಚಿನ ಸಾಧನೆಗೆ ದೋಹಾ ಹೆಸರುವಾಸಿಯಾಗಿದೆ. ಎಲ್ಲರಿಗೂ ಇಲ್ಲಿ ಉತ್ತಮ ಫಲಿತಾಂಶದ ವಿಶ್ವಾಸವಿದೆ’ ಎಂದಿದ್ದಾರೆ.

ಈ ಋತುವಿನಲ್ಲಿ 90 ಮೀ. ದಾಟುವ ವಿಶ್ವಾಸವನ್ನು ಚೋಪ್ರಾ ಹೊಂದಿದ್ದಾರೆ. ‘ಕಳೆದ ವರ್ಷ 90 ಮೀ. ಮ್ಯಾಜಿಕಲ್‌ ಮಾರ್ಕ್‌ನಿಂದ ಕೇವಲ 6 ಸೆಂ.ಮೀ. ನಷ್ಟು ಹಿಂದೆ ಉಳಿದಿದ್ದೆ. ಈ ವರ್ಷ ಅದನ್ನು ದಾಟುವ ವಿಶ್ವಾಸವಿದೆ. ಆದರೆ ಆ ಸಾಧನೆ ಮಾಡಬೇಕೆಂಬ ಒತ್ತಡವನ್ನು ನನ್ನ ಮೇಲೆ ಹಾಕುವುದಿಲ್ಲ’ ಎಂದು ಹೇಳಿದ್ದಾರೆ.

ಟ್ರಿಪಲ್ ಜಂಪ್‌ ಸ್ಪರ್ಧೆಯಲ್ಲಿ ಎಲ್ದೋಸ್‌ ಪೌಲ್‌ ಕಣಕ್ಕಿಳಿಯಲಿದ್ದಾರೆ. ವಿಶ್ವದ ಪ್ರಮುಖ ಅಥ್ಲೀಟ್‌ಗಳು ಪಾಲ್ಗೊಳ್ಳುವ ಈ ಕೂಟದಲ್ಲಿ ಅವರು ‘ಪೋಡಿಯಂ ಫಿನಿಷ್‌’ ಮಾಡುವುದು ಕಷ್ಟ.

2023ರ ಡೈಮಂಡ್‌ ಲೀಗ್‌ ಒಟ್ಟು 13 ಕೂಟಗಳನ್ನು ಹೊಂದಿದೆ. ಸೆ. 16 ಮತ್ತು 17ರಂದು ಅಮೆರಿಕದ ಯುಜಿನ್‌ನಲ್ಲಿ ಕೊನೆಯ ಕೂಟ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT